

ಮಂಡ್ಯ: ಅಟಲ್ ಜೀ ಜನಸ್ನೇಹಿ ಕೇಂದ್ರ ಯೋಜನೆಯಡಿ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಿರುವ ಮೂಲಕ ರಾಜ್ಯದಲ್ಲಿಯೇ ಮಂಡ್ಯ ಜಿಲ್ಲೆ ಪ್ರಥಮ ಸ್ಥಾನ ಪಡೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಎಸ್.ಅಶ್ವಥಿ ಅವರಿಗೆ ಅಟಲ್ ಜೀ ಜನಸ್ನೇಹಿ ನಿರ್ದೇಶನಾಲಯದ ನಿರ್ದೇಶಕಿ ಗಂಗೂಬಾಯಿ ಮಾನಕರ್ ಅಭಿನಂದನಾ ಪತ್ರ ನೀಡಿದ್ದಾರೆ.
ವಿವಿಧ ಪ್ರಮಾಣ ಪತ್ರಗಳ ಸೇವೆಯನ್ನು ನೀಡಲು ಜಿಲ್ಲೆಯ ನಾಡಕಚೇರಿಗಳಲ್ಲಿ ಜುಲೈನಲ್ಲಿ ಸ್ವೀಕರಿಸಲಾಗಿರುವ 25,763 ಅರ್ಜಿಯನ್ನು ನಿಗದಿತ ಅವಧಿಗಿಂತ ಮೊದಲೇ ಶೇ.99.95ರಷ್ಟು ವಿಲೇವಾರಿ ಮಾಡಿ 6.66 ಮೌಲ್ಯವನ್ನು ಪಡೆದುಕೊಂಡಿದೆ. ಇದರೊಂದಿಗೆ ಜಿಲ್ಲೆಯು ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿದೆ. 10.5 ವಿಲೇವಾರಿ ಸೂಚ್ಯಂಕದ ಪ್ರಕಾರ ಜಿಲ್ಲೆಯಲ್ಲಿ 11.5 ಪಟ್ಟು ನಿಗದಿತ ಅವಧಿಗಿಂತ ಅರ್ಜಿಗಳನ್ನು ಶೀಘ್ರವಾಗಿ ವಿಲೇವಾರಿ ಮಾಡಿದೆ. ಜಿಲ್ಲೆಯ ಕಾರ್ಯ ಸಾಧನೆಗೆ ಜಿಲ್ಲಾಧಿಕಾರಿಗಳ ಕಚೇರಿ, ನಾಡಕಚೇರಿ, ಅಟಲ್‌ಜೀ ಜನಸ್ನೇಹಿ ಕೇಂದ್ರದ ಅಧಿಕಾರಿ, ಸಿಬ್ಬಂದಿ ವರ್ಗದ ಸಹಕಾರ, ಕಾರ್ಯತತ್ಪರತೆ ಕಾರಣವಾಗಿದೆ. ಮುಂದಿನ ದಿನಗಳಲ್ಲಿಯೂ ಸಹ ಜಿಲ್ಲೆಯಲ್ಲಿ ಇದೇ ರೀತಿಯ ಸಹಕಾರ ಹಾಗೂ ಕಾರ್ಯ ಕ್ಷಮತೆಯನ್ನು ನಿರೀಕ್ಷಿಸುತ್ತೇನೆ ಎಂದು ಅಭಿನಂದನಾ ಪತ್ರದಲ್ಲಿ ತಿಳಿಸಿದ್ದಾರೆ.