ಗಮನ ಸೆಳೆದ ಆಟಿ ಹದಿನೆಂಟು ವಿಶೇಷ ಕಾರ್ಯಕ್ರಮ

ಸಂಗಯನಪುರದ ಅರೆಭಾಷೆ ಗೌಡ ಸಮಾಜದ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಟ್ಯನ ಈರಪ್ಪ ಮಾತನಾಡಿದರು. ದೇವಾಯಿರ ಗಿರೀಶ್, ಅತ್ತೆಡಿ ಪೂವಯ್ಯ, ಕೀಜನ ನಾಣಯ್ಯ,  ಕುಯುಮುಡಿ ಜಯಕುಮಾರ್ ಇದ್ದರು.
ಸಂಗಯನಪುರದ ಅರೆಭಾಷೆ ಗೌಡ ಸಮಾಜದ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಟ್ಯನ ಈರಪ್ಪ ಮಾತನಾಡಿದರು. ದೇವಾಯಿರ ಗಿರೀಶ್, ಅತ್ತೆಡಿ ಪೂವಯ್ಯ, ಕೀಜನ ನಾಣಯ್ಯ, ಕುಯುಮುಡಿ ಜಯಕುಮಾರ್ ಇದ್ದರು.
Published on

ಶನಿವಾರಸಂತೆ: ಆಟಿ ಮಾಸದ ಹದಿನೆಂಟನೇ ದಿನದ ಅಂಗವಾಗಿ ಸಮಿಪದ ಆಲೂರು-ಸಿದ್ದಾಪುರ ಅರೆಭಾಷೆ ಗೌಡ ಸಮಾಜ ವತಿಯಿಂದ ಸಂಗಯನಪುರ ಗ್ರಾಮದ ಅರೆಭಾಷೆ ಗೌಡ ಸಮಾಜದ ಸಮೂದಾಯ ಭವನದಲ್ಲಿ ಆಟಿ ಹದಿನೆಂಟು ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಮಾತನಾಡಿದ ಸಮಾಜದ ಹಿರಿಯ ಅತ್ತೆಡಿ ಪೂವಯ್ಯ, ಕೊಡಗಿನ ಅರೆಭಾಷೆ ಗೌಡ ಸಮುದಾಯದವರ ಸಾಂಪ್ರದಾಯಕ ಹಬ್ಬಗಳಲ್ಲಿ ಆಟಿ ಮಾಸದ ಆಚರಣೆಯೂ ಒಂದು. ಆಟಿ ಮಾಸದ ಹದಿನೆಂಟನೆಯ ದಿನವನ್ನು ಸಾಂಪ್ರದಾಯಿಕ ಹಬ್ಬವನ್ನಾಗಿ ಆಚರಿಸುತ್ತಾರೆ ಎಂದರು.

ಆಟಿ ಮಾಸದ ಹದಿನೆಂಟರ ದಿನದಂದು ಆಟಿ ಅಥವಾ ಮದ್ದುಕುಳ ಎಂಬ ಸಸ್ಯ ಎಲೆ ಮತ್ತು ಅದರ ದಂಟಿನಲ್ಲಿ ಹದಿನೆಂಟು ಬಗೆಯ ಔಷಧ ಒಳಗೊಂಡಿರುತ್ತದೆ. ಇದು ವಿಶಿಷ್ಟ ಪರಿಮಳ ಬೀರುತ್ತದೆ. ಈ ದಿನದಂದು ಆಟಿ ಸೊಪ್ಪು ಮತ್ತು ದಂಟನ್ನು ಬೇಯಿಸಿ ಅದರ ರಸದಿಂದ ಪಾಯಸ ಮಾಡಿ ಸೇವಿಸುವುದರಿಂದ ಶರೀರದಲ್ಲಿ 18 ಬಗೆಯ ಔಷಧ ಗುಣಗಳು ಉತ್ಪತ್ತಿಯಾಗುತ್ತದೆ. ಹೀಗಾಗಿ ಆಟಿ 18ರ ದಿನವನ್ನು ಸಾಂಪ್ರದಾಯಿಕ ಹಬ್ಬವನ್ನಾಗಿ ಅನಾದಿ ಕಾಲದಿಂದಲೂ ಆಚರಣೆ ಮಾಡಲಾಗುತ್ತಿದೆ ಎಂದರು.

ಮತ್ತೊಬ್ಬ ಹಿರಿಯ ಕೀಜನ ನಾಣಯ್ಯ ಮಾತನಾಡಿ, ಅರೆಭಾಷೆ ಗೌಡ ಸಮಾಜದ ಹಿರಿಯರು ಮಾಡಿರುವ ಆಚರಣೆ, ಆಚಾರ ವಿಚಾರಗಳನ್ನು ಇಂದಿನ ಯುವ ಪೀಳಿಗೆ ಮುಂದುವರಿಸಿಕೊಂಡು ಹೋಗಬೇಕು. ಆ ಮೂಲಕ ಸಮುದಾಯದ ಭಾಷೆ, ಸಾಹಿತ್ಯ, ಸಂಸ್ಕೃತಿಯನ್ನು ಬೆಳಸಬೇಕು ಎಂದರು.

ಅರೆಭಾಷೆ ಗೌಡ ಸಮಾಜದ ಉಪಾಧ್ಯಕ್ಷ ಭಟ್ಯನ ಈರಪ್ಪ ಮಾತನಾಡಿ, ಅರೆಭಾಷೆ ಗೌಡ ಸಮುದಾಯದವರು ಮಕ್ಕಳು, ಯುವಕರಿಗೆ ಹಬ್ಬದ ಆಚರಣೆ ಕುರಿತ ಮಹತ್ವವನ್ನು ತಿಳಿಸಬೇಕು ಎಂದರು.

ಅರೆಭಾಷೆ ಗೌಡ ಸಮಾಜದ ಅಧ್ಯಕ್ಷ ದೇವಾಯಿರ ಗಿರೀಶ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ಸಮಾಜದ ಕಾರ್ಯದರ್ಶಿ ಕುಯುಮುಡಿ ಜಯಕುಮಾರ್, ಅಜರಂಗಳ ರಾಮಣ್ಣ, ಪರ್ಲಕೋಟಿ ಶೈಲಾ ಸತೀಶ್, ಪಟ್ಟಡ ಲೀಲಾಕುಮರ್ ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net