

ಗಂಗಾವತಿ: ಮರಳು ಅಕ್ರಮ ಸಾಗಣೆ ತಡೆಗೆ ವಾಹನಗಳಿಗೆ ಜಿಪಿಎಸ್ ಅಳವಡಿಸಲು ನಿರ್ಧರಿಸಿದ್ದು, ದೂರುಗಳನ್ನು ಗಂಭೀರವಾಗಿ ಪರಿಗಣಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಹಾಯಕ ಆಯುಕ್ತ ಕ್ಯಾ. ಮಹೇಶ ಮಾಲಗಿತ್ತಿ ಹೇಳಿದರು.
ನಗರದ ತಾಪಂ ಮಂಥನ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ತ್ರಿವಳಿ ತಾಲೂಕಿನ ಮರಳು ಉಸ್ತುವಾರಿ ಸಮಿತಿ ಸಭೆಯಲ್ಲಿ ಮಾತನಾಡಿದರು.
ಸಾರ್ವಜನಿಕರು ದೂರು ನೀಡಿದ ಸಂದರ್ಭದಲ್ಲಿ ಪಿಡಿಒ ಮತ್ತು ಗ್ರಾಮಲೆಕ್ಕಾಧಿಕಾರಿಗಳು ಪರಿಶೀಲನೆ ನಡೆಸಬೇಕಿದ್ದು, ಅಕ್ರಮ ಸಾಗಣೆದಾರರ ವಿರುದ್ಧ ಪ್ರಕರಣ ದಾಖಲಿಸಬೇಕು. ಮರಳು ವಿಲೇವಾರಿಗೆ ಮೊದಲ ಶ್ರೇಣಿಯ ಮೂರು ಪಾಯಿಂಟ್‌ಗಳನ್ನು ಗುರುತಿಸಲು ಸೂಚಿಸಲಾಗಿದ್ದು, ಎರಡನೇ ಹಂತದ ಪಾಯಿಂಟ್‌ಗಳನ್ನು ತಹಸೀಲ್ದಾರ್ ಮತ್ತು ತಾಪಂ ಇಒ ಗುರುತಿಸಿ, ಸೆ.15ರೊಳಗೆ ವರದಿ ಕಳಿಸಬೇಕು ಎಂದರು.
ದಾಸನಾಳ ಮತ್ತು ಗಂಗಾವತಿ ತಹಸೀಲ್ದಾರ್ ಕಚೇರಿ ಬಳಿ ಚೆಕ್‌ಪೋಸ್ಟ್ ಬಲಗೊಳಿಸಲು ಪ್ರಸ್ತಾವನೆ ಸಲ್ಲಿಸುವಂತೆ ತಿಳಿಸಲಾಗಿದ್ದು, ಅಕ್ರಮ ತಡೆಗೆ 250 ವಾಹನಗಳಿಗೆ ಜಿಪಿಎಸ್ ಅಳವಡಿಸಲು ಗಣಿ ಮತ್ತು ಭೂವಿಜ್ಞಾನ ಇಲಾಖೆ ಯೋಜನೆ ರೂಪಿಸಿದೆ. ಅಧಿಕಾರಿಗಳ ನಡುವೆ ಸಮನ್ವಯತೆ ಕೊರತೆಯಿಂದ ಸಮಸ್ಯೆ ಸೃಷ್ಟಿಯಾಗಿದ್ದು, ಹೀಗಾಗದಂತೆ ನೋಡಿಕೊಳ್ಳಲು ಸಮಿತಿ ಸದಸ್ಯರಿಗೆ ಸೂಚಿಸಲಾಗಿದೆ.
ಕನಕಗಿರಿ, ಕಾರಟಗಿ ಮತ್ತು ಗಂಗಾವತಿ ಭಾಗದಲ್ಲಿ ಈಗಾಗಲೇ ಅಕ್ರಮ ಸಾಗಣೆಗೆ ಸಂಬಂಧಿಸಿದ 8 ಪ್ರಕರಣ ದಾಖಲಾಗಿವೆ. ಫಿಲ್ಟರ್ ಮರಳು ಮಾಫಿಯಾ ತಡೆಗೆ ಅಧಿಕಾರಿಗಳಿಗೆ ಗಸ್ತು ತಿರುಗುವಂತೆ ತಿಳಿಸಲಾಗಿದ್ದು, ಅಕ್ರಮ ನಿಯಂತ್ರಣಕ್ಕೆ ಸಂಬಂಧಪಟ್ಟ ಅಧಿಕಾರಿಗಳ ಜವಾಬ್ದಾರಿಯಾಗಿದ್ದು, ನಿರ್ಲಕ್ಷಿಸುವಂತಿಲ್ಲ ಎಂದರು.
ಉಸ್ತುವಾರಿ ಸಮಿತಿ ಸದಸ್ಯರ ಜವಾಬ್ದಾರಿ, ಮರಳು ಪಾಯಿಂಟ್ ಗುರುತಿಸುವುದು ಮತ್ತು ಅಕ್ರಮ ಸಾಗಣೆ ವಿರುದ್ಧ ಕ್ರಮದ ಕುರಿತು ಮಾಹಿತಿ ನೀಡಲಾಯಿತು. ತಾಪಂ ಇಒ ಲಕ್ಷ್ಮೀದೇವಿ ಯಾದವ್, ಕನಕಗಿರಿ ತಹಸೀಲ್ದಾರ್ ವಿಶ್ವನಾಥ ಮುರುಡಿ, ನಗರ ಪಿಐ ಅಡಿವೇಶ ಎನ್.ಗುದಿಗೊಪ್ಪ, ಗ್ರಾಮೀಣ ಪಿಐ ಎನ್.ಮಂಜುನಾಥ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಪ್ರತಿನಿಧಿ ಮಹೇಶ ಇದ್ದರು.