

ಅಥಣಿ: ಇಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ಜ.23ರಂದು ಬಾಣಂತಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ರಾಜ್ಯ ಮಾನವ ಹಕ್ಕು ಆಯೋಗದ ನ್ಯಾಯಾಂಗ ಸದಸ್ಯ ಎಸ್.ಕೆ.ವಂಟಿಗೂಡಿ ಸೋಮವಾರ ಆಸ್ಪತ್ರೆಗೆ ಭೇಟಿ ನೀಡಿ ವಿವಿಧ ವಿಭಾಗ, ದಾಖಲೆ, ವೈದ್ಯಕೀಯ ಪರಿಕರ ಹಾಗೂ ರೋಗಿಗಳ ವ್ಯವಸ್ಥೆ ಕುರಿತು ಪರಿಶೀಲಿಸಿದರು.
ಬಳಿಕ ಮಾತನಾಡಿ, ಗರ್ಭಿಣಿ ಮುತ್ತವ್ವ ಗೊಳಸಂಗಿ (21) ಹೆರಿಗೆ ಸಮಯದಲ್ಲಿ ರಕ್ತದ ಒತ್ತಡ ಹಾಗೂ ತೀವ್ರ ರಕ್ತಸ್ರಾವ ಹಿನ್ನೆಲೆಯಲ್ಲಿ ಚಿಕಿತ್ಸೆ ಲಕಾರಿಯಾಗದೆ ಸಾವನ್ನಪ್ಪಿದ್ದಾಳೆ. ಗರ್ಭಿಣಿ ಸಾವಿನಲ್ಲಿ ವೈದ್ಯರ ನಿರ್ಲಕ್ಷ್ಯ ಕಾಣುತ್ತಿಲ್ಲ. ಬಾಣಂತಿ ದೇಹದಲ್ಲಿ ಬಿಪಿ ವ್ಯತ್ಯಾಸವಾಗಿದ್ದರಿಂದ ವೈದ್ಯರು ಖಾಸಗಿ ಆಸ್ಪತ್ರೆಗೂ ದಾಖಲಿಸಿದ್ದಾರೆ.
ಆದರೂ, ಗರ್ಭಿಣಿ ಸಾವನ್ನಪ್ಪಿದ್ದಾಳೆ. ಮೇಲ್ನೋಟಕ್ಕೆ ವೈದ್ಯರ ನಿರ್ಲಕ್ಷ್ಯ ಕಾಣುತ್ತಿಲ್ಲ. ವರದಿಗಳು ಬರಬೇಕಿದ್ದು ಅವುಗಳನ್ನು ಆಧರಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದರು. ಆಸ್ಪತ್ರೆಗೆ ನಿತ್ಯ 800ರಿಂದ 1200 ರೋಗಿಗಳು ಬರುತ್ತಾರೆ. ಇವರಿಗೆ ಕುಡಿಯುವ ನೀರು, ಶೌಚಗೃಹ, ಆಸನ ವ್ಯವಸ್ಥೆ ಹಾಗೂ ತಜ್ಞ ವೈದ್ಯರ ಖಾಲಿ ಹುದ್ದೆ ನೇಮಕ ಮಾಡಿಕೊಳ್ಳಲು ಕ್ರಮವಹಿಸಬೇಕು ಎಂದು ಸೂಚನೆ ನೀಡಿದರು.
ತಹಸೀಲ್ದಾರ್ ಸಿದರಾಯ ಬೋಸಗಿ, ಚಿಕ್ಕೋಡಿ ಅಪರ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶರಣಪ್ಪ ಗಡಾದ, ತಾಲೂಕು ವೈದ್ಯಾಧಿಕಾರಿ ಡಾ.ಬಸಗೌಡ ಕಾಗೆ, ಸಿಪಿಐ ಸಂತೋಷ ಹಳ್ಳೂರ, ಪಿಎಸ್‌ಐ ಗಿರಿಮಲ್ಲಪ್ಪ ಉಪ್ಪಾರ, ಅಡವಯ್ಯ ಹಿರೇಮಠ ಇತರರು ಇದ್ದರು.