ಇಂಡಿಯಲ್ಲಿ ಆಟವಿ ಖತಾಲ ಆಚರಣೆ

Atavi Khatala celebration in Indy
ಇಂಡಿ ಪಟ್ಟಣದ ಹುಸೇನ ಬಾಷಾ ದೇವಸ್ಥಾನದಲ್ಲಿ ದರ್ಶನಕ್ಕೆ ನಿಂತಿದ್ದ ಭಕ್ತರು.
Published on

ಇಂಡಿ: ಪಟ್ಟಣದ ಹುಸೇನ ಬಾಷಾ ದೇವಸ್ಥಾನದಲ್ಲಿ ಸೋಮವಾರ ಆಟವಿ ಖತಾಲ ಆಚರಿಸಲಾಯಿತು.
ಜಾತ್ರೆ ನಿಮಿತ್ಯ ಇಂಡಿ ಸೇರಿದಂತೆ ಕಲಬುರಗಿ, ವಿಜಯಪುರ, ಸೋಲಾಪುರ, ಪುನಾ, ಮುಂಬಯಿ ಮತ್ತು ಮಹಾರಾಷ್ಟ್ರ ಆಂಧ್ರದಿಂದ ಅಂದಾಜು 15 ಸಾವಿರಕ್ಕೂ ಹೆಚ್ಚು ಭಕ್ತರು ಆಗಮಿಸಿ ಹರಕೆ ತೀರಿಸಿದರು.

ಹುಸೇನರು ಮಕ್ಕಾ ಮದೀನಾದ ಕರಬಲಾ ಮೈದಾನದಲ್ಲಿ ಹುತಾತ್ಮರಾದ ನಿಮಿತ್ತ ಆಟವಿ ಖತಾಲ ಆಚರಿಸುವುದು ಇಂಡಿಯ ಮೊಹರಂ ವಿಶೇಷತೆಯಾಗಿದೆ. ಬೆಳಗ್ಗೆಯಿಂದ ಭಕ್ತರು ದರ್ಶನ ಮಾಡುವ ಜತೆಗೆ ನೈವೇದ್ಯ ಅರ್ಪಣೆ ಮಾಡಿದರು. ಇಂಡಿಯ ದಾದಾಗೌಡರ ಮನೆ, ನಾಡಗೌಡ, ದೇಶಪಾಂಡೆ ಸೇರಿದಂತೆ ಅನೇಕ ಗಣ್ಯರ ಮನೆಯಿಂದ ನೈವೇದ್ಯವನ್ನು ಮೆರವಣೆಗೆಯಲ್ಲಿ ತಂದು ಸಲ್ಲಿಸಲಾಯಿತು.

ಕರಬಲ್, ಭಡಂಗ ಕುಣಿತ, ಡೊಳ್ಳು, ಹುಲಿಕುಣಿತ ಸೇರಿದಂತೆ ತಾಷಾ, ಬೆಂಡ ಒಳಗೊಂಡ ಕಾರ್ಯಕ್ರಮಗಳು ದೇವಸ್ಥಾನದ ಆವರಣದಲ್ಲಿ ನಡೆದವು. ದರ್ಶನದ ಗದ್ದಲ ನಿಮಿತ್ತ ಅರ್ಧ ಕಿ.ಮೀ. ವರೆಗೂ ಸರದಿ ಇತ್ತು.

ಸಿಪಿಐ ರತನಕುಮಾರ ಜಿರಗಿಹಾಳ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಮಾಡಿದ ನಿಮಿತ್ತ ಶಾಂತಿಯುತವಾಗಿ ಭಕ್ತರು ದರ್ಶನ ಪಡೆದರು. ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಹಂಗರಗಿ ನೇತೃತ್ವದಲ್ಲಿ ಕುಡಿಯುವ ನೀರು ಮತ್ತು ಸ್ವಚ್ಛತೆಯ ವ್ಯವಸ್ಥೆ ಮಾಡಲಾಗಿತ್ತು.

ಮಹಾರಾಷ್ಟ್ರ ಮತ್ತು ಆಂಧ್ರದಿಂದ ಬಂದ ಭಕ್ತರಿಗೆ ದೇವಸ್ಥಾನದ ಆವರಣ ಮತ್ತು ಹಲವಾರು ಕಡೆ ವಸತಿ ವ್ಯವಸ್ಥೆ ಮಾಡಲಾಗಿತ್ತು. ಪುರಸಭೆ ಸದಸ್ಯ ಭೀಮನಗೌಡ ಪಾಟೀಲ, ಬಿಜೆಪಿ ಧುರೀಣ ಕಾಸುಗೌಡ ಬಿರಾದಾರ ಸೇರಿದಂತೆ ಅನೇಕ ಗಣ್ಯರು ಸರದಿಯಲ್ಲಿ ನಿಂತು ದರ್ಶನ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net