

ಹಾನಗಲ್ಲ: ಭೂ ದಾಖಲೆಗಳ ಇಲಾಖೆಯ ಸಹಾಯಕ ನಿರ್ದೇಶಕ ಎಸ್. ಚಂದ್ರಶೇಖರ ತಮ್ಮ ಕೊಠಡಿಯಲ್ಲಿ ಗುರುವಾರ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದು, ಕಾರಣ ತಿಳಿದುಬಂದಿಲ್ಲ.
ತುಮಕೂರು ಜಿಲ್ಲೆಯ ಮೂಲದ ಚಂದ್ರಶೇಖರ ಅವರು ಮೂರ್ನಾಲ್ಕು ವರ್ಷಗಳಿಂದ ಹಾನಗಲ್ಲಿನ ಭೂ ದಾಖಲೆಗಳ ಕಚೇರಿಯಲ್ಲಿ ಸಹಾಯಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಗುರುವಾರ ಕಚೇರಿಗೆ ಬಾರದ್ದರಿಂದ ಸಿಬ್ಬಂದಿ ಅವರು ವಾಸವಿದ್ದ ಗಂಗಾನಗರ ಬಡಾವಣೆಯ ಮನೆಗೆ ತೆರಳಿ ಪರಿಶೀಲಿದಾಗ ಮನೆಯ ಬಾಗಿಲಿಗೆ ಒಳಗಿನಿಂದ ಕೀಲಿ ಹಾಕಿರುವುದು ಕಂಡು ಬಂದಿತು. ಅನುಮಾನಗೊಂಡ ಸಿಬ್ಬಂದಿ ಕಿಟಕಿಯಲ್ಲಿ ಪರಿಶೀಲಿಸಿದಾಗ ಚಂದ್ರಶೇಖರ ಕೊಠಡಿಯಲ್ಲಿ ಅರೆಪ್ರಜ್ಞಾವಸ್ಥೆಯಲ್ಲಿ ಬಿದ್ದಿರುವುದು ಕಂಡುಬಂದಿತ್ತು. ವಿಷಯ ತಿಳಿದು ಕೂಡಲೇ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಎಸ್.ರೇಣುಕಾ, ಸಿಪಿಐ ಆರ್. ವೀರೇಶ, ವೈದ್ಯಾಧಿಕಾರಿ ಡಾ.ಬಸವರಾಜ್ ಉಪಸ್ಥಿತಿಯಲ್ಲಿ ಬಾಗಿಲು ತೆರೆದು ಪರಿಶೀಲಿಸಿದಾಗ ಚಂದ್ರಶೇಖರ ಮೃತಪಟ್ಟಿರುವುದು ಕಂಡುಬಂದಿದೆ. ಮರಣೋತ್ತರ ಪರೀಕ್ಷೆಯ ನಂತರ ಅವರ ಸಾವಿನ ಕಾರಣ ತಿಳಿದುಬರಲಿದೆ ಎಂದು ತಹಸೀಲ್ದಾರ್ ಎಸ್. ರೇಣುಕಾ ತಿಳಿಸಿದ್ದಾರೆ.