

ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ
ಜವನೆರ್ ಬೆದ್ರ ಸಂಘಟನೆಯು ಹಲವರು ವರ್ಷಗಳಿಂದ ಮೂಡುಬಿದಿರೆ ಪರಿಸರದಲ್ಲಿ ಮಾದರಿ ಸಮಾಜಸೇವೆಯನ್ನು ಮಾಡುತ್ತಿದೆ. ಸ್ವಚ್ಛ ಮೂಡುಬಿದಿರೆ ಪರಿಕಲ್ಪನೆಯನ್ನೂ ಅರ್ಥಪೂರ್ಣವಾಗಿ ಮಾಡುತ್ತಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಶ್ಲಾಘಿಸಿದರು.
ಜವನೆರ್ ಬೆದ್ರ ಫೌಂಡೇಶನ್ ಕೃಷ್ಣೋತ್ಸವದ ಪ್ರಯುಕ್ತ ಆಡಳಿತ ಸೌಧದ ಮುಂಭಾಗ ಭಾನುವಾರ ಆಯೋಜನೆಗೊಂಡ ಅಷ್ಟಮಿಯ ಗೊಬ್ಬು-ಸಾಂಪ್ರದಾಯಿಕ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಅವರು, ಜವನೆರ್ ಬೆದ್ರ ಸಂಘಟನೆ ನಿರಂತರ ಹಮ್ಮಿಕೊಳ್ಳುವ ರಕ್ತದಾನ ಅಭಿಯಾನ, ಪರಿಸರ ಜಾಗೃತಿ ಕಾರ್ಯ ಮಾದರಿಯಾಗಿದೆ ಎಂದರು.
ಬಿಜೆಪಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಸುದರ್ಶನ್ ಎಂ., ವಿದ್ಯುತ್ ಗುತ್ತಿಗೆದಾರ ಕುಮಾರ್ ಪೂಜಾರಿ, ಉದ್ಯಮಿಗಳಾದ ಜಾವೇದ್ ಶೇಕ್, ಗಂಗಾಧರ್ ಶೆಟ್ಟಿ, ರವಿ ಪೂಜಾರಿ, ಮುರುಳೀಧರ್ ಕೋಟ್ಯಾನ್, ರಾಜೇಶ್ ಕೋಟೆಕಾರ್, ಡಾ.ಶಾಮ್ ಪ್ರಸಾದ್, ಪ್ರೇಮಾ ರಾವ್, ಸಂಘಟನೆ ಸ್ಥಾಪಕ ಅಧ್ಯಕ್ಷ ಅಮರ್ ಕೋಟೆ, ದಿನೇಶ್ ಕುಮಾರ್, ನಾರಾಯಣ ಪದುಮಲೆ, ರಂಜಿತ್ ಶೆಟ್ಟಿ, ಅಬ್ಬಕ್ಕ ಬ್ರಿಗೇಡ್ ಸಂಚಾಲಕಿ ಸಹನಾ ನಾಯಕ್, ಮನು ಒಂಟಿಕಟ್ಟೆ, ಪ್ರಥಮ್ ಹಾಗೂ ಸಂಘಟನೆಯ ಸದಸ್ಯರು ಭಾಗವಹಿಸಿದರು. ಸಂದೀಪ್ ಕೆಲ್ಲಪುತ್ತಿಗೆ ಹಾಗೂ ಗುರುಪ್ರಸಾದ್ ಬಿ.ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.
ಗೌರವಾರ್ಪಣೆ, ಗ್ರಾಮೀಣ ಕ್ರೀಡಾಕೂಟ
ರಾಷ್ಟ್ರಮಟ್ಟದ ಕಬಡ್ಡಿ ತೀರ್ಪುಗಾರರಾಗಿ ಆಯ್ಕೆಯಾದ ಸಂಘಟನೆಯ ಕ್ರೀಡಾ ಕಾರ್ಯದರ್ಶಿ ಭಾಸ್ಕರ್ ಪಾಲಡ್ಕ ಅವರನ್ನು ಗೌರವಿಸಲಾಯಿತು. ಅಷ್ಟಮಿಯ ಸಾಂಪ್ರದಾಯಿಕ ಕ್ರೀಡೆಗಳಾದ ತಪ್ಪಂಗೈ, ಲಗೋರಿ, ಹಗ್ಗ ಜಗ್ಗಾಟ, ಮಡಿಕೆ ಹೊಡೆಯುವುದು, ಮಾನವ ಗೋಪುರ ಸಹಿತ ವಿವಿಧ ಆಟೋಟಗಳು ಜರುಗಿದವು.