ರೋಹಿಣಿ ಸಿಂಧೂರಿ ವೇತನದಲ್ಲಿ ಹಣ ಕಡಿತಕ್ಕೆ ಎಟಿಐ ಸರ್ಕಾರಕ್ಕೆ ಪತ್ರ

images
Published on

ಮೈಸೂರು: ಜಿಲ್ಲಾಧಿಕಾರಿಯಾಗಿದ್ದಾಗ ರೋಹಿಣಿ ಸಿಂಧೂರಿ ಅವರು ಉಳಿದುಕೊಂಡಿದ್ದ ಅತಿಥಿಗೃಹದಲ್ಲಿ ಸಾಮಗ್ರಿಗಳು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಗ್ರಿಗಳ ಬೆಲೆಯ ಮೊತ್ತವನ್ನು ಅವರ ವೇತನದಲ್ಲಿ ಕಡಿತಗೊಳಿಸುವಂತೆ ಕೋರಿ ಆಡಳಿತ ತರಬೇತಿ ಸಂಸ್ಥೆ (ಎಟಿಐ) ಅಧಿಕಾರಿಗಳು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ಅತಿಥಿಗೃಹದಲ್ಲಿ ಕಾಣೆಯಾಗಿರುವ ಸಾಮಗ್ರಿಗಳ ಮೊತ್ತ 77,296 ರೂ. ಅಗಲಿದ್ದು, ಆ ಹಣವನ್ನು ರೋಹಿಣಿ ಸಿಂಧೂರಿ ಅವರ ವೇತನದಿಂದ ಕಡಿತಗೊಳಿಸಿ ಡಿಡಿ ಮೂಲಕ ಮೈಸೂರಿನ ಆಡಳಿತ ತರಬೇತಿ ಮಹಾನಿರ್ದೇಶಕರ ಸಂಸ್ಥೆ ಹೆಸರಿಗೆ ಕಳುಹಿಸುವಂತೆ ಸಂಸ್ಥೆಯ ಜಂಟಿ ನಿರ್ದೇಶಕರು, ರಾಜ್ಯ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಮುಖ್ಯ ಕಾರ್ಯದರ್ಶಿಯನ್ನು ಕೋರಿದ್ದಾರೆ.
ಜಿಲ್ಲಾಧಿಕಾರಿಯಾಗಿ ವರ್ಗವಾಗಿ ಬಂದ ನಂತರ ರೋಹಿಣಿ ಸಿಂಧೂರಿ ಅವರು 2020ರ ಅಕ್ಟೋಬರ್ 2ರಿಂದ ನವೆಂಬರ್ 14ರ ತನಕ ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯ ಆವರಣದಲ್ಲಿರುವ ಅತಿಥಿಗೃಹದಲ್ಲಿ ವಾಸ್ತವ್ಯ ಇದ್ದರು. ಅತಿಥಿಗೃಹವನ್ನು ತೆರವುಗೊಳಿಸಿದಾಗ ಅಲ್ಲಿದ್ದ ಬೆಲೆಬಾಳುವ ವಸ್ತುಗಳು ಇರಲಿಲ್ಲ ಎನ್ನಲಾಗಿದೆ.
ಟೆಲಿಫೋನ್ ಟೇಬಲ್, ಕೋಟ್ ಹ್ಯಾಂಗರ್, ಬ್ಲಾಂಕೆಟ್, ಮೈಕ್ರೋ ಒವೆನ್, ಬೆತ್ತದ ಕುರ್ಚಿಗಳು, ಹಾಸಿಗೆ, ಕಂಪ್ಯೂಟರ್ ಮೌಸ್, ಟ್ರೇ, ಯೋಗ ಮ್ಯಾಟ್, ಪ್ಲೇಟ್, ಟಿಪಾಯಿ, ಟೆಲಿಫೋನ್ ಸ್ಟೂಲ್, ರಿಸೆಪ್ಶನ್ ಟೆಲಿಫೋನ್, ಮಂಚ, ಸ್ಟೂಲ್‌ಗಳು ಸೇರಿದಂತೆ ವಿವಿಧ ಸಾಮಗ್ರಿಗಳು ನಾಪತ್ತೆಯಾಗಿವೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ವಸ್ತುಗಳು ನಾಪತ್ತೆ ಅಗಿರುವ ಸಂಬಂಧ ರೋಹಿಣಿ ಸಿಂಧೂರಿ ಅವರು ಕಾರ್ಯನಿರ್ವಹಿಸುತ್ತಿದ್ದ ಜಿಲ್ಲಾಧಿಕಾರಿ ಕಚೇರಿಗೆ ಮೂರು ಬಾರಿ ಪತ್ರ ಬರೆಯಲಾಗಿತ್ತು. ಇದಕ್ಕೆ ಜಿಲ್ಲಾಧಿಕಾರಿಗಳ ವಸತಿಗೃಹದಲ್ಲಿ ಯಾವುದೇ ಸಾಮಗ್ರಿಗಳು ಇರುವುದಿಲ್ಲ ಎಂದು ಉತ್ತರಿಸಲಾಗಿತ್ತು. ಹಾಗಾಗಿ ಈಗ ವಿಷಯ ಸರ್ಕಾರದ ಅಂಗಳ ತಲುಪಿದೆ.
ಹಿಂದು ಧಾರ್ಮಿಕ ಹಾಗೂ ಧರ್ಮಾದಾಯ ದತ್ತಿಗಳ ಇಲಾಖೆಯಲ್ಲಿ ಆಯುಕ್ತರಾಗಿದ್ದಾಗಲೂ ಸಂಸ್ಥೆಗೆ ನಷ್ಟ ಪಾವತಿಸಲು ಸೂಚಿಸಲಾಗಿತ್ತು. ಸಾಮಗ್ರಿ ನಾಪತ್ತೆ ಪ್ರಕರಣ ಸಾಕಷ್ಟು ಸುದ್ದಿಯಾಗಿತ್ತು. ಶಾಸಕ ಸಾ.ರಾ. ಮಹೇಶ್ ಅವರು ವಿಧಾನಸಭಾ ಕಲಾಪದಲ್ಲಿಯೂ ವಿಷಯ ಪ್ರಸ್ತಾಪಿಸಿದ್ದರು. ಈ ಕುರಿತು ತನಿಖೆ ನಡೆಸಿ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಸಚಿವರು ಭರವಸೆ ನೀಡಿದ್ದರು. ಇದೀಗ ನಾಪತ್ತೆಯಾಗಿರುವ ವಸ್ತುಗಳ ಮೌಲ್ಯ ವಸೂಲಿ ಮಾಡಿಕೊಡುವಂತೆ ಕೋರಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net