ಅಥ್ಲೆಟಿಕ್ಸ್ ಮೊದಲ ದಿನವೇ ನೂತನ ದಾಖಲೆ

18
Published on


ಮೈಸೂರು:
ರಾಜ್ಯ ಮಟ್ಟದ ಕಿರಿಯರ ಅಂತರ ಜಿಲ್ಲಾ ಮತ್ತು 23 ವರ್ಷದೊಳಗಿನ ಅಥ್ಲೆಟಿಕ್ಸ್ ಕ್ರೀಡಾಕೂಟದ ಮೊದಲ ದಿನವೇ ನೂತನ ದಾಖಲೆ ನಿರ್ಮಾಣವಾಯಿತು.

ಕರ್ನಾಟಕ ರಾಜ್ಯ ಅಥ್ಲೆಟಿಕ್ಸ್ ಸಂಸ್ಥೆ, ಮೈಸೂರು ಜಿಲ್ಲಾ ಅಥ್ಲೆಟಿಕ್ಸ್ ಸಂಸ್ಥೆ ವತಿಯಿಂದ ನಗರದ ಚಾಮುಂಡಿ ವಿಹಾರ ಕ್ರೀಡಾಂಗಣದ ಸಿಂಥೆಟಿಕ್ ಟ್ರಾೃಕ್‌ನಲ್ಲಿ ಶನಿವಾರ ಆರಂಭಗೊಂಡ ಕ್ರೀಡಾಕೂಟದ 23 ವರ್ಷದೊಳಗಿನ ಪುರುಷರ 800 ಮೀಟರ್ ಓಟವನ್ನು ಬೆಳಗಾವಿಯ ತುಷಾರ್ ವಸಂತ್ 1.49.71 ನಿಮಿಷದಲ್ಲಿ ಪೂರ್ಣಗೊಳಿಸುವ ಮೂಲಕ ಹೊಸ ದಾಖಲೆ ಬರೆದರು. ಇದರೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯ ಸಿ.ಮಿಲನ್(1.53.40 ನಿ.) 2022ರಲ್ಲಿ ನಿರ್ಮಿಸಿದ್ದ ದಾಖಲೆಯನ್ನು ಮುರಿದರು.

ಯಾದಗಿರಿಯ ಕೆ.ಲೋಕೇಶ್(1.52.02 ನಿ.) ದ್ವಿತೀಯ ಹಾಗೂ ಬೆಂಗಳೂರಿನ ಕಮಲ ಕಣ್ಣನ್ ಸುಂದರ್(1.52.46 ನಿ.) ತೃತೀಯ ಸ್ಥಾನ ಪಡೆದರು.
ಬಾಲಕರ 20 ವರ್ಷದೊಳಗಿನ 800 ಮೀ.ಓಟ: 1.ಬೆಂಗಳೂರಿನ ಜೆ.ಆರ್.ಕಲ್ಯಾಣ್(1.58.70 ನಿ.), 2.ಯಾದಗಿರಿಯ ಎಚ್.ವಿ.ಚಿಂತನ್(1.59.08 ನಿ.), 3.ದಕ್ಷಿಣ ಕನ್ನಡದ ಕಾಸಿ ಬೊಯಣ ಯಸ್ವ್ (2.00.33 ನಿ.)., ಮಹಿಳೆಯರ 23 ವರ್ಷದೊಳಗಿನ 800 ಮೀ.ಓಟ: 1.ದಕ್ಷಿಣ ಕನ್ನಡದ ದೀಪಾಶ್ರೀ(2.16.25 ನಿ.), 2. ಉಡುಪಿಯ ಪ್ರತೀಕ್ಷಾ(2.17.08 ನಿ.), 3.ದಕ್ಷಿಣ ಕನ್ನಡದ ರೇಖಾ ಬಸಪ್ಪ(2.17.72 ನಿ.)., ಬಾಲಕಿಯರ 20 ವರ್ಷದೊಳಗಿನ 800 ಮೀ.ಓಟ: 1.ಬೆಳಗಾವಿಯ ವೈಷ್ಣವಿ(2.20.89 ನಿ.), 2. ದಕ್ಷಿಣ ಕನ್ನಡದ ಪ್ರೀತಿಶಾ(2.46.27 ನಿ.) ಬಹುಮಾನ ಪಡೆದರು.

ಇದಕ್ಕೂ ಮುನ್ನ ಕ್ರೀಡಾಕೂಟವನ್ನು ಒಲಿಂಪಿಯನ್ ಎಂ.ಆರ್.ಪೂವಮ್ಮ ಉದ್ಘಾಟಿಸಿ ಮಾತನಾಡಿ, ನಾನು ಜೂನಿಯರ್ ಸ್ಪರ್ಧೆಯಲ್ಲಿ ಭಾಗಿಯಾಗಿದ್ದಾಗ ಏಷಿಯನ್, ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಬೇಕು, ಪದಕ ಗೆಲ್ಲಬೇಕು ಎಂದು ಕನಸು ಕಾಣುತ್ತಿದ್ದೆ. ಕ್ರೀಡಾಪಟುಗಳು ಕ್ರೀಡಾ ಮನೋಭಾವದಿಂದ ಕ್ರೀಡಾಕೂಟಗಳಲ್ಲಿ ಭಾಗಿಯಾಗಬೇಕು. ಎಲ್ಲರಿಗೂ ಸೋಲು-ಗೆಲುವು ಸಹಜ. ಆದರೆ, ನಿರಂತರ ಪ್ರಯತ್ನದಿಂದ ಸಾಧಿಸಬಹುದಾಗಿದೆ ಎಂದರು.

ಖ್ಯಾತ ಕ್ರೀಡಾಪಟುಗಳಾದ ನಾಗೇಂದ್ರ ಪ್ರಸಾದ್, ರೀನಾ ಜಾರ್ಜ್, ಅಂಬಿಕಾ ಕ್ರೀಡಾಜ್ಯೋತಿ ಸ್ಪೀಕರಿಸಿದರು. ಕ್ರೀಡಾಪಟು ಮಮತಾ ಎಲ್ಲರ ಪರವಾಗಿ ಪ್ರಮಾಣ ವಚನ ಸ್ಪೀಕರಿಸಿದರು. ಶಾಸಕರಾದ ತನ್ವೀರ್ ಸೇಠ್, ಗಣೇಶ್ ಪ್ರಸಾದ್, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ್ ರೆಡ್ಡಿ, ಮಾಜಿ ಶಾಸಕ ಮಂಜುನಾಥ್, ಬಿ.ಶ್ರೀಕಾಂತ್, ಸೋಮಶೇಖರ್, ರಾಜುವೇಲು ಇತರರಿದ್ದರು.
ಕ್ರೀಡಾಕೂಟದಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಿಂದ 1600 ಕ್ರೀಡಾಪಟುಗಳು ಭಾಗವಹಿಸಿದ್ದು, ಸೆ.17 ರವರೆಗೆ ವಿವಿಧ ಸ್ಪರ್ಧೆ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net