ದೇಶದ ಅಭಿವೃದ್ಧಿಗೆ ಅಟಲ್‌ಜೀ ಅಡಿಪಾಯ ; ರೈತ ದಿನಾಚರಣೆಯಲ್ಲಿ ಸಂಸದ ಜಿ.ಎಸ್.ಬಸವರಾಜು ಬಣ್ಣನೆ

25Tmk_BJP_Atal
Published on

ತುಮಕೂರು : ಅಟಲ್‌ಜೀ ಅವರದ್ದು ದೇಶ ಕಂಡಂತಹ ಮಹಾನ್ ವ್ಯಕ್ತಿತ್ವ. ಈ ದೇಶದ ಅಭಿವೃದ್ಧಿಗೆ ಅವರು ಹಾಕಿದ ಅಡಿಪಾಯ ಸುಭದ್ರವಾಗಿದೆ. ಆ ಅಡಿಪಾಯದ ಆಧಾರದ ಮೇಲೆ ಸರ್ಕಾರ ಕಾರ್ಯ ನಿರ್ವಹಿಸಿಕೊಂಡು ಹೋದರೆ ಸಾಕು, ದೇಶ ಸುಭದ್ರ ಸುಸ್ಥಿತಿಯಲ್ಲಿರುತ್ತದೆ ಎಂದು ಸಂಸದ ಜಿ.ಎಸ್.ಬಸವರಾಜು ಹೇಳಿದರು.

ನಗರದಲ್ಲಿ ಬಿಜೆಪಿ ನಗರ ಮಂಡಲದ ವತಿಯಿಂದ ಅಜಾತಶತ್ರು, ಭಾರತರತ್ನ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 96ನೇ ಜಯಂತಿ ಅಂಗವಾಗಿ ಆಯೋಜಿಸಿದ್ದ ರೈತ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದ ಅವರು, ಅಟಲ್ ಒಡನಾಡಿಯಾಗಿ ಕಾರ್ಯನಿರ್ವಹಿಸಿದ ಹೆಮ್ಮೆ ನನಗಿದೆ. ಎಲ್ಲರೊಂದಿಗೂ ಬಹಳ ಸಹಜವಾಗಿ ಸೌಮ್ಯದಿಂದ ನಡೆದುಕೊಳ್ಳುತ್ತಿದ್ದ ಅಜಾತಶತ್ರು ಎಂದರು.

ಹವು ನೀರಾವರಿ ಯೋಜನೆಗಳು, ನದಿ ಜೋಡಣೆಯ ಕಲ್ಪನೆ, ರೈತರಿಗೆ ಉತ್ತಮ ಗುಣಮಟ್ಟದ ರಸಗೊಬ್ಬರ ಪೂರೈಸುವಿಕೆ ಹೀಗೆ ಹತ್ತು ಹಲವು ರೈತ ಚಿಂತನೆಯ ಮೂಲಕ ರೈತರ ಅಭ್ಯುದಯಕ್ಕೆ ಕಾರ್ಯಕ್ರಮಗಳನ್ನು ರೂಪಿಸಿದ್ದ ಅಟಲ್‌ಜೀಯವರ ಆಶಯದಂತೆ ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನಡೆದುಕೊಳ್ಳುತ್ತಿದೆ ಎಂದು ಬಿಜೆಪಿ ರೈತಮೋರ್ಚಾ ರಾಜ್ಯ ಪ್ರಧಾನಕಾರ್ಯದರ್ಶಿ ಎಸ್.ಶಿವಪ್ರಸಾದ್ ಹೇಳಿದರು.

ಎಪಿಎಂಸಿ ಕಾಯ್ದೆ ಹಾಗೂ ನೂತನ ಕೃಷಿ ಮಸೂದೆಯಿಂದ ರೈತರಿಗೆ ಅನುಕೂಲವಾಗಲಿದ್ದು ರೈತರಿಗೆ ತಾವು ಬೆಳೆದ ಬೆಳೆಗೆ ನೇರವಾಗಿ ಅವರಿಗೆ ಲಾಭ ದೊರೆಯುತ್ತದೆ. ಒಂದು ವೇಳೆ ಬೆಲೆ ಕುಸಿತವಾದರೆ ಕೇಂದ್ರದ ಬೆಂಬಲ ಬೆಲೆಯ ನೆರವು ಸಿಗುತ್ತದೆ. ಇದರಿಂದ ರೈತನ ಆರ್ಥಿಕ ಸ್ಥಿತಿ ಸಮತೋಲನದಿಂದ ಇರುತ್ತದೆ. ಈ ಕಾಯ್ದೆಯಿಂದ ಕೃಷಿ ಉತ್ಪನ್ನಗಳ ದಾಸ್ತಾನು, ಸಂಗ್ರಹ, ಸಾಗಣೆ, ಆಹಾರ ಸಂಸ್ಕರಣೆ ಹಾಗೂ ರಪ್ತಿಗೆ ಅವಕಾಶವಾಗುತ್ತವೆ. ಆದರೆ, ವಿರೋಧ ಪಕ್ಷಗಳ ಬೆಂಬಲಿತ ಕೆಲವು ಸಂಘಟನೆಗಳು ಸುಖಾ ಸುಮ್ಮನೆ ಆರೋಪ, ಪ್ರತಿಭಟನೆ ಮಾಡುತ್ತಿವೆ. ಈ ಕಾಯ್ದೆಗಳ ಅನುಕೂಲವನ್ನು ನಮ್ಮ ಕಾರ್ಯಕರ್ತರು ಹಳ್ಳಿ ಹಳ್ಳಿಗೆ ತಲುಪಿಸಬೇಕಿದೆ ಎಂದರು.

ಕಾವಿ ತೊಡದ ಸಂತ: ಅಟಲ್ ಜೀ ಸ್ಮರಣಾರ್ಥ ಏರ್ಪಡಿಸಿದ್ದ ರಕ್ತದಾನ ಶಿಬಿರ ಉದ್ಘಾಟಿಸಿದ ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ, ಅಟಲ್‌ಜೀ ಅವರು ರಾಷ್ಟ್ರ ಕಂಡಂತಹ ಅದ್ವೀತಿಯ ವ್ಯಕ್ತಿ. ರಾಜಕೀಯವನ್ನು ಒಂದು ತಪಸ್ಸಿನ ರೀತಿಯಲ್ಲಿ ಮಾಡಿದ ಕಾವಿ ತೊಡದ ಸಂತ ಅಟಲ್‌ಜೀ ಎಂದು ಬಣ್ಣಿಸಿದರು.

ಸ್ವಪಕ್ಷೀಯರಲ್ಲೇ ದ್ವೇಷವೇ ಹೆಚ್ಚಿರುವ ಇವತ್ತಿನ ಕಾಲಘಟ್ಟದಲ್ಲಿ ವಿರೋಧ ಪಕ್ಷಗಳನ್ನು ಪ್ರೀತಿಯಿಂದ ವಿಶ್ವಾಸದೊಂದಿಗೆ ಕಾಣುತ್ತಿದ್ದ ಅವರ ಗುಣ ವಿಶೇಷವೆನಿಸುವಂತದ್ದು. ಉನ್ನತ ಮಟ್ಟದ ರಾಜಕೀಯದ ಮೂಲಕ ರಾಷ್ಟ್ರ ನಿರ್ಮಾಣ ಮಾಡುವ ಅವರ ನಡತೆಯನ್ನು ಎಲ್ಲರೂ ಮೈಗೂಡಿಸಿಕೊಳ್ಳುವ ಅನಿರ್ವಾಯತೆ ಇದೆ. ಅಂತಹ ಮಹಾನ್ ಚೇತನ ಅಟಲ್ ಜೀ ಜಯಂತಿ ಪ್ರಯುಕ್ತ ರಕ್ತದಾನ ಮಾಡುತ್ತಿರುವುದು ಮಾದರಿ ಎಂದರು.

ಕಾರ್ಯಕ್ರಮದಲ್ಲಿ ರೈತರಿಗೆ ಸನ್ಮಾನ ಮಾಡಲಾಯಿತು. 50ಕ್ಕೂ ಅಧಿಕ ಮಂದಿ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರು. ರಾಜ್ಯ ರೈತಮೋರ್ಚಾ ಕಾರ್ಯಕಾರಿಣಿ ಸದಸ್ಯ ಸ್ನೇಕ್ ನಂದೀಶ್, ಟೂಡಾ ಅಧ್ಯಕ್ಷರಾದ ಬಾವಿಕಟ್ಟೆ ನಾಗಣ್ಣ, ನಗರಾಧ್ಯಕ್ಷ ಟಿ.ಎಚ್.ಹನುಮಂತರಾಜು, ಮುಖಂಡರಾದ ಕೃಷ್ಣಪ್ಪ, ಗೋಪಾಲ್‌ಗೌಡ, ತರಕಾರಿ ಮಹೇಶ್, ರವೀಶಯ್ಯ, ಸಿ.ಎನ್.ರಮೇಶ್, ರಾಜೀವ್, ಗಣೇಶ್, ಪ್ರೀತಂ, ವೇದಮೂರ್ತಿ, ನಾಗೇಂದ್ರ, ರಕ್ಷಿತ್, ರೂಪೇಶ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net