

ತುಮಕೂರು : ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮೂರು ಹೊಸ ಕೃಷಿ ಕಾಯ್ದೆಗಳಲ್ಲಿ ರೈತಪರ ಹಲವು ಅಂಶಗಳಿದ್ದರೂ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ರೈತರಲ್ಲಿ ಇಲ್ಲಸಲ್ಲದ ಭಯ ಹುಟ್ಟಿಸಿ, ತಪ್ಪುದಾರಿಗೆ ಎಳೆಯುತ್ತಿವೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಸುರೇಶ್‌ಗೌಡ ಆರೋಪಿಸಿದರು.
ತಾಲೂಕಿನ ಹೊನ್ನುಡಿಕೆಯಲ್ಲಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಘಟಕದ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ಮಾಜಿ ಪ್ರಧಾನಿ ದಿ.ಅಟಲ್‌ಬಿಹಾರಿ ವಾಜಪೇಯಿ ಅವರ ಜನ್ಮದಿನ ಹಾಗೂ ರೈತದಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ರೈತರು ತಾವು ಬೆಳೆದ ಬೆಳೆಗಳನ್ನು ದೇಶದ ಯಾವುದೇ ಭಾಗದಲ್ಲಿ ಮಾರಾಟ ಮಾಡಲು ಮುಕ್ತ ಅವಕಾಶವನ್ನು ಮೂರು ಹೊಸ ಕೃಷಿ ಕಾಯ್ದೆಗಳು ನೀಡಿವೆ ಎಂದರು.
ಕಳೆದ 7 ವರ್ಷಗಳಲ್ಲಿ ನರೇಂದ್ರಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಒಂದು ಕಪ್ಪು ಚುಕ್ಕೆ ಇಲ್ಲದಂತೆ ಕಾರ್ಯನಿರ್ವಹಿಸಿದೆ. ಇದನ್ನು ಸಹಿಸದ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್‌ನಂತಹ ಪಕ್ಷಗಳು ಹೊಸ ಕಾಯ್ದೆಗಳು ಅಪಾಯಕಾರಿ ಎಂಬ ವಿಷಬೀಜ ಬಿತ್ತಿ ಪ್ರತಿಭಟನೆಗೆ ಇಳಿಯುವಂತೆ ಮಾಡಿವೆ ಎಂದು ಕಿಡಿಕಾರಿದ ಸುರೇಶ್‌ಗೌಡ, ಹೊಸ ಕಾಯ್ದೆಯಲ್ಲಿರುವ ಅಂಶಗಳ ಬಗ್ಗೆ ರೈತರಿಗೆ ಮನನ ಮಾಡಿಸಲು ಬಿಜೆಪಿ ಮುಂದಾಗಿದ್ದು, ವಿಪಕ್ಷಗಳ ಮಾತುಗಳಿಗೆ ಕಿವಿಗೊಡದಂತೆ ರೈತರಲ್ಲಿ ಮನವಿ ಮಾಡಿದರು.
ಕೃಷಿ ತಜ್ಞ ಡಾ.ಸ್ವಾಮಿನಾಥನ್ ವರದಿಯ ಅಂಶಗಳನ್ನು ಮುಂದಿಟ್ಟುಕೊಂಡೇ 2022ರ ವೇಳೆಗೆ ರೈತರ ಆದಾಯ ದ್ವಿಗುಣಗೊಳಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಹೊಸ ಕಾಯ್ದೆಗಳನ್ನು ಜಾರಿಗೆ ತಂದಿದೆ. ಅಲ್ಲದೆ, ಕಾಯ್ದೆಗಳಲ್ಲಿನ ಲೋಪದೋಷಗಳ ಕುರಿತು ಸರ್ಕಾರ ರೈತರೊಂದಿಗೆ ಮಾತುಕತೆ ಸಹ ನಡೆಸಿದೆ ಎಂದು ರೈತಮೋರ್ಚಾ ರಾಜ್ಯ ಪ್ರಧಾನಕಾರ್ಯದರ್ಶಿ ಎಸ್.ಶಿವಪ್ರಸಾದ್ ಹೇಳಿದರು.
ಜಿಪಂ ಉಪಾಧ್ಯಕ್ಷೆ ಶಾರದಾ, ಸದಸ್ಯ ಗೂಳೂರು ಶಿವಕುಮಾರ್, ಮಾಜಿ ಸದಸ್ಯ ರಾಮಚಂದ್ರಪ್ಪ, ಎಪಿಎಂಸಿ ಉಪಾಧ್ಯಕ್ಷ ಶಿವರಾಜು, ತಾಪಂ ಮಾಜಿ ಅಧ್ಯಕ್ಷ ನರಸಿಂಹಮೂರ್ತಿ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಓಂಕಾರ, ರೈತಮೋರ್ಚಾ ಜಿಲ್ಲಾ ಮಾಜಿ ಅಧ್ಯಕ್ಷ ಸ್ನೇಕ್ ನಂದೀಶ್ ಮತ್ತಿತರರಿದ್ದರು.