

ವಿಜಯವಾಣಿ ಸುದ್ದಿಜಾಲ ಲಬುರಗಿ
ಕೋಲಾರದಲ್ಲಿ ನಡೆದ ಸರ್ಕಾರದ ಜನತಾದರ್ಶನ ಕಾರ್ಯಕ್ರಮದಲ್ಲಿ ಕೋಲಾರ ಸಂಸದ ಎಸ್ ಮುನಿಸ್ವಾಮಿ ಅವರ ಜೊತೆ ಅನುಚಿತವಾಗಿ ವರ್ತಿಸಿ, ಜನಪ್ರತಿ ಎಂಬ ಕನಿಷ್ಠ ಸೌಜನ್ಯವನ್ನೂ ತೋರದೆ ಅವರ ಮೇಲೆ ದಬ್ಬಾಳಿಕೆ ನಡೆಸಿ ರಾಜ್ಯ ಕಾಂಗ್ರೆಸ್ ಸರ್ಕಾರದ ಏಜೆಂಟರಂತೆ ವರ್ತಿಸಿರುವ ಎಸ್‌ಪಿ ನಾರಾಯಣ ಅವರ ಕೃತ್ಯವನ್ನು ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷರಾದ ಡಾ. ಅಂಬಾರಾಯ ಅಷ್ಠಗಿ ಬಲವಾಗಿ ಖಂಡಿಸಿದ್ದಾರೆ.
೮ ವಿಧಾನಸಭಾ ಕ್ಷೇತ್ರಗಳನ್ನು ಪ್ರತಿನಿಧಿಸುವ ಒಬ್ಬ ದಲಿತ ಸಂಸದರ ಮೇಲಿನ ದೌರ್ಜನ್ಯವು ಈಡಿ ದೇಶದ ದಲಿತ ಜನಪ್ರತಿನಿಧಿಗಳಿಗಾದ ಅವಮಾನವೇ ಸರಿ, ಈ ಘಟನೆ ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದ್ದು, ಸಂವಿಧಾನ ವಿರೋಧಿ ಧೋರಣೆಯಾಗಿದೆ. ಈ ಘಟನೆಯಿಂದ ಕಾಂಗ್ರೆಸ್ ಪಕ್ಷವು ದಲಿತರ ಬಗ್ಗೆ ಹೊಂದಿರುವ ತಾತ್ಸಾರ ಮನೋಭಾವವನ್ನು ಸೂಚಿಸುತ್ತದೆ ಎಂದು ಡಾ. ಅಷ್ಠಗಿ ಕಾಂಗ್ರೆಸ್ ಪಕ್ಷಕ್ಕೆ ಕುಟುಕಿದ್ದಾರೆ. ಈ ಘಟನೆಯಿಂದ ದಲಿತರ ಸ್ವಾಭಿಮಾನಕ್ಕೆ ಧಕ್ಕೆಯಾಗಿದ್ದು ಈ ಕೂಡಲೇ ಸಾರ್ವಜನಿಕ ಕಾರ್ಯಕ್ರಮದ ವೇದಿಕೆಯಿಂದ ಹೊರ ಹಾಕಿದ ಪೊಲೀಸರನ್ನು ಅಮಾನತು ಮಾಡಿ ಸಿಬಿಐ ತನಿಖೆಗೆ ಒಳಪಡಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಡಾ. ಅಂಬಾರಾಯ ಅಷ್ಠಗಿ ಆಗ್ರಹಿಸಿದ್ದಾರೆ.