ಆಟಿಯ ಮೌಲ್ಯ ಯುವ ಜನಾಂಗಕ್ಕೆ ಅರ್ಥೈಸುವುದು ಅವಶ್ಯ ಮಾಂಡೋವಿ ಮೋಟಾರ್ಸ್‌ ಪ್ರೈವೇಟ್ ಲಿಮಿಟೆಡ್‌ನಲ್ಲಿ ಆಟಿದ ಕೂಟದಲ್ಲಿ ದಯಾನಂದ ಕತ್ತಲ್‌ಸಾರ್

mng--23 july Atida kuta mandovi
Published on

ಮಂಗಳೂರು: ಆಟಿ ಅನಿಷ್ಟ ತಿಂಗಳಲ್ಲ. ಒಂದು ಕಾಲದಲ್ಲಿ ಅದು ಕಷ್ಟದ ದಿನವಾಗಿದ್ದರೂ ಅದು ಈ ಮಣ್ಣಿನ ಸಮೃದ್ಧಿ, ಸಂಸ್ಕೃತಿ ತೆರೆದಿಡುವ ದಿನಗಳಾಗಿದ್ದವು. ಪ್ರಸ್ತುತ ಕಾಲಮಾನದಲ್ಲಿ ಆ ದಿನಗಳ ಮೌಲ್ಯಗಳನ್ನು ತಿಳಿದುಕೊಳ್ಳುವುದರ ಜತೆ ಹೊಸತನಕ್ಕೆ ನಾವು ತೆರೆದುಕೊಳ್ಳಬೇಕಾಗಿದೆ ಎಂದು ತುಳು ಸಾಹಿತ್ಯ ಅಕಾಡೆಮಿ ನಿಕಟಪೂರ್ವ ಅಧ್ಯಕ್ಷ ದಯಾನಂದ ಜಿ.ಕತ್ತಲ್‌ಸಾರ್ ಹೇಳಿದರು.


ಮಾಂಡೋವಿ ಮೋಟಾರ್ಸ್‌ ಪ್ರೈವೇಟ್ ಲಿಮಿಟೆಡ್ ವತಿಯಿಂದ ನಗರದ ಹಂಪನಕಟ್ಟೆ ಶೋರೂಮ್‌ನಲ್ಲಿ ಭಾನುವಾರ ವಿಶೇಷ ಆಟಿದ ಕೂಟ ಉದ್ಘಾಟಿಸಿ, ಅವರು ಮಾತನಾಡಿದರು.


ಯುವ ಪೀಳಿಗೆಗೆ ಮಣ್ಣಿನ ಮಹತ್ವದ ಬಗ್ಗೆ ಮಾಹಿತಿ ಅಗತ್ಯ. ನಮ್ಮ ಹಿರಿಯರ ಜೀವನ ಪದ್ಧತಿ ಆಚಾರ ವಿಚಾರ, ಆಹಾರ ಪದ್ಧತಿ, ಕೃಷಿ ಸಂಸ್ಕೃತಿಗಳನ್ನು ವಿಸ್ತರಿಸುವ ಕಾರ್ಯಗಳು ನಡೆಯಬೇಕು. ಯುವ ಜನಾಂಗ ಈ ಬಗ್ಗೆ ವಿಶಿಷ್ಟ ಕಾಳಜಿ ವಹಿಸಿದಾಗ ಅದು ಶಾಶ್ವತವಾಗಿ ಉಳಿಯಲು ಸಾಧ್ಯವಿದೆ ಎಂದರು.


ಮಂಗಳೂರು ನಗರ ಉಪ ಆಯುಕ್ತ (ಸಂಚಾರ ಮತ್ತು ಅಪರಾಧ ವಿಭಾಗ) ದಿನೇಶ್ ಕುಮಾರ್ ಬಿ.ಪಿ. ಮುಖ್ಯ ಅತಿಥಿಯಾಗಿದ್ದರು. ಆಧುನಿಕ ಜೀವನ ಕ್ರಮದಲ್ಲಿ ಗತ ಕಾಲದ ಭವ್ಯ ಪರಂಪರೆ, ಆಚಾರ ವಿಚಾರ ನಶಿಸಿ ಹೋಗುತ್ತಿವೆ. ಭಾಷೆ, ಸಂಸ್ಕೃತಿಯ ರಕ್ಷಣೆಗೆ ಇಂತಹ ಕಾರ್ಯಕ್ರಮ ಮಹತ್ವದ್ದಾಗಿದೆ ಎಂದರು.


ಘಮ ಘಮಿಸಿದ ತಿನಿಸು: ಶುಚಿ, ರುಚಿಯಾದ ವಿಶೇಷ ತಿಂಡಿ ತಿನಿಸುಗಳು, ತಾಜಾ ಹಣ್ಣಿನ ಬಹು ಬಗೆಯ ಐಸ್‌ಕ್ರೀಂ, ಹಲಸಿನ ಹೋಳಿಗೆ ಘಮ ಘಮಿಸಿದವು. ಗೃಹ ತಯಾರಿಕೆಯ ಉತ್ಪನ್ನ, ಆಯುರ್ವೇದಿಕ್ ಉತ್ಪನ್ನಗಳನ್ನು ಒಳಗೊಂಡಿರುವ 30ಕ್ಕೂ ಅಧಿಕ ಮಳಿಗೆಗಳಿದ್ದವು.
ಕುತ್ತಾರು ತಿಮ್ಮಕ್ಕ ಮತ್ತು ಬಳಗದವರಿಂದ ಆಟಿ ಕಳೆಂಜ ಗಮನ ಸೆಳೆಯಿತು. ಸಂಗೀತ ಬಹಾರ್ ತಂಡದವರಿಂದ ಸಂಗೀತ ಕಾರ್ಯಕ್ರಮ, ಯುವವಾಹಿನಿ ಮಂಗಳೂರು ಘಟಕ ವತಿಯಿಂದ ಆಟಿಯ ಬಗ್ಗೆ ವಿಶೇಷ ಕಾರ್ಯಕ್ರಮ, ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ ಕಾಸರಗೋಡು ಇವರ ಸಂಯೋಜನೆಯಲ್ಲಿ ಸುಪ್ರಸಿದ್ದ ಕಲಾವಿದರ ಕೂಡುವಿಕೆಯಿಂದ ‘ಅಂಗಧ ಸಂಧಾನ’ ಎಂಬ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ ನಡೆಯಿತು.


ಮಾಂಡೋವಿ ಟ್ರೈನಿಂಗ್ ಆ್ಯಂಡ್ ಡೆವಲಪ್‌ಮೆಂಟ್ ಮ್ಯಾನೇಜರ್ ಡೆನ್ಜಿಲ್ ಪಿಂಟೋ, ಫೈನಾನ್ಸ್ ಮ್ಯಾನೇಜರ್ ಸುಪಾರ್ಶ್ವ ಜೈನ್ ಮೊದಲಾದವರು ಉಪಸ್ಥಿತರಿದ್ದರು.


ಮಾಂಡೋವಿ ಮೋಟಾರ್ಸ್‌ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಸೇಲ್ಸ್ ಆ್ಯಂಡ್ ಮಾರ್ಕೆಟಿಂಗ್ ವಿಭಾಗದ ಡಿಜಿಎಂ ಶಶಿಧರ ಕಾರಂತ್ ಸ್ವಾಗತಿಸಿದರು. ಟ್ರೂ ವ್ಯಾಲ್ಯು ವಿಭಾಗದ ಅಕ್ಷಯ ಜೈನ್ ವಂದಿಸಿದರು. ಅಸಿಸ್ಟೆಂಟ್ ಸೇಲ್ಸ್ ಮ್ಯಾನೇಜರ್ ಮುರಳೀಧರ ಭಾರದ್ವಾಜ್ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net