ಬಾಕಿ ವೇತನ ಪಾವತಿಸುವಂತೆ ಒತ್ತಾಯ: ಅಟಲ್ ಜೀ ಜನಸ್ನೇಹಿ ಕೇಂದ್ರ ಆಪರೇಟರ್‌ಗಳ ಪ್ರತಿಭಟನೆ

Atal Jee Janasnehi Kendra Operators protest Mandya
Published on

ಮಂಡ್ಯ: ಹಲವು ತಿಂಗಳಿಂದ ಬಾಕಿ ಉಳಿಸಿಕೊಂಡಿರುವ ವೇತನ ಪಾವತಿಸುವಂತೆ ಒತ್ತಾಯಿಸಿ ನಾಡಕಚೇರಿಯ ಅಟಲ್ ಜೀ ಜನಸ್ನೇಹಿ ಕೇಂದ್ರ ಆಪರೇಟರ್‌ಗಳು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು. ವೇತನ ನೀಡದ ಹಿನ್ನೆಲೆಯಲ್ಲಿ ಜೀವನ ನಿರ್ವಹಣೆ ಕಷ್ಟಕರವಾಗಿತ್ತು. ಜಿಲ್ಲಾಡಳಿತದ ಗಮನಕ್ಕೆ ತಂದಾಗ ಅನುದಾನ ಬಿಡುಗಡೆಯಾಗದೆ ಇರುವ ವಿಚಾರ ತಿಳಿದು ಕಳೆದ ತಿಂಗಳು ಅಟಲ್ ಜೀ ಜನಸ್ನೇಹಿ ನಿರ್ದೇಶನಾಲಯಕ್ಕೆ ತೆರಳಿ ನಿರ್ದೇಶಕರನ್ನು ಭೇಟಿ ಮಾಡಿ ಮನವಿ ಮಾಡಿದರು. ಇದರಿಂದಾಗಿ ಏಪ್ರಿಲ್, ಮೇ ಮತ್ತು ಜೂನ್‌ತಿಂಗಳ ಅನುದಾನವನ್ನು ಬಿಡುಗಡೆ ಮಾಡಿದ್ದರು. ಈ ಬಗ್ಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿಚಾರಿಸಿದಾಗ ವಿಷಯ ನಿರ್ವಾಹಕಿ ಅಟಲ್ ಜೀ ಜನಸ್ನೇಹಿ ಕೇಂದ್ರದಿಂದ ಪತ್ರ ಮಾತ್ರ ಬಂದಿದ್ದು, ಹಣ ಜಮಾ ಆಗಿಲ್ಲವೆಂದು ಸುಳ್ಳು ಹೇಳಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಬಗ್ಗೆ ಪರಿಶೀಲಿಸಿದಾಗ ಹಣ ಜಮಾವಾಗಿರುವುದು ಕಂಡುಬಂದಿದ್ದು, ಜಿಲ್ಲಾಧಿಕಾರಿ ಅನುಮೋದನೆ ಬಾಕಿ ಇದೆ ಅನುಮೋದನೆ ನಂತರ ಎರಡು ಮೂರು ದಿನದಲ್ಲಿ ಏಜೆನ್ಸಿಯವರಿಗೆ ಹಣ ಪಾವತಿ ಮಾಡಿ ಆಪರೇಟರ್‌ಗಳಿಗೆ ವೇತನ ಜಮಾ ಮಾಡಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ ಇದುವರೆಗೆ ಕಂಪನಿಯವರಿಗೆ ಹಣ ಸಂದಾಯವಾಗಿರುವುದಿಲ್ಲ. ಇದರಿಂದ ಬಾಕಿ ವೇತನ ಪಾವತಿಯಾಗದೆ ಸಿಬ್ಬಂದಿ ಜೀವನ ನಿರ್ವಹಣೆ ಕಷ್ಟಕರವಾಗಿದೆ. ಈ ಕೂಡಲೇ ಸಂಬಳದ ಅನುದಾನವನ್ನು ಅನುಮೋದನೆಗೊಳಿಸಿ ಬಾಕಿ ವೇತನ ಪಾವತಿಸಲು ಜಿಲ್ಲಾಡಳಿತ ಮುಂದಾಗಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಎಚ್.ಎನ್.ಶೋಭಾ, ಮಹೇಶ್, ಗಣೇಶ್, ರೂಪಾ, ಜಗದೀಶ, ಹೇಮಂತ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net