

ಮಂಗಳೂರು : ಅಧಿಕಾರಕ್ಕೆ ಬಂದ ಕೇವಲ ನೂರು ದಿನಗಳಲ್ಲೇ ಆಡಳಿತ ವಿರೋಧಿ ಅಲೆಗೆ ಗುರಿಯಾಗಿರುವ ಸರ್ಕಾರ ಯಾವುದಾದರೂ ಇದ್ದರೆ ಅದು ರಾಜ್ಯದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮಾತ್ರ . ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದು, ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಜಾರಿ ಮಾಡಲೂ ಆಗದೆ ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಹಳ್ಳಹಿಡಿಸಿದ ಕೀರ್ತಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಸಲ್ಲಬೇಕು ಎಂದು ರಾಜ್ಯ ಬಿಜೆಪಿ ವಕ್ತಾರ ಅಶ್ವತ್ಥನಾರಾಯಣ ಹೇಳಿದರು.
ಸೋಮವಾರ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ ಕಾಂಗ್ರೆಸ್ ಅಧಿಕಾರ ಬಂದಾಗಲೆಲ್ಲ ಭ್ರಷ್ಟಾಚಾರ ತಾಂಡವವಾಡುತ್ತದೆ. ದೇಶ ವಿರೋಧಿ ಶಕ್ತಿಗಳು ತಲೆ ಎತ್ತುತ್ತವೆ. ಬಿಜೆಪಿ ಸರ್ಕಾರದ ಮೇಲೆ ಆರೋಪ ಮಾಡಿದ್ದ ಗುತ್ತಿಗೆದಾರರ ಸಂಘದ
ಅಧ್ಯಕ್ಷ ಕೆಂಪಯ್ಯ ಈಗ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದರು.
ಅಧಿಕಾರಿಗಳ ವರ್ಗಾವಣೆ ನೆಪದಲ್ಲಿ ಸಾರ್ವಜನಿಕರ ಹಣ ಲೂಟಿ ಮಾಡಿ ಕರ್ನಾಟಕದ ಹಣವನ್ನು ಸುಲಿಗೆ ಮಾಡಿದ್ದಾರೆ. ತೆಲಂಗಾಣ ಚುನಾವಣೆ ಸಂದರ್ಭದಲ್ಲಿ 42 ಕೋಟಿ ರೂ ಹಣ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಉಮಾಪತಿ ಮನೆಯಲ್ಲಿ ಪತ್ತೆಯಾಗಿತ್ತು. ಇದು ಕಾಂಗ್ರೆಸ್ ಭ್ರಷ್ಟಾಚಾರಕ್ಕೆ ಹಿಡಿದ ಕನ್ನಡಿ ಎಂದು ಅವರು ವಾಗ್ದಾಳಿ ನಡೆಸಿದರು.
ದ.ಕ ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ, ದ.ಕ.ಲೋಕಸಭಾ ಕ್ಷೇತ್ರದ ಚುನಾವಣಾ ಪ್ರಭಾರಿ ಕ್ಯಾ.ಗಣೇಶ್ ಕಾರ್ಣಿಕ್, ಚುನಾವಣಾ ಸಂಚಾಲಕ ನಿತಿನ್ ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ರವಿಶಂಕರ ಮಿಜಾರು ಹಾಗೂ ಕೋಶಾಧಿಕಾರಿ ಸಂಜಯ ಪ್ರಭು ಉಪಸ್ಥಿತರಿದ್ದರು.