ಚರಂಡಿ ನೀರಿನ ಜತೆ ಮನೆ ಸೇರಿದ ಟೊಮ್ಯಾಟೊ

web 3
Published on

ಚಿಕ್ಕಮಗಳೂರು: ವರ್ತಕನೋರ್ವ ಬೆಲೆ ಕುಸಿತದಿಂದ ಬೇಸರಗೊಂಡು ರಸ್ತೆ ಬದಿಗೆ ಸುರಿದಿದ್ದ ಭಾರಿ ಪ್ರಮಾಣದ ಟೊಮ್ಯಾಟೊ ಮಳೆ ನೀರಲ್ಲಿ ಕೊಚ್ಚಿಹೋಗಿ ಜ್ಯೋತಿನಗರ ಬಡಾವಣೆಯ ಮನೆಗಳಿಗೆ ನುಗ್ಗಿ ಅವಾಂತರ ಸೃಷ್ಟಿಸಿದೆ.

ಎಪಿಎಂಸಿಯಲ್ಲಿ ಮಾರಾಟಕ್ಕೆ ಮುಂದಾಗಿದ್ದ ವರ್ತಕನೋರ್ವ ಬೆಲೆ ಕುಸಿತ ಕಂಡ ಹಿನ್ನೆಲೆಯಲ್ಲಿ ಲಾರಿಯಲ್ಲಿ ತಂದಿದ್ದ ಟೊಮ್ಯಾಟೊ ಹಣ್ಣುಗಳನ್ನು ಜ್ಯೋತಿನಗರದ ಸಂತ ಜೋಸೆಫರ ಬಾಲಕರ ಕಾನ್ವೆಂಟ್ ಎದುರು ಸುರಿದಿದ್ದರು ಎನ್ನಲಾಗಿದೆ. ಗುರುವಾರ ರಾತ್ರಿ ಸುರಿದ ಭಾರಿ ಮಳೆಗೆ ಜ್ಯೋತಿನಗರ ಬಡಾವಣೆಯ ಚರಂಡಿಗಳು ಕಟ್ಟಿಕೊಂಡು, ನಂತರ ನೀರು ಉಕ್ಕಿ ಹರಿದಿದ್ದರಿಂದ ಹಣ್ಣುಗಳು ಬಡಾವಣೆಯ ರಸ್ತೆ ಮತ್ತು ಮನೆಗಳನ್ನು ಸೇರಿವೆ.

ಚರಂಡಿ ತ್ಯಾಜ್ಯ ಮನೆ ಹಾಗೂ ಕುಡಿಯುವ ನೀರಿನ ತೊಟ್ಟಿಗೆ ಸೇರಿ ನಿವಾಸಿಗಳು ಸಮಸ್ಯೆಗೆ ಒಳಗಾಗಿದ್ದಾರೆ. ಶುಕ್ರವಾರ ಬೆಳಗ್ಗೆ ಪೌರಾಯುಕ್ತ ಬಸವರಾಜ್ ಸ್ಥಳಕ್ಕೆ ಭೇಟಿ ನೀಡಿದ್ದರು. ತಕ್ಷಣ ಪೌರ ಕಾರ್ವಿುಕರನ್ನು ಕರೆಸಿ ಕೊಳಚೆ ನುಗ್ಗಿದ ರಸ್ತೆ ಮತ್ತು ಮನೆಗಳನ್ನು ಶುಚಿಗೊಳಿಸಿದ್ದಾರೆ.

ಆಯುಕ್ತ ಬಸವರಾಜ್ ಮಾತನಾಡಿ, ಗುರುವಾರ ತಡ ರಾತ್ರಿ ನಗರಸಭೆ ಮಾಜಿ ಸದಸ್ಯ ನಟರಾಜ್ ಈ ಘಟನೆ ಬಗ್ಗೆ ತಿಳಿಸಿದ್ದು, ತಕ್ಷಣ ಅವರು ಮಳೆ ನಡುವೆ ಸ್ಪಂದಿಸಲು ಯತ್ನಿಸಿದ್ದಾರೆ. ಕುಡಿಯುವ ನೀರಿನ ತೊಟ್ಟಿಗಳು ಸಹ ಗಲೀಜಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಶುಚಿಗೊಳಿಸಿ ಇಡೀ ಬಡಾವಣೆಯನ್ನು ಸ್ಯಾನಿಟೈಸ್ ಮಾಡಲಾಗಿದೆ ಎಂದರು.

ಇಷ್ಟೆಲ್ಲ ಸಮಸ್ಯೆಯಾದರೂ ಎಪಿಎಂಸಿ ಕಾರ್ಯದರ್ಶಿ ಸ್ಥಳಕ್ಕೆ ಬಂದಿಲ್ಲ. ದೂರವಾಣಿ ಕರೆ ಮಾಡಿದರೂ ಸ್ವೀಕರಿಸಿಲ್ಲ. ಕಳೆದ ವಾರ ಸಹ ಎಪಿಎಂಸಿ ಆವರಣದಲ್ಲಿ ಮಾಸ್ಕ್ ಧರಿಸದವರಿಗೆ ದಂಡ ವಿಧಿಸುವ ಸಂದರ್ಭ ಟೊಮ್ಯಾಟೊ, ತರಕಾರಿಯನ್ನು ಎಲ್ಲೆಂದರಲ್ಲಿ ಸುರಿಯಬಾರದು ಎಂದು ಎಚ್ಚರಿಸಿದ್ದೆವು. ಅದಕ್ಕೊಂದು ಸ್ಥಳ ಕಾಯ್ದಿರಿಸಿದರೆ ನಗರಸಭೆಯಿಂದ ಕೊಂಡೊಯ್ದು ಗೊಬ್ಬರ ಮಾಡಿಸಲಾಗುವುದು ಎಂದು ತಿಳಿಸಲಾಗಿತ್ತು. ಆದರೂ ಸ್ಪಂದಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net