

ಹಿರಿಯೂರು: ಕ್ರೀಡಾಪಟುಗಳಿಗೆ ಹೆಚ್ಚಿನ ಪ್ರೋತ್ಸಾಹ, ಜತೆಗೆ ಆರ್ಥಿಕ ಶಕ್ತಿ ತುಂಬುವ ಕೆಲಸ ಕೇಂದ್ರ ಮತ್ತು ರಾಜ್ಯ ಸರ್ಕಾರ ಮಾಡಬೇಕು ಎಂದು ಮಾದಿಗ ಆದಿಜಾಂಬವ ಮಠದ ಶ್ರೀ ಷಡಕ್ಷರಮುನಿ ದೇಶಿಕೇಂದ್ರ ಸ್ವಾಮೀಜಿ ಒತ್ತಾಯಿಸಿದರು.
ಲಂಡನ್‌ನ ಬರ್ಮಿಂಗ್ ಹ್ಯಾಮನ್‌ನಲ್ಲಿ ಈಚೆಗೆ ನಡೆದ ಅಂತಾರಾಷ್ಟ್ರೀಯ ಮಹಿಳಾ ಅಂಧರ ಕ್ರಿಕೆಟ್ ಟೂನಿರ್ಯಲ್ಲಿ ಗೆಲುವು ಸಾಧಿಸಿದ ಭಾರತದ ತಂಡದ ನಾಯಕತ್ವ ವಹಿಸಿದ್ದ ಆದಿವಾಲ ಗ್ರಾಮದ ವರ್ಷಾ ಉಮಾಪತಿ ಅವರನ್ನು ಬೆಂಗಳೂರಿನ ಅವರ ನಿವಾಸದಲ್ಲಿ ಭಾನುವಾರ ಗೌರವಿಸಿ ಮಾತನಾಡಿದರು.
ಹಿರಿಯೂರು ತಾಲೂಕು ಆದಿವಾಲದ ವರ್ಷಾ ಹುಟ್ಟು ಅಂಧಳು. ಜತೆಗೆ ಕುಟುಂಬ ಆರ್ಥಿಕ ಸಂಕಷ್ಟದಲ್ಲಿದೆ. ಇಂತಹ ಸಂದರ್ಭದಲ್ಲೂ ಛಲದಿಂದ ಕ್ರೀಡಾಕೂಟದಲ್ಲಿ ತೊಡಗಿಸಿಕೊಂಡು ಭಾರತ ತಂಡದ ನಾಯಕತ್ವ ವಹಿಸಿಕೊಂಡು, ಅಂತಾರಾಷ್ಟ್ರೀಯ ಮಹಿಳಾ ಅಂಧರ ಕ್ರಿಕೆಟ್ ಪಂದ್ಯದಲ್ಲಿ ದೇಶಕ್ಕೆ ಗೆಲುವು ತಂದುಕೊಟ್ಟ ದಿಟ್ಟ ಯುವತಿ ಆಗಿದ್ದಾಳೆ ಎಂದರು.
ಇದೊಂದು ಹೆಮ್ಮೆಯ ವಿಷಯ. ಅಂಧಳು, ಆರ್ಥಿಕವಾಗಿ ಅಶಕ್ತಳು ಆಗಿರುವ ಯುವತಿಯ ಛಲ, ಸಾಧನೆ ಮತ್ತೊಬ್ಬರಿಗೆ ಸ್ಫೂರ್ತಿ ಆಗಲಿದೆ. ಇಂತಹ ಸಾಧಕಳಿಗೆ ಕೇಂದ್ರ ಮತ್ತು ಭಾರತ ಸರ್ಕಾರ ಆರ್ಥಿಕ ನೆರವು ನೀಡಬೇಕಿದೆ. ಗ್ರಾಮೀಣ ಪ್ರದೇಶದ ವರ್ಷಾಳ ಸಾಧನೆ ನಿಜಕ್ಕೂ ಅಚ್ಚರಿ ಎಂದರು.
ಭಾರತಕ್ಕೆ ಗೆಲುವು ತಂದುಕೊಟ್ಟ ತಂಡದಲ್ಲಿದ್ದ ಇತರ ರಾಜ್ಯದ ಕ್ರೀಡಾಪಟುಗಳಿಗೆ ಅಲ್ಲಿನ ಸರ್ಕಾರ ಅದ್ದೂರಿಯಾಗಿ ಬರಮಾಡಿಕೊಂಡು, ನಗದು ಜತೆಗೆ ಪುರಸ್ಕಾರ ನೀಡಿ ಗೌರವಿಸಿದೆ. ಆದರೆ, ತಂಡದ ನಾಯಕತ್ವ ವಹಿಸಿಕೊಂಡಿದ್ದ ಬಯಲುಸೀಮೆ, ಬಡತನದ ಹಿನ್ನೆಲೆಯ ವರ್ಷಾಗಳಿಗೆ ನಗದು ಇರಲಿ, ಕನಿಷ್ಠ ಸರ್ಕಾರದಿಂದ ಸ್ವಾಗತಿಸಿ, ಗೌರವ ಸಲ್ಲಿಸುವ ಕಾರ್ಯ ಮಾಡದಿರುವುದು ನೋವುಂಟು ಮಾಡಿದೆ ಎಂದು ಹೇಳಿದರು.
ಸರ್ಕಾರಕ್ಕೆ ಪತ್ರ: ವರ್ಷಾ ಮತ್ತು ತಂಡಲ್ಲಿದ್ದ ಇತರ ಸದಸ್ಯರನ್ನು ವಿಶೇಷವಾಗಿ ಗೌರವಿಸುವ ಜತೆಗೆ ಆರ್ಥಿಕ ಸಂಕಷ್ಟದಲ್ಲಿರುವ ಅವರಿಗೆ ಆರ್ಥಿಕ ನೆರವು, ಇತರ ಸೌಲಭ್ಯ ಒದಗಿಸುವಂತೆ ಮುಖ್ಯಮಂತ್ರಿ ಮತ್ತು ಕ್ರೀಡಾ ಸಚಿವರಿಗೆ ಪತ್ರ ಬರೆದು ಒತ್ತಾಯಿಸಲಾಗುವುದು. ಜತೆಗೆ ಜಿಲ್ಲೆಯ ಜನಪ್ರತಿನಿಧಿಗಳ ಮೂಲಕ ಸರ್ಕಾರಕ್ಕೆ ವಿಷಯ ತಲುಪಿಸುವ ಕೆಲಸ ಮಾಡಿ, ಸಾಧಕರಿಗೆ ಗೌರವ ಸಲ್ಲುವಂತೆ ಮಾಡಲಾಗುವುದು ಎಂದು ತಿಳಿಸಿದರು.
ಈಗಲಾದರೂ ಕರ್ನಾಟಕ ರಾಜ್ಯ ಸರ್ಕಾರ ಅಂಧ ಪ್ರತಿಭೆ ವರ್ಷಾ ಹಾಗೂ ತಂಡದಲ್ಲಿದ್ದ ಹಾವೇರಿಯ ಗಂಗವ್ವ ಹರಿಜನ, ತುಮಕೂರಿನ ದೀಪಿಕಾ ಅವರಿಗೆ ವಿದ್ಯಾರ್ಹತೆ ಅನುಸಾರ ಉದ್ಯೋಗ, ತಲಾ 25 ಲಕ್ಷ ರೂ. ನಗದು ಪುರಸ್ಕಾರ, ಬೆಂಗಳೂರಿನಲ್ಲಿ ಉಚಿತ ಮನೆ ನೀಡಬೇಕೆಂದು ಒತ್ತಾಯಿಸಿದರು.
ಆಗಸ್ಟ್ 20ರಿಂದ 26 ರವರೆಗೆ ಬಮಿರ್ಂಗ್ ಹ್ಯಾಮ್‌ನಲ್ಲಿ ನಡೆದ ಮಹಿಳಾ ಅಂಧರ ಕ್ರಿಕೆಟ್ ಟೂರ್ನಿಯಲ್ಲಿ ಬೆಂಗಳೂರಿನ ಸಮರ್ಥನಂ ಸಂಸ್ಥೆಯ ಮೂಲಕ ಪಾಲ್ಗೊಂಡಿದ್ದ ಭಾರತ ತಂಡವು, ಆಸ್ಟ್ರೇಲಿಯದ ವಿರುದ್ಧ ಜಯಗಳಿಸಿತ್ತು. ಚಿತ್ರದುರ್ಗ ಜಿಲ್ಲೆಯ ವರ್ಷಾ ತಂಡದ ನಾಯಕಿಯಾಗಿದ್ದಳು.