

ಹಾನಗಲ್ಲ: ಮನೆಯ ಹೆಂಚು ತೆಗೆದು ಚಿನ್ನಾಭರಣ ದೋಚಿದ್ದ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಇಲ್ಲಿಯ ಹಾನಗಲ್ಲ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಪಟ್ಟಣದ ಕಲ್ಲಹಕ್ಕಲ ಒಣಿಯ ಮದರಷಾ ಜಾಪರಷಾ ಮಕಾಂದರ, ತೌಷೀಪ ಬಷೀರಅಹ್ಮದ್ ಶೇಖಸನದಿ, ಖ್ವಾಜಾಮೈನುದ್ದೀನ ಭಾಷಾ ಚಿಕ್ಕೇರಿ ಹಾಗೂ ಹಿರೇಕೆರೂರ ತಾಲೂಕಿನ ಚಿಕ್ಕೇರೂರ ಗ್ರಾಮದ ಅಮೀನ ಚಮನಸಾಬ ದ್ಯಾಮನಕೊಪ್ಪ ಬಂಧಿತ ಆರೋಪಿತರು.
ಇವರಿಂದ 1.60 ಲಕ್ಷ ರೂ. ಮೌಲ್ಯದ 16 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. ಇನ್ನೂ 5.40 ಲಕ್ಷ ರೂ. ಮೌಲ್ಯದ 58 ಗ್ರಾಂ ಚಿನ್ನಾಭರಣವನ್ನು ಆರೋಪಿತರು ಚಿನ್ನಾಭರಣದ ಅಂಗಡಿಯಲ್ಲಿ ಅಡವಿಟ್ಟಿದ್ದು ಈ ಕುರಿತು ತನಿಖೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿತರು ಆ. 7ರಂದು ಮಹೇಶ ವಾಲ್ಮೀಕಿ ಎಂಬುವರ ಮನೆಯ ಹೆಂಚು ತೆಗೆದು ಮನೆಯಲ್ಲಿದ್ದ ಚಿನ್ನಾಭರಣ ದೋಚಿದ್ದರು. ಈ ಕುರಿತು ದೂರು ದಾಖಲಿಸಿಕೊಂಡ ಪೊಲೀಸರು ವಿಶೇಷ ತಂಡ ರಚಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಿಪಿಐ ಅನೀಲಕುಮಾರ ರಾಠೋಡ, ಪಿಎಸ್ಐ ಸಂಪತ್ತ ಆನಿಕಿವಿ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿದ್ದರು.