

ಬೆಳಗಾವಿ: ಒಂದು ತಿಂಗಳು ಉಪವಾಸ ಆಚರಿಸುವ ರಂಜಾನ್ ಪ್ರಾರಂಭವಾಗಿದ್ದು ತಾವೆಲ್ಲ ತಾಳ್ಮೆ, ಶಾಂತಿ ಮತ್ತು ತ್ಯಾಗದ ಸಂಕೇತದಂತೆ ನಿಮ್ಮ ಮನೆಗಳಲ್ಲಿಯೇ ಇದ್ದು ಶ್ರದ್ಧೆ ಮತ್ತು ಭಕ್ತಿಯಿಂದ ಹಬ್ಬವನ್ನು ಆಚರಿಸಬೇಕು ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಮುಸ್ಲಿಂ ಮುಖಂಡರಿಗೆ ಸಲಹೆ ನೀಡಿದ್ದಾರೆ.
ಗೋಕಾಕ ನಗರದ ತಮ್ಮ ಗೃಹ ಕಚೇರಿಯಲ್ಲಿ ತಾಲೂಕಿನ ಮುಸ್ಲಿಂ ಸಮಾಜದ ಮುಖಂಡರೊಂದಿಗೆ ಭಾನುವಾರ ಸಭೆ ನಡೆಸಿದ ಸಚಿವರು, ಲಾಕ್‌ಡೌನ್ ಹಿನ್ನೆಲೆಯಲ್ಲಿ ಕಡ್ಡಾಯವಾಗಿ ಮನೆಯಲ್ಲಿಯೇ ಇದ್ದು ಪ್ರಾರ್ಥನೆ ಸಲ್ಲಿಸಬೇಕು. ಪ್ರಾರ್ಥನೆ ವೇಳೆ ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಮೂಲಕ ಎಲ್ಲರೂ ಮಾರಕ ಕರೊನಾ ವೈರಸ್ ನಿಯಂತ್ರಣಕ್ಕೆ ಸಹಕಾರ ನೀಡಬೇಕು ಎಂದರು.
ಕರೊನಾ ಸೋಂಕು ಜಗತ್ತಿನಾದ್ಯಂತ ವ್ಯಾಪಕವಾಗಿ ಹರಡುತ್ತಿದ್ದು, ಅದನ್ನು ಶಾಶ್ವತವಾಗಿ ನಿರ್ಮೂಲನೆ ಮಾಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೀಡಿರುವ ಸಲಹೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ದಿನನಿತ್ಯದ ಅಗತ್ಯ ವಸ್ತುಗಳನ್ನು ಮನೆ ಬಾಗಿಲಿಗೇ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ. ಹೀಗಾಗಿ ಅನವಶ್ಯಕವಾಗಿ ಯಾರೂ ರಸ್ತೆಗಿಳಿಯದಂತೆ ಸಮುದಾಯದ ಮುಖಂಡರು ಎಚ್ಚರವಹಿಸಬೇಕು ಎಂದು ಮನವಿ ಮಾಡಿದರು.
ಮುಖಂಡರಾದ ಎಸ್.ಎ.ಕೊತವಾಲ, ಅಮೀರಸಾಬ ಹಾಜಿ, ಕುತಬುದ್ದೀನ್ ಬಸ್ಸಾಪುರ, ಅಬ್ಬಾಸ್ ದೇಸಾಯಿ, ಮೋಸಿನ ಖೋಜಾ, ಜಾವೇದ ಗೋಕಾಕ ಇದ್ದರು.