ಹೋಬಳಿ ಕೇಂದ್ರದಲ್ಲಿ ಮೇಲ್ಸೇತುವೆಗೆ ಪಟ್ಟು

At the Hobli center, fold the flyover
At the Hobli center, fold the flyover
Published on

ದೊಡ್ಡಬೆಳವಂಗಲ ಗ್ರಾಮಸ್ಥರಿಗೆ ಪರದಾಟ

207 ಹೆದ್ದಾರಿ ನಿರ್ಮಾಣಕ್ಕೆ ತಕರಾರು


ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ದಾಬಸ್‌ಪೇಟೆಯಿಂದ ಹೊಸಕೋಟೆವರೆಗೆ ಕೈಗೊಂಡಿರುವ 207 ಹೆದ್ದಾರಿ ನಿರ್ಮಾಣ ಕಾಮಗಾರಿಯಿಂದ ದೊಡ್ಡಬಳ್ಳಾಪುರ ತಾಲೂಕು ದೊಡ್ಡಬೆಳವಂಗಲ ಹೋಬಳಿ ಜನರಿಗೆ ಅನಾನುಕೂಲವಾಗುತ್ತಿದೆ ಎಂಬ ಆರೋಪ ಕೇಳಿಬಂದಿದ್ದು, ಈ ಭಾಗದಲ್ಲಿ ಸೂಕ್ತ ಮೇಲ್ಸೇತುವೆ ನಿರ್ಮಾಣಕ್ಕೆ ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ.
ತಾಲೂಕಿನಲ್ಲಿ ದೊಡ್ಡ ಹೋಬಳಿ ಕೇಂದ್ರ ಎನಿಸಿರುವ ದೊಡ್ಡಬೆಳವಂಗಲದಲ್ಲಿ ಬ್ಯಾಂಕ್‌ಗಳು, ಅಂಚೆಕಚೇರಿ ಸೇರಿ ಹಲವು ಶಾಲಾ ಕಾಲೇಜುಗಳಿವೆ. ಆದರೆ ಈ ಹೆದ್ದಾರಿ ಹಾದು ಹೋಗುವುದರಿಂದ ಹೋಬಳಿ ಕೇಂದ್ರ ಎರಡು ಭಾಗವಾಗಿ ವಿಭಜನೆಯಾಗಲಿದೆ. ಒಂದು ಕಡೆಯಿಂದ ಮತ್ತೊಂದು ಕಡೆಗೆ ಜನ ತೆರಳಲು ಕಿ.ಮೀ.ಗಟ್ಟಲೆ ಸುತ್ತುಹಾಕಿ ಬರಬೇಕಾಗಿದೆ ಎಂದು ಸಾರ್ವಜನಿಕರು ಅಳಲು ತೋಡಿಕೊಂಡಿದ್ದಾರೆ.

ಅಂಡರ್‌ಪಾಸ್‌ಗಳು ಅವೈಜ್ಞಾನಿಕ:
ದಾಬಸ್‌ಪೇಟೆಯಿಂದ ಹೊಸಕೋಟೆಗೆ ಸಂಪರ್ಕ ಕಲ್ಪಿಸುವ ಹೆದ್ದಾರಿಯ ದೊಡ್ಡಬೆಳವಂಗಲ ಹೋಬಳಿ ಕೇಂದ್ರದಲ್ಲಿ ಯಾವುದೇ ಅಂಡರ್‌ಪಾಸ್ ನಿರ್ಮಾಣಕ್ಕೆ ಅವಕಾಶ ನೀಡಿಲ್ಲ. ಬದಲಿಗೆ ಹೋಬಳಿ ಕೇಂದ್ರದಿಂದ ಬಹಳ ದೂರದಲ್ಲಿ ಅಂಡರ್‌ಪಾಸ್ ನಿರ್ಮಾಣಕ್ಕೆ ನೀಲಿನಕ್ಷೆ ಸಿದ್ಧಪಡಿಸಲಾಗಿದೆ. ಇದರಿಂದ ಜನರು ಹೆದ್ದಾರಿ ದಾಟಲು ಸುತ್ತಬೇಕಿದೆ. ಹೀಗಾದರೆ ಪ್ರಮುಖ ವಾಣಿಜ್ಯ ಕೇಂದ್ರವಾಗಿರುವ ಹೋಬಳಿಯಲ್ಲಿ ವ್ಯಾಪಾರ ವಹಿವಾಟಿಗೆ ದೊಡ್ಡಪೆಟ್ಟು ಬೀಳಲಿದೆ ಎಂಬುದು ಸ್ಥಳೀಯರ ಆಕ್ಷೇಪಕ್ಕೆ ಕಾರಣವಾಗಿದೆ.

ಹೈನುಗಾರಿಕೆ, ಕೃಷಿಗೂ ಸಂಕಷ್ಟ:
ಹೋಬಳಿ ಕೇಂದ್ರದಲ್ಲಿ ಹೆದ್ದಾರಿ ದಾಟಲು ಸೂಕ್ತ ವ್ಯವಸ್ಥೆ ಇಲ್ಲವಾದರೆ ಎರಡೂ ಭಾಗದ ಜನರು ತಮ್ಮ ಜಮೀನುಗಳಿಗೆ ಹೋಗಿ ಬರಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಲಿದೆ. ಈ ಭಾಗದಲ್ಲಿ ಹೈನುಗಾರಿಕೆ ಪ್ರಗತಿಯಲ್ಲಿದ್ದು ಜಾನುವಾರುಗಳನ್ನು ಹೊಲಗದ್ದೆಗಳ ಕಡೆ ಕರೆದುಕೊಂಡು ಹೋಗಿಬರಲು ಕಷ್ಟಸಾಧ್ಯ. ಆದ್ದರಿಂದ ಈ ಭಾಗದಲ್ಲಿ ಮೇಲ್ಸೇತುವೆ ನಿರ್ಮಾಣ ಅತ್ಯಗತ್ಯವಾಗಿದೆ ಎಂದು ಸ್ಥಳೀಯರು ಮೊರೆ ಇಟ್ಟಿದ್ದಾರೆ.

ವಿದ್ಯಾರ್ಥಿಗಳಿಗೆ ತೊಂದರೆ
ಹೋಬಳಿ ಕೇಂದ್ರದಲ್ಲಿ ಕರ್ನಾಟಕ ಪಬ್ಲಿಕ್‌ಶಾಲೆ ಸೇರಿ ಹಲವು ವಿದ್ಯಾಸಂಸ್ಥೆಗಳಿದ್ದು ಸಾವಿರಾರು ವಿದ್ಯಾರ್ಥಿಗಳಿಗೆ ಹೆದ್ದಾರಿ ದಾಟುವುದು ಕಷ್ಟವಾಗಲಿದೆ. ಹೋಬಳಿ ಕೇಂದ್ರದ ದೂರದಲ್ಲಿ ಅಂಡರ್‌ಪಾಸ್ ನಿರ್ಮಾಣ ಮಾಡಿದರೆ ವಿದ್ಯಾರ್ಥಿಗಳು ತುಂಬ ದೂರದಿಂದ ಬಳಸಿಕೊಂಡು ಶಾಲೆಗಳಿಗೆ ಹೋಗಿಬರುವ ದುಸ್ಸಾಹಸ ಮಾಡಬೇಕಾಗುತ್ತದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಸರ್ಕಾರದ ಗಮನಕ್ಕೆ ತಂದು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

ತಾಲೂಕಿನಲ್ಲಿ ದೊಡ್ಡಬೆಳವಂಗಲ ಪ್ರಮುಖ ವಾಣಿಜ್ಯ ಕೇಂದ್ರವಾಗಿದೆ, ಸಾಕಷ್ಟು ವ್ಯಾಪಾರ ವಹಿವಾಟು ನಡೆಯುತ್ತದೆ, ಇದರೊಂದಿಗೆ ಕೃಷಿ ಚಟುವಟಿಕೆ ಹೈನುಗಾರಿಕೆಯಲ್ಲೂ ಮುಂಚೂಣಿಯಲ್ಲಿದೆ, ಹೆದ್ದಾರಿ ನಿರ್ಮಾಣದಿಂದ ಇದಕ್ಕೆಲ್ಲ ಪೆಟ್ಟು ಬೀಳಲಿದೆ. ಈ ಭಾಗದಲ್ಲಿ ಮೇಲ್ಸೇತುವೆ ನಿರ್ಮಾಣವೊಂದೆ ಇದಕ್ಕೆಲ್ಲ ಪರಿಹಾರ. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರೆಲ್ಲ ಸಭೆ ನಡೆಸಿದ್ದು ಅಧಿಕಾರಿಗಳಿಗೆ ಒತ್ತಡ ಹಾಕಿ ಪರಿಸ್ಥಿತಿ ಮನವರಿಕೆ ಮಾಡಿಕೊಡಲು ಮುಂದಾಗಿದ್ದೇವೆ.

ರಾಮಣ್ಣ, ಸ್ಥಳೀಯ ಮುಖಂಡ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net