

ಗಜೇಂದ್ರಗಡ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಅಧಿಕಾರ ಅವಧಿ ಅಭಿವೃದ್ಧಿಯ ಪರ್ವವಾದರೆ, ಪ್ರಧಾನಿ ನರೇಂದ್ರ ಮೋದಿ ಅವರದ್ದು ಪರಿವರ್ತನೆಯ ಪರ್ವ ಎಂದು ಬಿಜೆಪಿ ನಗರ ಘಟಕದ ಅಧ್ಯಕ್ಷ ರಾಜೇಂದ್ರ ಘೊರ್ಪಡೆ ಹೇಳಿದರು.
ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಬುಧವಾರ ಆಯೋಜಿಸಿದ್ದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ವಾಜಪೇಯಿ ಅವರು ದೇಶದ 4 ದಿಕ್ಕುಗಳನ್ನು ಬೆಸೆಯುವ ಚತುಷ್ಪಥ ಹೆದ್ದಾರಿ ಯೋಜನೆಗಳನ್ನು ಜಾರಿಗೆ ತಂದರು. ಸರ್ವಶಿಕ್ಷಾ ಅಭಿಯಾನ, ಪ್ರಧಾನಿ ಗ್ರಾಮ ಸಡಕ್ ಯೋಜನೆ, ಸ್ವಜಲಧಾರಾ ಯೋಜನೆಗಳು ಸೇರಿದಂತೆ ಮೊಟ್ಟ ಮೊದಲ ಬಾರಿಗೆ ವಿಮಾನಯಾನ ಸಂಪರ್ಕ, ಟೆಲಿಗ್ರಾಂ ಸಂಪರ್ಕದಲ್ಲಿ ಕ್ರಾಂತಿಯಾಯಿತು’ ಎಂದರು.
ಬಿಜೆಪಿ ರೋಣ ಮಂಡಲ ಯುವ ಮೋರ್ಚಾ ಅಧ್ಯಕ್ಷ ಉಮೆಶ ಚನ್ನುಪಾಟೀಲ ಮಾತನಾಡಿ, ವಾಜಪೇಯಿ ಪ್ರಧಾನಿಯಾಗಿ ಅಭಿವೃದ್ದಿಯ ಕೀರ್ತಿ ಪತಾಕೆಯನ್ನು ವಿಶ್ವಕ್ಕೆ ವಿಸ್ತರಿಸುವ ಗುರಿ ಹೊಂದಿದ್ದರು. ದೇಶದ ಜನರಷ್ಟೆ ಅಲ್ಲದೆ, ಹಲವು ರಾಷ್ಟ್ರಗಳು ಅವರ ಯೋಜನೆಗಳನ್ನು ಇಂದಿಗೂ ಸ್ಮರಿಸುತ್ತಾರೆ ಎಂದರು.
ವೀರಪ್ಪ ಪಟ್ಟಣಶೆಟ್ಟಿ, ಅಂದಪ್ಪ ಅಂಗಡಿ, ಮಹಾಮತೇಶ ಪೂಜಾರ, ರಾಜು ಘೊರ್ಪಡೆ, ಶಿವಕುಮಾರ ದಡ್ಡೂರು, ಕಳಕೇಶ ಸೂಡಿ, ಬಸವರಾಜ ಕಡಬಲಕಟ್ಟಿ, ಉಮೆಶ ಅಡ್ನೂರು ಇತರರು ಇದ್ದರು.