ವಿವಿಧೆಡೆ ಭಾರಿ ಮಳೆ

12Sambaragi2
ಸಂಬರಗಿ ಗ್ರಾಮದ ಸುತ್ತಮುತ್ತ ಭಾರಿ ಮಳೆಯಾದ ಹಿನ್ನೆಲೆಯಲ್ಲಿ ಅಗ್ರಾಣಿ ನದಿ ಮೈದುಂಬಿ ಹರಿಯುತ್ತಿರುವುದು.
Published on

ಮಮದಾಪುರ: ಗೋಕಾಕ ತಾಲೂಕಿನ ಮಮದಾಪುರ ಗ್ರಾಮದಲ್ಲಿ ಗುರುವಾರ ಸಂಜೆ ಗುಡುಗು ಸಹಿತ ಭಾರಿ ಮಳೆ ಸುರಿಯಿತು. ಗ್ರಾಮದ ರಸ್ತೆ, ಚರಂಡಿಗಳಲ್ಲಿ ನೀರು ತುಂಬಿ ಹರಿದವು. ವಿದ್ಯಾರ್ಥಿಗಳು ಪರದಾಡಿದರು. ಅಲ್ಲದೆ, ಅಜ್ಜನಕಟ್ಟಿ, ಮಮದಾಪುರ ಕ್ರಾಸ್, ಕೊಳವಿ, ಬೆಣಚಿನಮರಡಿ, ಹೂಲಿಕಟ್ಟಿ ಹಾಗೂ ಮಕ್ಕಳಗೇರಿ ಗ್ರಾಮಗಳಲ್ಲೂ ಹೆಚ್ಚು ಮಳೆ ಸುರಿಯಿತು.

ಬೈಲಹೊಂಗಲ ವರದಿ: ಪಟ್ಟಣದಲ್ಲಿ ನಾಲ್ಕೈದು ಗಂಟೆ ನಿರಂತರವಾಗಿ ಸುರಿದ ಧಾರಕಾರ ಮಳೆಯಿಂದ ಗುರುವಾರ ಜನಜೀವನ ಅಸ್ತವ್ಯಸ್ತವಾಯಿತು. ರಸ್ತೆಗಳ ಮೇಲೆ ರಭಸವಾಗಿ ಹರಿದ ನೀರಿನಿಂದ ವಾಹನ ಸವಾರರು ಪರದಾಡಿದರು. ಕೆಲಕಾಲ ಸಂಚಾರ ಸಿಕ್ಕು ಉಂಟಾಯಿತು. ಕೆಲವೆಡೆ ಮನೆಗಳಿಗೆ ಮಳೆ ನೀರು ನುಗ್ಗಿದ್ದರಿಂದ ನೀರು ಹೊರ ಹಾಕಲು ನಿವಾಸಿಗಳು ಹರಸಾಹಸ ಪಟ್ಟರು. ಪುರಸಭೆ ಅಧಿಕಾರಿಗಳಿಗೆ ಜನರು ಹಿಡಿ ಶಾಪ ಹಾಕಿದರು. ಸೋಮವಾರ ಪೇಟೆಯಲ್ಲಿ ತರಕಾರಿ ತೇಲಿ ಹೋದವು. ಮನೆಗಳಿಗೆ ನೀರು ನುಗ್ಗಿದ ಪ್ರದೇಶಗಳಿಗೆ ಪುರಸಭೆ ಅಧ್ಯಕ್ಷ ವಿಜಯ ಬೋಳನ್ನವರ, ಮುಖ್ಯಾಧಿಕಾರಿ ವೀರೇಶ ಹಸಬಿ, ಇಂಜನಿಯರ್ ಬಸನಗೌಡ ಪಾಟೀಲ, ಸುರೇಶ ಪಾಟೀಲ ಭೇಟಿ ನೀಡಿ, ಮುಂದಿನ ದಿನಗಳಲ್ಲಿ ಮನೆಗಳಿಗೆ ನೀರು ಬರದಂತೆ ಮುಂಜಾಗ್ರತೆ ಕೈಗೊಳ್ಳಲಾಗುವುದು ಎಂದರು. ಮನೆಗಳಲ್ಲಿ ನೀರು ನುಗ್ಗಿ ತೊಂದರೆಯಾದವರಿಗೆ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ವಸತಿ, ಊಟದ ವ್ಯವಸ್ಥೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net