

ವಿಜಯವಾಣಿ ಸುದ್ದಿಜಾಲ ಹೆಬ್ರಿ
ಕುಲಕಸುಬಾದ ನೇಕಾರಿಕೆ ನಶಿಸಿ ಹೋಗುತ್ತಿದ್ದು, ಸಂಸ್ಥೆಯ ಮೂಲಕ ಈ ವೃತ್ತಿ ಉಳಿವಿಗೆ ಶ್ರಮಿಸುತ್ತಿದ್ದೇವೆ. ನೇಕಾರಿಕೆ ಮಾಡಲಿಚ್ಛಿಸುವ ಮಹಿಳೆಯರಿಗೆ ಸಂಸ್ಥೆ ನೆರವು ನೀಡಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪದ್ಮಶಾಲಿ ಮಹಾಸಭಾದ ಉಪಾಧ್ಯಕ್ಷ ರತ್ನಾಕರ ಶೆಟ್ಟಿಗಾರ್ ಹೇಳಿದರು.
ಮುದ್ರಾಡಿಯಲ್ಲಿ ಭಾನುವಾರ ಶೆಟ್ಟಿಗಾರ್ ಸಮಾಜ ಸೇವಾ ಸಂಘ, ಮಹಿಳಾ ಹಾಗೂ ಯುವ ವೇದಿಕೆ ವತಿಯಿಂದ ನಡೆದ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದರು.
ಹೆಬ್ರಿ ತಹಸೀಲ್ದಾರ್ ಎಸ್.ಎ.ಪ್ರಸಾದ್ ಮುದ್ರಾಡಿಯಲ್ಲಿ ನಿರ್ಮಾಣಗೊಂಡ ಸಂಘದ ಹೊಸ ಕಚೇರಿ ಉದ್ಘಾಟಿಸಿ ಶುಭಹಾರೈಸಿದರು. ಮುದ್ರಾಡಿ ಶೆಟ್ಟಿಗಾರ್ ಸಮಾಜ ಸೇವಾ ಸಂಘ ಅಧ್ಯಕ್ಷ ಸನತ್ ಕುಮಾರ್ ಶೆಟ್ಟಿಗಾರ್ ಮಾತನಾಡಿದರು.
ಸಂಘದ ಅಭಿವೃದ್ಧಿಗೆ ಸಹಕರಿಸಿದ ದಾನಿಗಳು, ಪಿಯುಸಿಯಲ್ಲಿ ರಾಜ್ಯಕ್ಕೆ 10ನೇ ರ‌್ಯಾಂಕ್ ಪಡೆದ ಹೆಬ್ರಿ ಎಸ್.ಆರ್. ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿ ಅಭಿಜ್ಞಾ ಶೆಟ್ಟಿಗಾರ್ ಸಹಿತ ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಪ್ರತಿಭಾ ಪುರಸ್ಕಾರ ನೀಡಲಾಯಿತು.
ಬಾರ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಜಯರಾಮ ಶೆಟ್ಟಿಗಾರ್, ಪ್ರಮುಖರಾದ ಮುನಿಯಾಲು ವಿಠ್ಠಲ ಶೆಟ್ಟಿಗಾರ್, ಪ್ರಮೀಳಾ ಜೆ.ಶೆಟ್ಟಿಗಾರ್, ಸುರೇಶ ಶೆಟ್ಟಿಗಾರ್, ಲೋಕೇಶ್ ಶೆಟ್ಟಿಗಾರ್, ನಾಗರಾಜ ಶೆಟ್ಟಿಗಾರ್ ಕಬ್ಬಿನಾಲೆ, ಅಶ್ವಿನಿ ಗಣೇಶ್ ಮುದ್ರಾಡಿ, ಸದಾಶಿವ ಶೆಟ್ಟಿಗಾರ್, ವಿಜಯ ಕುಮಾರ್, ಮುದ್ರಾಡಿ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಶಶಿಕಲಾ ಪ್ರಸನ್ನ ಶೆಟ್ಟಿಗಾರ್ ಸ್ವಾಗತಿಸಿದರು. ರಾಘವೇಂದ್ರ ಶೆಟ್ಟಿಗಾರ್ ವಂದಿಸಿದರು. ದೀಪಾಶ್ರೀ ಲೋಕೇಶ್ ವರದಿ ವಾಚಿಸಿದರು. ಸದಾಶಿವ ಶೆಟ್ಟಿಗಾರ್ ಲೆಕ್ಕಪತ್ರ ಮಂಡಿಸಿದರು. ಪ್ರಸನ್ನ ಶೆಟ್ಟಿಗಾರ್ ಕಾರ್ಯಕ್ರಮ ನಿರೂಪಿಸಿದರು. ಮಹಾಸಭೆಗೂ ಮುನ್ನ ಸಂಘದ ವತಿಯಿಂದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಜರುಗಿತು.