ಕೃಷಿ ಸಾಧಕರನ್ನು ಗುರುತಿಸಿ ಗೌರವಿಸುವುದು ಶ್ರೇಷ್ಠ

HNL RAITHA
Published on

ಹೊನ್ನಾಳಿ: ಕೃಷಿ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ರೈತರನ್ನು ಗುರುತಿಸಿ ಪ್ರೋತ್ಸಾಹಿಸುವುದೇ ನಿಜವಾದ ರೈತ ದಿನಾಚರಣೆ ಎಂದು ಹೊನ್ನಾಳಿ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಪ್ರತಿಮಾ ಹೇಳಿದರು.

ಪಟ್ಟಣದ ಟಿ.ಎ.ಪಿ.ಸಿ.ಎಂ.ಸೊಸೈಟಿಯ ಆವರಣದಲ್ಲಿ ಕೃಷಿ ಇಲಾಖೆ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ರೈತ ದಿನಾಚರಣೆ, ಕಿಸಾನ್ ಗೋಷ್ಠಿ ಹಾಗೂ ಆಹಾರ ಭದ್ರತಾ ಯೋಜನೆಯಡಿ ಹತ್ತಿ ಬೆಳೆ ಕ್ಷೇತ್ರೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ರೈತಾಪಿ ಬದುಕಿನ ವಿವಿಧ ಕ್ಷೇತ್ರಗಳಲ್ಲಿನ ಸಾಧಕರನ್ನು ಗುರುತಿಸಿ ಪ್ರಗತಿಪರ ರೈತರೆಂದು ಪ್ರೋತ್ಸಾಹಿಸಿ ತನ್ಮೂಲಕ ಇತರರಿಗೂ ಪ್ರೇರಣೆಯಾಗುವಂತೆ ಮಾಡುವುದೇ ರೈತ ದಿನಾಚರಣೆಯ ಮೂಲ ಉದ್ದೇಶವಾಗಿದೆ. ಕೇವಲ ಒಂದೇ ತೆರನಾದ ಬೆಳೆ ಬೆಳೆಯುವುದು ರೈತನ ಹಿತದೃಷ್ಟಿಯಿಂದ ಮತ್ತು ಸಾಮಾಜಿಕವಾಗಿ ಅಷ್ಟು ಲಾಭದಾಯಕವಲ್ಲ. ಆದ್ದರಿಂದ ವಿವಿಧ ಬೆಳೆಗಳನ್ನು ಬೆಳೆದರೆ ಕೃಷಿಯಲ್ಲಿ ಹೆಚ್ಚಿನ ಲಾಭ ಗಳಿಸಬಹುದು ಎಂದರು.

ಅಖಂಡ ಕರ್ನಾಟಕ ರೈತ ಸಂಘದ ತಾಲೂಕು ಅಧ್ಯಕ್ಷ ಬಸಪ್ಪ ಮಾತನಾಡಿ, ಕೃಷಿ ಇಲಾಖೆ ನಡೆಸುವ ತರಬೇತಿ, ಮಾಹಿತಿ ವಿಚಾರ ಗೋಷ್ಠಿಗಳಿಗೆ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಭಾಗವಹಿಸಿದರೆ ಕೃಷಿ ಕೆಲಸಗಳಿಗೆ ಹೆಚ್ಚು ಸಹಾಯಕವಾಗುತ್ತದೆ ಎಂದು ಹೇಳಿದರು.

ರೈತ ಸಂಘದ ಉಪಾಧ್ಯಕ್ಷ ಬಸವರಾಜಪ್ಪ, ಜಿಲ್ಲಾ ಕಾರ್ಯದರ್ಶಿ ಸುಂಕದಕಟ್ಟೆ ಕರಿಬಸಪ್ಪ, ರೈತ ಮುಖಂಡ ಎಚ್.ಕಡದಕಟ್ಟೆ ಜಗದೀಶ್ ಮಾತನಾಡಿದರು. ಕೃಷಿ ಇಲಾಖೆಯ ಕೃಷಿ ಅಧಿಕಾರಿ ಆತೀಕ್ ವುಲ್ಲಾ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕೃಷಿ ಸಮಾಜದ ಮುಖಂಡ ರುದ್ರಾನಾಯ್ಕ ಸೇರಿದಂತೆ ಅವಳಿ ತಾಲೂಕುಗಳ ರೈತರು ಉಪಸ್ಥಿತರಿದ್ದರು.

ಪ್ರಶಸ್ತಿ ಪತ್ರ ಪ್ರದಾನ: ಹೈನುಗಾರಿಕೆ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸುಂಕದಕಟ್ಟೆ ಅಣ್ಣಪ್ಪ, ಅರಣ್ಯ ಕೃಷಿಗೆ ಭೈರನಹಳ್ಳಿ ರಾಜು, ತೋಟಗಾರಿಕೆ ಕ್ಷೇತ್ರಕ್ಕೆ ಗಡೆಕಟ್ಟೆ ಚನ್ನಕೇಶವ, ಕುರಿ ಮತ್ತು ಮೇಕೆ ಸಾಕಣೆಗೆ ಕುಂದೂರು ಪರಮೇಶ್ವರಪ್ಪ, ಸಾವಯವ ಕೃಷಿಕ ಹುಣಸಘಟ್ಟ ಮೀನಾಕ್ಷಮ್ಮ ಅವರಿಗೆ ಕೃಷಿ ಇಲಾಖೆಯಿಂದ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net