

ದಾಂಡೇಲಿ: ಕ್ರೀಡೆಯೊಂದಿಗೆ ಮಾದಕ ದ್ರವ್ಯ ತಳುಕು ಹಾಕಿಕೊಂಡಿದೆ. ಮಾದಕ ದ್ರವ್ಯ ಸೇವನೆಯಿಂದಾಗಿ ದೊಡ್ಡ ದೊಡ್ಡ ಕ್ರೀಡಾಪಟು ಕ್ರೀಡೆಯಿಂದ ಅನರ್ಹರಾಗುತ್ತಿರುವುದು ನೋವಿನ ಸಂಗತಿ ಎಂದು ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಬಿ.ಎಂ. ಪಾಟೀಲ ಹೇಳಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಕರ್ನಾಟಕ ವಿಶ್ವವಿದ್ಯಾಲಯ ಪುರುಷ ಮತ್ತು ಮಹಿಳಾ ಕುಸ್ತಿ ಪಂದ್ಯಾವಳಿ ಹಾಗೂ ವಿಶ್ವವಿದ್ಯಾಲಯದ ತಂಡದ ಆಯ್ಕೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕ್ರೀಡೆಯಲ್ಲಿ ರಾಷ್ಟ್ರಮಟ್ಟದ ಸಾಧನೆ ಮಾಡಿದವರಿಗೆ ಉತ್ತಮ ಉದ್ಯೋಗಗಳು ಮನೆ ಬಾಗಿಲಿಗೆ ಬರುತ್ತವೆ. ಕ್ರೀಡಾಪಟುಗಳು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಕವಿವಿ ಮೌಲ್ಯಮಾಪನ ಕುಲಸಚಿವ ನಿಜಲಿಂಗಪ್ಪ ಮಟ್ಟಿಹಾಳ ಮಾತನಾಡಿ, ಸಾಹಿತ್ಯ, ಸಂಸ್ಕೃತಿ, ಕಲೆಗಳಿಗಿಂತಲೂ ಕ್ರೀಡೆಗೆ ಜಗತ್ತಿನಲ್ಲಿ ಹೆಚ್ಚು ಗೌರವ ಮತ್ತು ಜನಪ್ರಿಯತೆ ಇದೆ. ಶ್ರೇಷ್ಠ ಕ್ರೀಡಾಪಟುಗಳಾದವರು ಜಗತ್ತಿನ ಗೌರವಕ್ಕೆ ಪಾತ್ರರಾಗುತ್ತಾರೆ ಎಂದರು.
ಪ್ರಾಂಶುಪಾಲ ಡಾ. ಎಂ.ಡಿ. ಒಕ್ಕುಂದ ಅಧ್ಯಕ್ಷತೆ ವಹಿಸಿದ್ದರು. ಬಸೀರ ಅಹ್ಮದ ಗಿರಿಯಾಳ, ದಾದಾಪೀರ ನದಿಮುಲ್ಲಾ, ರಫೀಕ ಖಾನ್ ಇದ್ದರು.
ಸಂಘಟನಾ ಕಾರ್ಯದರ್ಶಿ ಬಸವರಾಜ ಹೂಲಿಕಟ್ಟಿ ಸ್ವಾಗತಿಸಿದರು. ಸಂಚಾಲಕ ಮನೋಹರ ಉಡಚಂಚಿ ವಂದಿಸಿದರು. ಸುರೇಶ ವಾಲಿಕರ ನಿರೂಪಿಸಿದರು.
ಸಂಜೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ವಿಜೇತರಿಗೆ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಅನೀಲ ಪಾಟ್ನೇಕರ, ಧಾರವಾಡದ ನಿವೃತ್ತ ಕುಸ್ತಿ ತರಬೇತಿದಾರ ಶಂಕರಪ್ಪ ಬಹುಮಾನ ವಿತರಿಸಿದರು.