

ಗುಳೇದಗುಡ್ಡ: ಜಿಲ್ಲೆಯ ಕೃಷ್ಣ ಮೇಲ್ದಂಡೆ ಯೋಜನೆ ಜ್ವಲಂತ ಸಮಸ್ಯೆಯಾಗಿದ್ದು, ಸರ್ಕಾರ ಇದಕ್ಕೆ ಕನಿಷ್ಠ 75 ಸಾವಿರ ಕೋಟಿ ರೂ. ಅನುದಾನ ಒದಗಿಸಿ ರೈತರ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜಿ. ನಂಜಯ್ಯನಮಠ ಒತ್ತಾಯಿಸಿದ್ದಾರೆ.
ಪಟ್ಟಣದಲ್ಲಿ ಗುರುವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ೆ.17ರಂದು ಸಿಎಂ ಸಿದ್ದರಾಮಯ್ಯ ಹಾಗೂ ನೀರಾವರಿ ಸಚಿವರನ್ನು ಖುದ್ದಾಗಿ ಭೇಟಿ ಮಾಡುತ್ತೇನೆ. ಪ್ರಮುಖವಾಗಿ ಕೃಷ್ಣ ಮೇಲ್ದಂಡೆ ಯೋಜನೆಯ ಸುಮಾರು 3 ತಿಂಗಳ ಹಿಂದೆ ನಡೆದ ಸತ್ಯಾಗ್ರಹದ ಹಿನ್ನೆಲೆಯಲ್ಲಿ ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ಹೋರಾಟಗಾರರನ್ನು ಕರೆಯಿಸಿ ಸಮಸ್ಯೆ ನಿವಾರಣೆಗೆ ಅಗತ್ಯ ಹಣಕಾಸು ಒದಗಿಸುವ ಭರವಸೆ ನೀಡಲಾಗಿತ್ತು. ತಮ್ಮ ಭರವಸೆಯ ಮೇಲೆ ಹೋರಾಟ ಕೈಬಿಡಲಾಗಿತ್ತು. ನಮ್ಮ ಸರ್ಕಾರ ಇದ್ದರೂ ಈ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಲು ಒತ್ತಾಯ ಮಾಡುತ್ತೇನೆ ಎಂದರು.
ನೀರಾವರಿಯ ಒಂದು ಎಕರೆಗೆ ಕನಿಷ್ಠ 45 ರಿಂದ 50 ಲಕ್ಷ ರೂ. ಹಾಗೂ ಒಣಬೇಸಾಯಕ್ಕೆ 30 ರಿಂದ 35 ಲಕ್ಷ ರೂ. ಒದಗಿಸಬೇಕು. ಇಷ್ಟು ಮಾಡಿದರೆ ಈ ಭಾಗದ ಜ್ವಲಂತ ಸಮಸ್ಯೆಗಳಿಗೆ ಶೇ.90ರಷ್ಟು ಶಾಶ್ವತ ಪರಿಹಾರ ಒದಗಿಸಿದಂತಾಗುತ್ತದೆ ಎಂದರು.
ಹೊಸ ತಾಲೂಕು ರಚನೆಯಾಗಿ 10 ವರ್ಷಗಳಾದರೂ ತಾಲೂಕಿಗೆ ಅಗತ್ಯ ಇಲಾಖೆಗಳಿಲ್ಲ. ಪರಿಪೂರ್ಣ ತಾಲೂಕು ರಚನೆ ಇನ್ನೂ ಆಗದೆ ಇರುವ ಕುರಿತು ಪ್ರತಿಕ್ರಿಯಿಸಿ, ಈ ಹಿಂದೆ ಸಿದ್ದರಾಮಯ್ಯ ಸರ್ಕಾರ ರಾಜ್ಯದಲ್ಲಿ ಹೊಸ ತಾಲೂಕುಗಳನ್ನು ಘೋಷಣೆ ಮಾಡಿದೆ. ಅವುಗಳಿಗೆ ಅಗತ್ಯ ಕಟ್ಟಡ, ಸಿಬ್ಬಂದಿ ಒದಗಿಸಿಲ್ಲ. ಹೀಗಾಗಿ ಹೊಸ ತಾಲೂಕುಗಳು ಹೆಸರಿಗೆ ಮಾತ್ರ ಸೀಮಿತವಾಗಿವೆ. ಅಗತ್ಯ ಕೆಲಸಕ್ಕೆ ಬೇರೆ ತಾಲೂಕುಗಳಿಗೆ ಅಲೆದಾಡಬೇಕಾಗಿದೆ. ಜನರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಅದಕ್ಕೆ ಸರ್ಕಾರ ಅವಶ್ಯಕ ಸಿಬ್ಬಂದಿ, ಕಟ್ಟಡ, ಕಚೇರಿ ಒದಗಿಸಬೇಕೆಂದು ಒತ್ತಾಯಿಸುತ್ತೇನೆಂದು ಎಸ್.ಜಿ.ನಂಜಯ್ಯನಮಠ ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂಜಯ ಬರಗುಂಡಿ, ಮುಖಂಡರಾದ ಜಮೀರ ಮೌಲ್ವಿ, ಚಿದಾನಂದಸಾ ಕಾಟವಾ, ರಾಜು ಸಂಗಮ, ಮುಬಾರಕ ಮಂಗಳೂರು, ಸಲೀಮ ಮೋಮಿನ, ಮೆಹಬೂಬ ಬಾಗವಾನ, ಲಾಲಸಾಬ್ ಅತ್ತಾರ ಇತರರು ಇದ್ದರು.