

ಹುಕ್ಕೇರಿ: ಕೊಟಬಾಗಿ ಏತ ನೀರಾವರಿ ಯೋಜನೆ ವ್ಯಾಪ್ತಿಯ ಕೊನೆ ಹಂತದವರೆಗೂ ನೀರು ತಲುಪಿಸಲು ನೀರಾವರಿ ಇಲಾಖೆ ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಬೆಲ್ಲದ ಬಾಗೇವಾಡಿ ಅರ್ಬನ್ ಬ್ಯಾಂಕ್ ಅಧ್ಯಕ್ಷ ಪವನ ಕತ್ತಿ ಹೇಳಿದರು.
ತಾಲೂಕಿನ ಹುಲ್ಲೋಳಿ ಗ್ರಾಮದ ಬಳಿ ಕೊಟಬಾಗಿ ಏತ ನೀರಾವರಿ ಯೋಜನೆಯ ಪ್ರಸಕ್ತ ಸಾಲಿನ ನೀರು ಬಿಡುಗಡೆಗೆ ಭಾನುವಾರ ಚಾಲನೆ ನೀಡಿ ಮಾತನಾಡಿ, ಈ ಯೋಜನೆಯಿಂದ ಚಿಕ್ಕೋಡಿ ಮತ್ತು ಹುಕ್ಕೇರಿ ತಾಲೂಕಿನ 21 ಹಳ್ಳಿಗಳ ಸುಮಾರು 8 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಲಿದೆ. ಅದಕ್ಕೆ ರಾಜಕೀಯ ಬೆರೆಸುತ್ತಿರುವುದು ಬೇಸರದ ಸಂಗತಿ ಎಂದರು.
ನೀರಾವರಿ ಇಲಾಖೆ ಚಿಕ್ಕೋಡಿ ಜಿಆರ್‌ಬಿಸಿ ವಿಭಾಗ-4ರ ಕಾರ್ಯನಿರ್ವಾಹಕ ಅಭಿಯಂತ ಎಸ್.ಎಸ್.ಕರಿಗಾರ ಮತ್ತು ಎಇಇ ಸುಭಾಶ ಮಹಿಮಗೋಳ ಮಾತನಾಡಿ, ರೈತರು ಯೋಜನೆ ಪ್ರಾರಂಭದಿಂದ ಇಲ್ಲಿಯವರೆಗೆ ನೀರಿನ ಕರ ತುಂಬಿಲ್ಲ. ಆದರೆ, ಸರ್ಕಾರ ಕರ ವಸೂಲಿಗೆ ಒತ್ತಾಯಿಸುತ್ತಿದೆ. ಹಾಗಾಗಿ, ನೀರಿನ ಕರ ತುಂಬಿ ಸಹಕರಿಸಬೇಕೆಂದರು.
ಅಧಿಕಾರಿ ವಿರುದ್ಧ ಆಕ್ರೋಶ: ಕೆಲ ರೈತರು ಯೋಜನೆಯ ಕೊನೆಯ ಹಂತದ ರೈತರ ಜಮೀನುಗಳಿಗೆ ನೀರು ತಲುಪುತ್ತಿಲ್ಲ. ಇದನ್ನು ಹಲವಾರು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು. ತಾಲೂಕಿನ ಏತ ನೀರಾವರಿ ಯೋಜನೆಯೊಂದರ ನೀರು ಬಿಡುಗಡೆ ಸಮಾರಂಭಕ್ಕೆ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರನ್ನು ಆಹ್ವಾನಿಸದೆ ಬೃಹತ್ ನೀರಾವರಿ ಇಲಾಖೆ ಅಧಿಕಾರಿಗಳು ಶಿಷ್ಟಾಚಾರ ಉಲ್ಲಂಘಿಸಿದ್ದಾರೆಂದು ಕಾಂಗ್ರೆಸ್ ಕಾರ್ಯಕರ್ತರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಅಭಿಯಂತರಾದ ಎ.ಆರ್.ಧರ್ಮಟ್ಟಿ, ಎಸ್.ಪಿ.ಗುಡ್ಡದ, ಎಸ್.ಎಸ್.ಗುಡ್ಡಾಕಾಯು, ಎಇ ಸಾಧಿಕ್ ಮುಲ್ಲಾ, ಗುತ್ತಿಗೆದಾರ ಬಸವರಾಜ ಗಂಗಣ್ಣವರ, ಎಪಿಎಂಸಿ ಮಾಜಿ ಅಧ್ಯಕ್ಷ ಕೆ.ಜಿ.ಪಾಟೀಲ, ಬೆಮುಲ್ ಜಿಲ್ಲಾ ನಿರ್ದೇಶಕ ರಾಯಪ್ಪ ಢೂಗ, ಮುಖಂಡರಾದ ರಾಮಣ್ಣ ಗೋಟೂರೆ, ಅಪ್ಪಾಸಾಹೇಬ ಸಾರಾಪೂರೆ, ಬಿ.ಎನ್.ಪಾಟೀಲ, ಬಿ.ಬಿ.ಚೌಗಲಾ, ಬಸವರಾಜ ಹಿತ್ತಲಮನಿ, ಉದಯ ಬ್ಯಾಳಿ, ಶಂಕರ ಬಡಗಾಂವಿ, ಸಿದ್ಧಪ್ಪ ಪೂಜೇರಿ ಇತರರಿದ್ದರು.