

ಮುಂಡರಗಿ: ಏತ ನೀರಾವರಿ ಯೋಜನೆಯ ಮುಖ್ಯ ಕಾಲುವೆಯ ನೀರು ನುಗ್ಗಿದ್ದರಿಂದ ಬೆಳೆ ಹಾನಿಯಾಗಿದ್ದು ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಹಮ್ಮಿಗಿ ಗ್ರಾಮದ ರೈತ ಶಿವರಾಜ ಹೊಳೆಯಾಚಿ ಅವರಿಗೆ ಅಧಿಕಾರಿಗಳು ಗುರುವಾರ ಪರಿಹಾರದ ಭರವಸೆ ನೀಡಿದ್ದಾರೆ.
‘ತಾಲೂಕಿನ ಹಮ್ಮಿಗಿ ಭಾಗದಲ್ಲಿ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಬ್ಯಾರೇಜ್ನ ಎಡಭಾಗದ ಮುಖ್ಯಕಾಲುವೆ ಮೂಲಕ ಬ್ಯಾರೇಜ್ನಲ್ಲಿ ಸಂಗ್ರಹವಿರುವ ಹಿನ್ನೀರು ಹಾಗೂ ಮಳೆಯಾದ ಸಂದರ್ಭದಲ್ಲಿ ಹೆಚ್ಚು ಪ್ರಮಾಣದಲ್ಲಿ ಕಾಲುವೆಯಲ್ಲಿ ನೀರು ತುಂಬಿ ಪಕ್ಕದ ರೈತರ ಜಮೀನುಗಳಿಗೆ ನುಗ್ಗುತ್ತಿರುವುದರಿಂದ ಬೆಳೆ ಹಾನಿಯಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲಿಸಿ ಸೂಕ್ತ ಪರಿಹಾರ ನೀಡಬೇಕು ಎಂದು ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಆದರೆ, ಯಾರೊಬ್ಬರೂ ಸಮಸ್ಯೆಗೆ ಸ್ಪಂದಿಸುತ್ತಿಲ್ಲ’ ಎಂದು ಆರೋಪಿಸಿ ರೈತ ನೀರಾವರಿ ಇಲಾಖೆ ಕಾರ್ಯಾಲಯದಲ್ಲಿ ನೇಣು ಬಿಗಿದುಕೊಂಡು ಬುಧವಾರ ಆತ್ಮಹತ್ಯೆಗೆ ಯತ್ನಿಸಿದ್ದರು.
ಘಟನೆ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಎಇಇ ರಮೇಶ ಅವರು, ರೈತರೊಂದಿಗೆ ರ್ಚಚಿಸಿ ಹಾನಿಗೊಳಗಾದ ಬೆಳೆಗೆ ಪರಿಹಾರ ದೊರಕಿಸಿಕೊಡಲು ಈಗಾಗಲೇ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಿ ಮಾಹಿತಿ ನೀಡಲಾಗಿದೆ. ಪರಿಹಾರ ಕೊಡಿಸುವ ಕೆಲಸ ಮಾಡಲಾಗುವುದು ಎಂದು ಭರವಸೆ ನೀಡಿದರು. ಅಲ್ಲದೆ, ಅಧಿಕಾರಿಗಳ ತಂಡ ಗುರುವಾರ ಸ್ಥಳ ಪರಿಶೀಲಿಸಿ ಕಾಲುವೆಯಲ್ಲಿನ ನೀರು ಹಾಗೂ ಹಳ್ಳಕ್ಕೆ ಹರಿದು ಹೋಗುವ ಸ್ಥಳದಲ್ಲಿ ಬ್ಲಾಕ್ ಆಗಿದ್ದನ್ನು ಗಮನಿಸಿ ಜೆಸಿಬಿಯಿಂದ ಸಮಸ್ಯೆ ಪರಿಹರಿಸಿ ಜಮೀನಿಗೆ ನೀರು ನುಗ್ಗದಂತೆ ಕ್ರಮ ಕೈಗೊಂಡಿದ್ದಾರೆ.
ಬ್ಯಾರೇಜ್ ಹಿನ್ನೀರಿನಿಂದ ಬರುವ ನೀರು ಮತ್ತು ಮಳೆಯಿಂದಾಗಿ ಬರುವ ನೀರು ಜಮೀನಿಗೆ ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾನಿಯಾಗುತ್ತಿದೆ. 2 ಎಕರೆ ಭತ್ತ ನಾಟಿ ಮಾಡಲಾಗಿತ್ತು. ನೀರು ಹರಿದು ಸಂಪೂರ್ಣ ನಾಶವಾಗಿದೆ. ಮೂರ್ನಾಲ್ಕು ವರ್ಷದಿಂದ ರೈತರೆಲ್ಲರೂ ಇದೇ ರೀತಿ ಬೆಳೆ ಹಾನಿ ಅನುಭವಿಸುತ್ತಿದ್ದೇವೆ. ಅಧಿಕಾರಿಗಳು ಸಮಸ್ಯೆ ಸರಿಪಡಿಸುವ ಕೆಲಸ ಮಾಡಬೇಕು. ಹಾನಿಗೊಂಡ ಬೆಳೆಗೆ ಸೂಕ್ತ ಪರಿಹಾರ ಕಲ್ಪಿಸಬೇಕು. | ಶಿವರಾಜ ಹೊಳೆಯಾಚಿ ಆತ್ಮಹತ್ಯೆಗೆ ಯತ್ನಿಸಿದ ಹಮ್ಮಿಗಿ ರೈತ
ಕಾಲುವೆ ನೀರು ತುಂಬಿ ಹಳ್ಳಕ್ಕೆ ಹರಿದು ಹೋಗುವ ಭಾಗದಲ್ಲಿ ಕೆಲ ರೈತರು ಹಳ್ಳ ಒತ್ತುವರಿ ಮಾಡಿಕೊಂಡಿದ್ದಾರೆ. ಇದರಿಂದಾಗಿ ಕಾಲುವೆ ತುಂಬಿ ಹೆಚ್ಚುವರಿಯಾದ ನೀರು ಹಳ್ಳಕ್ಕೆ ಹೋಗದೆ ರೈತರ ಜಮೀನಿಗೆ ನುಗ್ಗುತ್ತಿದೆ. ಇದರಿಂದಾಗಿ ಬೆಳೆ ಹಾನಿಯಾಗುತ್ತಿದೆ. ಕೂಡಲೇ ಬೆಳೆ ಹಾನಿಯಾಗಿರುವುದಕ್ಕೆ ಪರಿಹಾರ ಒದಗಿಸಲು ಮೇಲಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ. ಬೆಳೆ ಹಾನಿ ಪರಿಹಾರಕ್ಕಾಗಿ ಆತ್ಮಹತ್ಯೆಗೆ ಯತ್ನಿಸಿದ್ದ ರೈತನಿಗೆ ಪರಿಹಾರ ನೀಡಲಾಗುವುದು. | ರಮೇಶ ಎಚ್. ಎಇಇ, ಸಿಂಗಟಾಲೂರು ಏತ ನೀರಾವರಿ ಯೋಜನೆ