

ಉಡುಪಿ: ಕೃಷ್ಣಮಠದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಶುಕ್ರವಾರ ಕೃಷ್ಣವೇಷ ಸ್ಪರ್ಧೆ ಆಯೋಜಿಸಲಾಗಿದ್ದು, ಮಠದ ಪರಿಸರದಲ್ಲಿ ಕೃಷ್ಣ ವೇಷಧಾರಿ ಪುಟಾಣಿಗಳ ಕಲರವ ಮನಸೂರೆಗೊಳ್ಳುತ್ತಿದೆ. ಮುದ್ದುಕೃಷ್ಣನ ವೇಷ ಭೂಷಣ ತೊಟ್ಟ ಮಕ್ಕಳ ನಲಿದಾಟ, ತುಂಟಾಟ ನಂದಗೋಕುಲ ಮರು ಸೃಷ್ಟಿಸಿದಂತೆ ಭಾಸವಾಗುತ್ತಿದೆ.
ಮಧ್ವಾಂಗಣದಲ್ಲಿ 3 ವರ್ಷದೊಳಗಿನ ಮಕ್ಕಳಿಗೆ ಮುದ್ದುಕೃಷ್ಣ ಸ್ಪರ್ಧೆ ಆಯೋಜಿಸಲಾಗಿದ್ದು, 140ಕ್ಕೂ ಅಧಿಕ ಮಕ್ಕಳು ನೋಂದಣಿ ಮಾಡಿಕೊಂಡಿದ್ದಾರೆ. ಭೋಜನಶಾಲೆ ಮಾಳಿಗೆಯಲ್ಲಿ 4 ರಿಂದ 6 ವರ್ಷ ಮಕ್ಕಳ ಬಾಲಕೃಷ್ಣ ಸ್ಪರ್ಧೆಯಲ್ಲಿ 100ಕ್ಕೂ ಅಧಿಕ ಮಕ್ಕಳು ಭಾಗವಹಿಸಿದ್ದರು. ಅನ್ನಬ್ರಹ್ಮದಲ್ಲಿ ನಡೆದ 7 ರಿಂದ 10 ವರ್ಷದೊಳಗಿನ ಮಕ್ಕಳ ಕಿಶೋರ ಕೃಷ್ಣ ಸ್ಪರ್ಧೆಯಲ್ಲಿ 80ಕ್ಕೂ ಅಧಿಕ ಮಕ್ಕಳು ಪಾಲ್ಗೊಂಡಿದ್ದರು. ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳಿಗೆ ಪ್ರಮಾಣ ಪತ್ರ ಹಾಗೂ ಕೃಷ್ಣ ಪ್ರಸಾದ ವಿತರಿಸಲಾಯಿತು.
ಭಕ್ತರ ದಂಡು
ಕಳೆದ 2 ವರ್ಷಗಳಿಂದ ಕೋವಿಡ್ ಹಿನ್ನೆಲೆಯಲ್ಲಿ ಕೃಷ್ಣಾಷ್ಟಮಿ ಸಂಪ್ರದಾಯಕ್ಕೆ ಮಾತ್ರ ಸೀಮಿತಗೊಳಿಸಲಾಗಿತ್ತು. ಆದರೆ ಈ ಬಾರಿ ವೈಭವದಿಂದ ಕೃಷ್ಣಾಷ್ಟಮಿ ಆಚರಿಸಲಾಗುತ್ತಿದ್ದು, ಹೊರ ಜಿಲ್ಲೆಗಳಿಂದ ಮಾತ್ರವಲ್ಲದೆ ಕೇರಳ, ತಮಿಳುನಾಡು, ಆಂಧ್ರ ಪ್ರದೇಶ ಸಹಿತ ವಿವಿಧ ರಾಜ್ಯಗಳ ಭಕ್ತರೂ ಉಡುಪಿಗೆ ಆಗಮಿಸಿದ್ದಾರೆ. ಹೀಗಾಗಿ ದೇವರ ದರ್ಶನಕ್ಕೆ ಗೀತಾಮಂದಿರದ ವರೆಗೆ ಸರತಿ ಸಾಲು ಉಂಟಾಗಿದ್ದು, ರಥಬೀದಿಯಲ್ಲಿಯೂ ಅಷ್ಟಮಿ ಖರೀದಿ ಭರಾಟೆ ಜೋರಾಗಿದೆ.
ನಗರದಲ್ಲಿ ವೇಷಗಳ ಮೆರುಗು
ಶ್ರೀಕೃಷ್ಣಜನ್ಮಾಷ್ಟಮಿ ಸಂಭ್ರಮ ವಿವಿಧ ವೇಷಧಾರಿಗಳು ಕಣ್ಮನ ಸೆಳೆಯುತ್ತಿದ್ದಾರೆ. ಶ್ರೀಕೃಷ್ಣಮಠ ರಥಬೀದಿ ಸೇರಿದಂತೆ ನಗರದಲ್ಲೆಡೆ ಬಾಲಕೃಷ್ಣರ, ಯಕ್ಷ, ಹುಲಿವೇಷ ಸೇರಿದಂತೆ ನಾನಾಬಗೆಯ ವೇಷಧಾರಿಗಳು ಗಮನ ಸೆಳೆಯುತ್ತಿದ್ದಾರೆ. ನಗರದ ಬೀದಿಗಳಲ್ಲಿ ಪ್ರಮುಖ ಹುಲಿವೇಷ ತಂಡಗಳು, ಯಕ್ಷಗಾನದ ವಿವಿಧ ವೇಷಗಳು, ರಕ್ಕಸ ವೇಷಗಳು, ಟ್ಯಾಬ್ಲೋ ತಂಡಗಳು ಎಲ್ಲೆಡೆ ಕಾಣಸಿಗುತ್ತಿವೆ. ಅಂಗಡಿ, ಮುಂಗಟ್ಟು, ಹೊಟೆಲ್‌ಗಳಲ್ಲಿ ನೃತ್ಯ ಪ್ರದರ್ಶನ ನೀಡಿ ಹಣ ಸಂಗ್ರಹಿಸುವ ದೃಶ್ಯ ಸಾಮಾನ್ಯವಾಗಿದೆ. ನಗರದೆಲ್ಲೆಡೆ ಸುಮಾರು 30ಕ್ಕೂ ಹೆಚ್ಚು ಹುಲಿವೇಷಧಾರಿಗಳ ತಂಡ ಜನರನ್ನು ರಂಜಿಸುತಿದ್ದಾರೆ.