ಈಗಲಾದರೂ ರಾಜೀನಾಮೆ ಕೊಡಿ ಸಿಎಂ:ಅರುಣ್

arun
ಡಿ.ಎಸ್.ಅರುಣ್, ಬಿಜೆಪಿ ರಾಜ್ಯ ಕಾರ್ಯದರ್ಶಿ
Published on

ಶಿವಮೊಗ್ಗ: ಮುಡಾ ಹಗರಣದ ವಿರುದ್ಧ ಬಿಜೆಪಿ ಆರಂಭದಲ್ಲೇ ಹೋರಾಟ ನಡೆಸಿತ್ತು. ಆಗ ನಮ್ಮ ಹೋರಾಟವನ್ನು ಲಘುವಾಗಿ ಪರಿಗಣಿಸಿದ್ದ ಸಿಎಂ ಸಿದ್ದರಾಮಯ್ಯ ಹಾಗೂ ಅವರ ಕುಟುಂಬ ಈಗ ನಿವೇಶನ ಹಿಂದಿರುಗಿಸಿದೆ. ಈಗಲಾದರೂ ಸಿದ್ದರಾಮಯ್ಯ ರಾಜೀನಾಮೆ ನೀಡಲಿ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಡಿ.ಎಸ್.ಅರುಣ್ ಒತ್ತಾಯಿಸಿದರು.

ಮುಡಾ ಹಗರಣದ ಬಗ್ಗೆ ಸಿದ್ದರಾಮಯ್ಯ ಜಿಗುಟಾಗಿ ವರ್ತಿಸುತ್ತಿದ್ದಾರೆ. ದಿನದಿಂದ ದಿನಕ್ಕೆ ಮುಡಾ ಹಗರಣದ ಕಬಂಧ ಬಾಹು ಬಿಗಿಯಾಗುತ್ತಿದೆ. ನಾನೇನು ತಪ್ಪು ಮಾಡಿಲ್ಲ ಎನ್ನುತ್ತಿದ್ದ ಸಿದ್ದರಾಮಯ್ಯ, ನಿವೇಶನ ಮರಳಿಸುವ ಮೂಲಕ ತಪ್ಪಿತಸ್ಥ ಎಂದು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಈ ಹಿಂದೆ ಸಿಎಂ ಆಗಿದ್ದ ಸಂದರ್ಭದಲ್ಲಿ ಲೋಕಾಯುಕ್ತವನ್ನು ಮುಚ್ಚಿ ಭ್ರಷ್ಟಾಚಾರ ನಿಗ್ರಹ ದಳವನ್ನು ಸ್ಥಾಪಿಸಿದ್ದ ಸಿದ್ದರಾಮಯ್ಯ ತಮ್ಮ ಮೇಲೆ ಯಾವುದೇ ಆರೋಪಗಳ ಬರದಂತೆ ನೋಡಿಕೊಂಡಿದ್ದರು. ರೀಡೂ ಪ್ರಕರಣದಲ್ಲಿ ಕೆಂಪಣ್ಣ ಆಯೋಗ ನೀಡಿದ್ದ ವರದಿಯಲ್ಲಿ ಏನಿದೆ ಎಂಬುದನ್ನು ಸಿದ್ದರಾಮಯ್ಯ ಅವರೇ ಹೇಳಬೇಕು. ಈ ಬಾರಿ ಸಿಎಂ ಆದ ಬಳಿಕ ವಾಲ್ಮೀಕಿ ಅಭಿವೃದ್ಧಿ ನಿಗಮ ಹಾಗೂ ಮುಡಾ ಹಗರಣ ಸಿಎಂ ಕುತ್ತಿಗೆಗೆ ಸುತ್ತಿಕೊಂಡಿವೆ ಎಂದರು.
ರಾಜಕೀಯ ಜೀವನದಲ್ಲಿ ನನ್ನ ಮೇಲೆ ಯಾವುದೇ ಕಪ್ಪು ಚುಕ್ಕೆಯಿಲ್ಲ ಎಂದು ಸಿದ್ದರಾಮಯ್ಯ ಅನೇಕ ಬಾರಿ ಹೇಳಿದ್ದರು. ಕಾಗೆಯಲ್ಲಿ ಹೇಗೆ ಬಿಳಿಯ ಅಂಶ ಹುಡುಕಲು ಸಾಧ್ಯವಿಲ್ಲವೋ ಅದೇ ರೀತಿ ಈಗ ಸಿದ್ದರಾಮಯ್ಯನವರ ಸ್ಥಿತಿಯಾಗಿದೆ. ಈಗಾಲಾದರೂ ಭಂಡತನ ಬಿಟ್ಟು ರಾಜೀನಾಮೆ ನೀಡಬೇಕು. ತನಿಖೆಗೆ ಸಹಕಾರ ನೀಡಬೇಕೆಂದು ಆಗ್ರಹಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಪ್ರಧಾನ ಕಾರ್ಯದರ್ಶಿ ಮಾಲತೇಶ್, ಪ್ರಮುಖರಾದ ಚಂದ್ರಶೇಖರ್, ಕೆ.ವಿ.ಅಣ್ಣಪ್ಪ, ವಿನ್ಸೆಂಟ್ ರೊಡ್ರಿಗಸ್ ಮುಂತಾದವರು ಸುದ್ದಿಗೋಷ್ಠಿಯಲ್ಲಿದ್ದರು.
ನಾಯಕರನ್ನು ಸಂಪರ್ಕಿಸಿ: ಬಿ.ವೈ.ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿರುವುದು ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ. ವಿಜಯೇಂದ್ರ ಬಗ್ಗೆ ಪಕ್ಷದ ಯಾವ ಮುಖಂಡರಿಗಾದರೂ ಅಸಮಾಧಾನವಿದ್ದರೆ ರಾಷ್ಟ್ರೀಯ ನಾಯಕರನ್ನು ಸಂಪರ್ಕಿಸಬೇಕು. ವಿಜಯೇಂದ್ರ ಅವರ ಬಗ್ಗೆ ಬಹಿರಂಗವಾಗಿ ಚರ್ಚಿಸುವುದು ಸರಿಯಲ್ಲ. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪಕ್ಷದ ಚೌಕಟ್ಟು ಮೀರಿ ಮಾತನಾಡುತ್ತಿದ್ದಾರೆ. ಅವರು ರಾಷ್ಟ್ರೀಯ ನಾಯಕರ ಬಳಿಯೇ ಉತ್ತರ ಪಡೆಯಬೇಕು. ಹಾದಿಬೀದಿಯಲ್ಲಿ ಟೀಕೆ ಮಾಡುವುದು ಸರಿಯಲ್ಲ ಎಂದು ಡಿ.ಎಸ್.ಅರುಣ್ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net