ಕನ್ನಡ ಕಲಿಕೆಗೆ ಅಗತ್ಯ ಸೌಲಭ್ಯಗಳ ನೆರವು

30Kgfph-1
Published on

ಕೆಜಿಎಫ್​- ಕೇಂದ್ರಿಯ ವಿದ್ಯಾಲಯದಲ್ಲಿ ಒಂದನೇ ತರಗತಿಯಿಂದ ಕನ್ನಡ ಕಲಿಕೆಗೆ ಅವಕಾಶ ಮಾಡಿಕೊಟ್ಟಿರುವುದು ಸಂತಸದ ವಿಚಾರವಾಗಿದ್ದು, ಮುಂದಿನ ದಿನಗಳಲ್ಲಿ ಶಾಲೆಯಲ್ಲಿ ಕನ್ನಡ ಕಲಿಕೆಗೆ ಅಗತ್ಯವಾದ ಎಲ್ಲ ಸೌಲಭ್ಯಗಳ ನೆರವು ನೀಡಲಾಗುವುದು ಎಂದು ಬಿಇಎಂಎಲ್​ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎಸ್​.ಎಂ.ಸುಬ್ರಮಣ್ಯ ತಿಳಿಸಿದರು.

ನಗರದ ಹೊರವಲಯದ ಬೆಮೆಲ್​ ನಗರದಲ್ಲಿರುವ ಕೇಂದ್ರೀಯ ವಿದ್ಯಾಲಯದಲ್ಲಿ ಒಂದನೇ ತರಗತಿಯಿಂದ ಕನ್ನಡ ಕಲಿಕಾ ತರಗತಿಗೆ ವಿದ್ಯುಕ್ತ ಚಾಲನೆ ನೀಡಿ ಮಾತನಾಡಿದ ಅವರು, ಹಲವು ವರ್ಷಗಳಿಂದ ಒಂದನೇ ತರಗತಿಯ ಮಕ್ಕಳಿಗೆ ಕನ್ನಡ ಕಲಿಸುವ ಬಗ್ಗೆ ಕನ್ನಡ ಶಕ್ತಿ ಕೇಂದ್ರದ ಪ್ರಯತ್ನಕ್ಕೆ ಇಂದು ಫಲ ಸಿಕ್ಕಿರುವುದು ಸಂತಸವಾಗಿದೆ ಎಂದರು.

ಬೆಮೆಲ್​ ಕಾರ್ಮಿಕ ಸಂಘದ ಅಧ್ಯಕ್ಷ ಒ.ರಾಮಚಂದ್ರರೆಡ್ಡಿ ಮಾತನಾಡಿ, ಕಾರ್ಮಿಕ ಕುಟುಂಬದ ಮಕ್ಕಳು ಒಂದನೇ ತರಗತಿಯಿಂದ ಕನ್ನಡ ಕಲಿಯಲು ಕೇಂದ್ರೀಯ ವಿದ್ಯಾಲಯದಲ್ಲಿ ಅವಕಾಶ ಮಾಡಿಕೊಟ್ಟಿರುವುದರಿಂದ ಪ್ರಾಥಮಿಕ ಹಂತದಿಂದಲೇ ಮಕ್ಕಳಿಗೆ ಕನ್ನಡ ಕಲಿಯಲು ಸಾಧ್ಯವಾಗುವುದರಿಂದ ಮಾತೃಭಾಷೆಯ ಜ್ಞಾನ ದೊರೆಯಲು ಅನುವಾಗುತ್ತದೆ ಎಂದರು.

ಪ್ರಾಂಶುಪಾಲ ಉಮೇಶ್​ ಪ್ರಜಾಪತಿ ಮಾತನಾಡಿ, ಆ.1ರಿಂದ ತರಗತಿಯ ವೇಳಾಪಟ್ಟಿಯಲ್ಲಿ ಸೇರಿಸಿ ಕನ್ನಡ ಕಲಿಕಾ ತರಗತಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ವಹಿಸುವುದಾಗಿ ತಿಳಿಸಿದರು.

ಕನ್ನಡ ಶಕ್ತಿ ಕೇಂದ್ರದ ಜಿಲ್ಲಾಧ್ಯಕ್ಷ ಶೇಖರಪ್ಪ ಮಾತನಾಡಿ, ಇಡೀ ರಾಜ್ಯಕ್ಕೆ ಮಾದರಿಯಾಗುವಂತ ಇಂತಹ ಕೆಲಸವನ್ನು ನಡೆಸಿಕೊಡಲು ನಮ್ಮ ಕಾರ್ಯನಿರ್ವಾಹಕ ನಿರ್ದೇಶಕರು ಹಾಗೂ ಬೆಮೆಲ್​ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಆದ ಎಸ್​.ಎಂ.ಸುಬ್ರಮಣ್ಯ ಅವರು ಪ್ರೋತ್ಸಾಹಿಸಿ ಕಲಿಕೆಗೆ ಅವಕಾಶ ಮಾಡಿದ್ದಾರೆ. ಕೇಂದ್ರೀಯ ವಿದ್ಯಾಲಯದ ಈ ಹಿಂದಿನ ಪ್ರಾಂಶುಪಾಲ ಕಮಲೇಶ್​ ಅವರು ಶಾಲೆಯಲ್ಲಿ ಕನ್ನಡ ಕಲಿಕಾ ತರಗತಿಗೆ ಎಲ್ಲ ರೀತಿಯ ವ್ಯವಸ್ಥೆಯನ್ನು ಮಾಡಿದ್ದರು. ಆದರೆ ಅವರು ವರ್ಗಾವಣೆ ಆದ ಮೇಲೆ ಪ್ರಾಂಶುಪಾಲರಾಗಿ ಬಂದಿರುವ ಮಾನ್ಯ ಉಮೇಶ್​ ಪ್ರಜಾಪತಿ ಅವರು ಅವರಂತೆಯೇ ಕನ್ನಡ ಕಲಿಕೆ ಒತ್ತು ನೀಡಿ ಕಾರ್ಯಕ್ರಮದ ಯಶಸ್ಸಿಗೆ ಕಾರಣಕರ್ತರಾಗಿದ್ದಾರೆ ಎಂದರು.

ಬೆಮೆಲ್​ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಸುಧಾ, ಎಂ.ಎಲ್​ ಮಂಜುನಾಥ್​, ಕನ್ನಡ ಶಕ್ತಿ ಕೇಂದ್ರದ ಉಪಾಧ್ಯಕ್ಷ ಬೆಂಜಮಿನ್​ ಜೋಸೆಫ್​, ಗೋಣಿ, ಡಾ ನಾರಾಯಣಗೌಡ, ಕಾರ್ಯದರ್ಶಿ ಗುರುದತ್​ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net