

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪುರಾತನ 114ನೇ ವರ್ಷದ ಅತ್ತಾವರ ಮೊಸರು ಕುಡಿಕೆ ಉತ್ಸವ ವಿಜೃಂಭಣೆಯಿಂದ ಜರುಗಿತು. ಸಾರ್ವಜನಿಕ ಶ್ರೀಕೃಷ್ಣ ಜಯಂತ್ಯುತ್ಸವ ಸಮಿತಿ ವತಿಯಿಂದ ನಡೆದ ಈ ಉತ್ಸವದ ಭಾಗವಾಗಿ ಮೊಸರು ಕುಡಿಕೆ ಕಟ್ಟೆಯ ವೇದಿಕೆಯಲ್ಲಿ ಜರುಗಿದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರಾವಳಿ ಸಮೂಹ ವಿದ್ಯಾ ಸಂಸ್ಥೆಗಳ ಸ್ಥಾಪಕ ಅಧ್ಯಕ್ಷ ಎಸ್.ಗಣೇಶ್‌ರಾವ್ ವಹಿಸಿದ್ದರು.
ಶಾಸಕ ಡಿ.ವೇದವ್ಯಾಸ ಕಾಮತ್, ಉದ್ಯಮಿ ಆರೂರು ಪ್ರಶಾಂತ್ ರಾವ್, ಎ.ಜೆ.ಮೆಡಿಕಲ್ ಕಾಲೇಜ್‌ನ ಅಸಿಸ್ಟೆಂಟ್ ಪ್ರೊಫೆಸರ್ ಡಾ. ಕಿಶನ್ ರಾವ್ ಬಾಳಿಲ, ಉದ್ಯಮಿ ಕೆ. ಉಮೇಶ್ ಸಾಲಿಯಾನ್, ಪಾಲಿಕೆ ಸದಸ್ಯ ಎ.ಸಿ.ವಿನಯರಾಜ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು.
ಉತ್ಸವ ಸಮಿತಿಯ ಅಧ್ಯಕ್ಷ ಎ. ಸುರೇಶ್ ಬಾಬು ಪ್ರಸ್ತಾವನೆಗೈದರು. ಉಪಾಧ್ಯಕ್ಷ ಚಂದ್ರನಾಥ್ ಅತ್ತಾವರ ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ಪ್ರಶಾಂತ್‌ರಾಮ್ ಕೊಟ್ಟಾರಿ ಸ್ಪರ್ಧಾ ವಿಜೇತರ ವಿವರ ನೀಡಿದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ಶರತ್ ಕುಮಾರ್ ಅತ್ತಾವರ ವಂದಿಸಿದರು. ದಿನೇಶ್ ಅಂಚನ್ ಕಾರ್ಯಕ್ರಮ ನಿರೂಪಿಸಿದರು.
ಮುದ್ದುಕೃಷ್ಣ ಮತ್ತು ಕ್ರೀಡಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಮಹಿ ಎಸ್ ಶೆಟ್ಟಿ ಮತ್ತು ಮಯೂರಿ ಎಸ್. ಶೆಟ್ಟಿ ಅವರಿಂದ ಯಕ್ಷಗಾನ ಹೆಜ್ಜೆಯ ರಾಧಾ ಕೃಷ್ಣ ನೃತ್ಯ , ನಮ್ಮ ಕಲಾವಿದೆರ್ ಬೆದ್ರ ತಂಡದವರಿಂದ ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮಗಳು ಪ್ರದರ್ಶಿಸಲ್ಪಟ್ಟಿತು.
ಧಾರ್ಮಿಕ ಕಾರ್ಯಕ್ರಮ:
ಉತ್ಸವದ ಅಂಗವಾಗಿ ಬೆಳಗ್ಗೆ ಶ್ರೀ ವೈದ್ಯನಾಥ ಕ್ಷೇತ್ರದ ಕೃಷ್ಣ ಗುಡಿಯಿಂದ ಹೊರಟ ಶ್ರೀ ಕೃಷ್ಣನ ಉತ್ಸವ ಮೂರ್ತಿಯು ವರ್ಷದಂತೆ ಸ್ಥಳೀಯ ಶ್ರೀ ಉಮಾ ಮಹೇಶ್ವರ ಕ್ಷೇತ್ರಕ್ಕೆ ತಲುಪಿ ಅಲ್ಲಿ ವಿಧಿವತ್ತಾದ ಪೂಜೆ ಪಡೆಯಿತು. ಬಳಿಕ ಸಂಜೆಯ ವೇಳೆಗೆ ನಂದಿಗುಡ್ಡಾ ವೃತ್ತದಿಂದ ವಿವಿಧ ಸಂಘ ಸಂಸ್ಥೆಗಳ ದೃಶ್ಯಾವಳಿ, ಹುಲಿವೇಷ ಹಾಗೂ ಓಕುಳಿಯಾಟದೊಂದಿಗೆ ಶ್ರೀ ಕೃಷ್ಣನ ಶೋಭಾಯಾತ್ರೆಯು ಹೊರಟು ಮೊಸರು ಕುಡಿಕೆ ಕಟ್ಟೆಯನ್ನು ತಲುಪಿತು. ಶೋಭಾಯಾತ್ರೆಯಲ್ಲಿ ಭಾಗವಹಿಸಿದ ಎಲ್ಲಾ ತಂಡಗಳ ಪ್ರದರ್ಶನವು ವೇದಿಕೆಯಲ್ಲಿ ನಡೆದ ಬಳಿಕ ಉತ್ಸವ ಮೂರ್ತಿಗೆ ಎ. ಸುರೇಶ್ ಬಾಬು ಅವರು ಮಂಗಳ ಪೂಜೆ ನೆರವೇರಿಸುವುದರೊಂದಿಗೆ ಉತ್ಸವ ಸಮಾಪನಗೊಂಡಿತು.
ಫೋಟೋ
ಎಂಎನ್‌ಜಿ- ಎಸ್‌ಇಪಿ 9- ಅತ್ತಾವರ ಮೊಸರು ಕುಡಿಕೆ
114ನೇ ವರ್ಷದ ಅತ್ತಾವರ ಮೊಸರು ಕುಡಿಕೆ ಉತ್ಸವ ಅಂಗವಾಗಿ ಸ್ಥಳೀಯ ಮೊಸರು ಕುಡಿಕೆ ಕಟ್ಟೆಯ ವೇದಿಕೆಯಲ್ಲಿ ಜರುಗಿದ ಸಭಾ ಕಾರ್ಯಕ್ರಮದಲ್ಲಿ ಕರಾವಳಿ ಸಮೂಹ ವಿದ್ಯಾ ಸಂಸ್ಥೆಗಳ ಸ್ಥಾಪಕ ಅಧ್ಯಕ್ಷ ಎಸ್.ಗಣೇಶ್‌ರಾವ್ ವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಾಸಕ ಡಿ.ವೇದವ್ಯಾಸ ಕಾಮತ್, ಉದ್ಯಮಿ ಆರೂರು ಪ್ರಶಾಂತ್ ರಾವ್, ಎ.ಜೆ.ಮೆಡಿಕಲ್ ಕಾಲೇಜ್‌ನ ಅಸಿಸ್ಟೆಂಟ್ ಪ್ರೊಫೆಸರ್ ಡಾ. ಕಿಶನ್ ರಾವ್ ಬಾಳಿಲ, ಉದ್ಯಮಿ ಕೆ. ಉಮೇಶ್ ಸಾಲಿಯಾನ್, ಪಾಲಿಕೆ ಸದಸ್ಯ ಎ.ಸಿ.ವಿನಯರಾಜ್ ಮುಂತಾದವರು ಉಪಸ್ಥಿತರಿದ್ದರು.