

ಕೊಕಟನೂರ: ಅಥಣಿ ತಾಲೂಕಿನ ಕೊಕಟನೂರ ಗ್ರಾಮದ ಮಹಿಳೆಯೋರ್ವಳಿಗೆ ಮಹಾಮಾರಿ ಕೋವಿಡ್-19 ದೃಢಪಟ್ಟಿದೆ ಎಂಬ ಸುದ್ದಿ ಹಬ್ಬುತ್ತಿದ್ದಂತೆ ತಾಲೂಕಿನ ಹಲವು ಗ್ರಾಮಗಳ ಜನರಲ್ಲಿ ಭಯದ ವಾತಾವರಣ ಮೂಡಿದೆ.
ಕೊಕಟನೂರ ಗ್ರಾಮದ ಮಹಿಳೆ ಅಜ್ಮೀರ್ ಪ್ರವಾಸ ಮುಗಿಸಿ ಬರುತ್ತಿದ್ದ ವೇಳೆ ಇತ್ತೀಚೆಗೆ ನಿಪ್ಪಾಣಿ ಗಡಿಯಲ್ಲಿ ಪೊಲೀಸರು ತಡೆದು ಹೋಂ ಕ್ವಾರಂಟೈನ್ ಮಾಡಿದ್ದರು. ತಪಾಸಣೆ ಬಳಿಕ ಇವಳಲ್ಲಿ ಕರೊನಾ ವೈರಸ್ ದೃಢಪಟ್ಟಿದೆ. ಅಥಣಿ ತಾಲೂಕಿನ ಮೊದಲ ಪಿ-833 ನಂಬರಿನ ಕರೊನಾ ವೈರಸ್ ದೃಢಪಟ್ಟ ಈ ಮಹಿಳೆ ಗ್ರಾಮಕ್ಕೆ ಆಗಮಿಸಿಲ್ಲ.
ಈಗ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ, ಈ ವಿಷಯ ಗೊತ್ತಾಗುತ್ತಿದ್ದಂತೆ ಯಲ್ಲಮ್ಮನವಾಡಿ, ಕೊಕಟನೂರ, ಸುಟ್ಟಟ್ಟಿ, ಝುಂಜರವಾರ, ಬಾಡಗಿ, ಕೊಡಗಾನೂರ ಸೇರಿ ಸುತ್ತಲಿನ ಹಲವು ಗ್ರಾಮಗಳ ಜನರು ಭಯ ಭೀತರಾಗಿದ್ದಾರೆ.
ಇನ್ನು ಪಕ್ಕದ ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಯ ಕೊಕಟನೂರ ಗ್ರಾಮದ ಗಡಿಗೆ ಹೊಂದಿಕೊಂಡಿರುವ ತುಂಗಳ, ಸಾವಳಗಿ, ತುಬಚಿ ಸೇರಿ ಹಲವು ಗ್ರಾಮಗಳ ಜನರೂ ಭಯಭೀತರಾಗಿ ಅಥಣಿ-ಸಾವಳಗಿ ಮಾರ್ಗವಾಗಿ ಬಾಗಲಕೋಟೆ ಮತ್ತು ವಿಜಯಪುರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಮಧ್ಯೆ ಸೋಮವಾರ ರಾತ್ರಿ ಗುಂಡಿ ತೆಗೆದು ಸಂಚಾರ್ ಬಂದ್ ಮಾಡಿದ್ದಾರೆ. ಇದರಿಂದ ತಾಲೂಕಿನ 5 ಸಕ್ಕರೆ ಕಾರ್ಖಾನೆಗಳ ಕಚ್ಚಾ ವಸ್ತು ಹಾಗೂ ಸಕ್ಕರೆ ಉತ್ಪಾದನೆ ಸಾಗಣೆ ಮೇಲೆ ಪರಿಣಾಮ ಬೀರಿದೆ.
ಈ ರಸ್ತೆ ಅಕ್ಕ ಪಕ್ಕದ ಗ್ರಾಮಗಳ ಜನರು ಅನಾರೋಗ್ಯಕ್ಕೊಳಗಾದರೆ ಅವರನ್ನು ಆಸ್ಪತ್ರೆಗೆ ಒಯ್ಯಲು ಸಮಸ್ಯೆಯಾಗಿದೆ. ತಾಲೂಕಾಡಳಿತ ಕೊಕಟನೂರ ಹಾಗೂ ಯಲ್ಲಮ್ಮನವಾಡಿ ಗ್ರಾಮಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸಿದೆ. ಆರೋಗ್ಯ ಇಲಾಖೆ ಸಿಬ್ಬಂದಿ ಹೊರಗಡೆಯಿಂದ ಬಂದವರ ಹಾಗೂ ಸೋಂಕಿತ ಮಹಿಳೆ ಸಂಚಾರ ಕುರಿತು ವಿವರವಾದ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.