16ಕ್ಕೆ ಹೊರನಾಡಿನಲ್ಲಿ ಕೋಟಿ ಕುಂಕುಮಾರ್ಚನೆ

download (4)
ಶ್ರೀ ಅನ್ನಪೂರ್ಣೇಶ್ವರೀ ದೇವಾಲಯ
Published on

ಕಳಸ: ಹೊರನಾಡಿನ ಆದಿಶಕ್ಯಾತ್ಮಕ ಶ್ರೀ ಅನ್ನಪೂರ್ಣೇಶ್ವರೀ ದೇವಾಲಯದಲ್ಲಿ ಆ.16 ರಂದು ವರಮಹಾಲಕ್ಷ್ಮೀ ವ್ರತ, ಕೋಟಿ ಕುಂಕುಮಾರ್ಚನೆ, ಲಕ್ಷ ದೂರ್ವಾಚನೆ ಮತ್ತು ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಧರ್ಮಕರ್ತ ಜಿ.ಭೀಮೇಶ್ವರ ಜೋಷಿ ತಿಳಿಸಿದ್ದಾರೆ.
ಅಂದು ಬೆಳಗ್ಗೆ 9ಗಂಟೆಗೆ ಶ್ರೀ ವರಮಹಾಲಕ್ಷ್ಮೀ ವ್ರತ ಆಚರಣೆ, ಲಕ್ಷ ದೂರ್ವಾರ್ಚನೆ, ಕೋಟಿ ಕುಂಕುಮಾರ್ಚನೆ ಆರಂಭವಾಗಲಿದೆ. ಮಧ್ಯಾಹ್ನ 12 ಗಂಟೆಗೆ ಶ್ರೀ ಲಲಿತಾ ಕಲಾ ಮಂಟಪದಲ್ಲಿ ಶ್ರೀ ಕ್ಷೇತ್ರದ ಗ್ರಾಮೀಣಾಭಿವೃದ್ಧಿ ಯೋಜನೆಯ ಗೃಹಲಕ್ಷ್ಮೀ ಯೋಜನೆಯಡಿ ಉಚಿತ ಹೆಂಚು ವಿತರಣೆ, ಆನಂದ ಜ್ಯೋತಿ ಯೋಜನೆಯಡಿ ವಿದ್ಯುತ್ ಸಂಪರ್ಕ ಪತ್ರ ವಿತರಣೆ, ಕೃಷಿ ಸಮೃದ್ಧಿ ಯೋಜನೆಯಡಿ ರೈತರಿಗೆ ಕೃಷಿ ಉಪಕರಣಗಳ ವಿತರಣೆ, ಅನ್ನದಾಸೋಹ ಯೋಜನೆಯಡಿ ಸರ್ಕಾರಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ ಮತ್ತು ಆಯ್ದ ದೇವಸ್ಥಾನಗಳಿಗೆ ತಟ್ಟೆ, ಲೋಟಗಳ ವಿತರಣೆ, ಮಹಿಳಾಭಿವೃದ್ಧಿ ಯೋಜನೆಡಿ ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಣೆ, ಶೈಕ್ಷಣಿಕ ಅಭಿವೃದ್ಧಿ ಯೋಜನೆಯಡಿ ಕಳಸ ತಾಲೂಕಿನ ಶಾಲಾ ಮಕ್ಕಳಿಗೆ ಟಿಪ್ಪಣಿ ಪುಸ್ತಕ ವಿತರಣೆ, ಪ್ರೌಢ ಶಾಲೆ, ಪದವಿ ಪೂರ್ವ ಮತ್ತು ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿಕೆಯಲ್ಲಿ ಮಾಹಿತಿ ನೀಡಿದ್ದಾರೆ.
ಅಂದು ನಡೆಯುವ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ವಿ.ಸೋಮಣ್ಣ, ಉಪಸಭಾಪತಿ ಎಂ.ಕೆ.ಪ್ರಾಣೇಶ್, ಸಂಸದ ಕೋಟಾ ಶ್ರೀನಿವಾಸ ಪೂಜಾರಿ, ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ, ವಿದಾನ ಪರಿಷತ್ ಸದಸ್ಯರಾದ ಸಿ.ಟಿ.ರವಿ, ಎಸ್.ಎಲ್.ಭೋಜೆಗೌಡ, ಕಳಸ ಬಿಜೆಪಿ ಅಧ್ಯಕ್ಷ ನಾಗಭೂಷಣ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೇಣಿಕ್ ಜೈನ್, ಜೆಡಿಎಸ್ ಅಧ್ಯಕ್ಷ ಎಂ.ಬಿ.ಸಂತೋಷ್, ಕೆಸಿಎ ಬ್ಯಾಂಕ್ ಅಧ್ಯಕ್ಷ ಜಿ.ಕೆ.ಮಂಜಪ್ಪಯ್ಯ, ಹೊರನಾಡು ಗ್ರಾಪಂ ಅಧ್ಯಕ್ಷ ಮಧುಪ್ರಸಾದ್ ಜೈನ್ ಭಾಗವಹಿಸಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಂಜೆ 6.30 ರಿಂದ ಬೆಂಗಳೂರಿನ ಡಾ.ವಿದುಷಿ ಪ್ರಿಯಾ ಗಣೇಶ್ ಸಮುದ್ಭವ ಮತ್ತು ಸಾಂಸ್ಕೃತಿಕ ಸಂಸ್ಥೆ ತಂಡದಿಂದ ಭರತ ನಾಟ್ಯ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net