

ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ಕಾಡಂಚಿನ ಹಂಗಳ ಸುತ್ತಮುತ್ತಲಿನ ಗ್ರಾಮಗಳ ಜಮೀನುಗಳಲ್ಲಿ ದಾಂಧಲೆ ನಡೆಸುತ್ತಿದ್ದ ಪುಂಡಾನೆಯನ್ನು ಅರಣ್ಯ ಇಲಾಖೆ ಬುಧವಾರ ನಸುಕಿನಲ್ಲಿ ಕಾರ್ಯಾಚರಣೆ ನಡೆಸಿ ಸೆರೆ ಹಿಡಿದಿದೆ.
ಸೆರೆ ಹಿಡಿಯಲಾಗಿರುವ 40 ವರ್ಷ ವಯಸ್ಸಿನ ಗಂಡಾನೆಯನ್ನು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಪರಿಸರ ಸೂಕ್ಷ್ಮ ವಲಯದ ಗುಂಡ್ರೆ ಅರಣ್ಯಕ್ಕೆ ಬಿಡಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಬಂಡೀಪುರದ ಸಾಕಾನೆಗಳ ಜತೆಗೆ ದುಬಾರೆಯಿಂದಲೂ ಆನೆಗಳನ್ನು ಕರೆಸಿ ಇಪ್ಪತ್ತು ದಿನಗಳ ಹಿಂದೆಯೇ ಕಾರ್ಯಾಚರಣೆ ಆರಂಭಿಸಿದ್ದರೂ ಆನೆ ಸೆರೆ ಹಿಡಿಯಲು ಸಾಧ್ಯವಾಗಿರಲಿಲ್ಲ. ಅರಣ್ಯ ಸಿಬ್ಬಂದಿ ಹಾಗೂ ಸಾಕಾನೆಗಳನ್ನು ಕಂಡಕೂಡಲೇ ಕಾಡಾನೆ ಓಡಿಹೋಗುತ್ತಿತ್ತು. ಕಾರ್ಯಾಚರಣೆ ನಿಲ್ಲಿಸಿದ ನಂತರ ಮತ್ತೆ ಜಮೀನುಗಳತ್ತ ಬಂದು ದಾಂಧಲೆ ಆರಂಭಿಸುತ್ತಿತ್ತು. ಇದರಿಂದ ಅರಣ್ಯ ಇಲಾಖೆ ಮತ್ತೊಮ್ಮೆ ಸೆರೆ ಕಾರ್ಯಾಚರಣೆ ಕೈಗೆತ್ತಿಕೊಂಡಿತ್ತು. ದುಬಾರೆಯ ಸಾಕಾನೆ ಶಿಬಿರದ ಕಂಜನ್, ರಾಮ, ಲಕ್ಷ್ಮಣ, ಈಶ್ವರ, ರಾಂಪುರ ಶಿಬಿರದ ರೋಹಿತ ಆನೆಗಳ ನೆರವಿನಿಂದ ಕೂಂಬಿಂಗ್ ನಡೆಸಲಾಯಿತು.
ಬುಧವಾರ ಬೆಳಗ್ಗೆ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ತೆರಳಿ ಪೂಜೆ ಸಲ್ಲಿಸಿ ಕಾರ್ಯಾಚರಣೆ ಆರಂಭಿಸಿ ಪುಂಡಾನೆಯನ್ನು ಗುರುತಿಸಿದರು. ಮುಖ್ಯ ಪಶುವೈದ್ಯ ಡಾ.ಮುಜಿಬ್ ರೆಹಮಾನ್, ಅರಣ್ಯ ಇಲಾಖೆಯ ಪಶುವೈದ್ಯ ಡಾ.ಮಿರ್ಜಾ ವಾಸಿಂ ಸಾಕಾನೆಗಳ ಮೇಲೆ ಕುಳಿತು ಪುಂಡಾನೆಯನ್ನು ಸುತ್ತುವರಿದು ಅರಿವಳಿಕೆ ಚುಚ್ಚುಮದ್ದು ನೀಡಿ ಪ್ರಜ್ಞೆ ತಪ್ಪಿಸಿದರು. ನಂತರ ಸಾಕಾನೆಗಳ ನೆರವಿನಿಂದ ಹಗ್ಗ ಬಿಗಿದು ಕ್ರೇನ್ ಮೂಲಕ ಲಾರಿಗೆ ಹತ್ತಿಸಲಾಯಿತು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರನ್, ಎಸಿಎಫ್ ನವೀನ್, ಆರ್‌ಎಫ್‌ಒ ಮಂಜುನಾಥ್, ಜ್ಞಾನಶೇಖರ್, ಗಜೇಂದ್ರ, ವಿಜಯ್, ಕಾರ್ತಿಕ್, ಗೋಪಾಲಕೃಷ್ಣ, ಆನಂದ್ ನೇತೃತ್ವದಲ್ಲಿ 100ಕ್ಕೂ ಹೆಚ್ಚು ಎಸ್‌ಟಿಪಿಎಫ್ ಮತ್ತು ಲೆಪಾರ್ಡ್ ಟಾಸ್ಕ್‌ಫೋರ್ಸ್ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ರೈತಸಂಘದಿಂದ ಧನ್ಯವಾದ: ಕಳೆದ ಮೂರು ತಿಂಗಳಿನಿಂದ ಬೆಳೆಹಾನಿ ಮಾಡುತ್ತಿದ್ದ ಪುಂಡಾನೆಯನ್ನು ಯಶಸ್ವಿಯಾಗಿ ಸೆರೆಹಿಡಿದ ಅರಣ್ಯಾಧಿಕಾರಿಗಳಿಗೆ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಮಾಧು, ತಾಲೂಕು ಅಧ್ಯಕ್ಷ ದಿಲೀಪ್ ಧನ್ಯವಾದ ಸಲ್ಲಿಸಿದ್ದಾರೆ.