ಕೋಟೇಶ್ವರ ವಿದ್ಯುತ್ ಚಿತಾಗಾರಕ್ಕೆ ಗ್ರಾಪಂಗಳಿಂದ ನೆರವು

gan
Published on

ವಿಜಯವಾಣಿ ಸುದ್ದಿಜಾಲ ಕುಂದಾಪುರ

ಕೋಟೇಶ್ವರ ವಿದ್ಯುತ್ ಚಿತಾಗಾರಕ್ಕೆ ಮಾಸಿಕವಾಗಿ 35 ಸಾವಿರ ಯುನಿಟ್ ವಿದ್ಯುತ್ ಅವಕಶ್ಯತೆ ಇದ್ದು, ಎಲ್ಲ ಪಂಚಾಯಿತಿಗಳಿಂದ ಅನುದಾನ ನೀಡುವಂತೆ ಜಿ.ಪಂ. ಸಿಇಒ ಮೂಲಕ ಸುತ್ತೋಲೆ ಹೊರಡಿಸಲಾಗುವುದು. ಸೋಲಾರ್ ಅಳವಡಿಸುವುದಾದರೆ 60 ಲಕ್ಷ ರೂ. ಅವಶ್ಯಕತೆ ಇದೆ ಎಂದು ಶಾಸಕ ಕಿರಣ್ ಕುಮಾರ್ ಕೊಡ್ಗಿ ಹೇಳಿದರು.

ಕೋಟೇಶ್ವರ ವಿದ್ಯುತ್ ಚಿತಾಗಾರ ನಿರ್ವಹಣೆ ಕುರಿತು ಕುಂದಾಪುರದ ತಾ.ಪಂ. ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಕುಂದಾಪುರ, ಕೋಟ, ವಂಡ್ಸೆಯ ಪಂಚಾಯಿತಿ, ಸೊಸೈಟಿಗಳ ಮುಖ್ಯಸ್ಥರ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸ್ಥಳೀಯ ಗ್ರಾಮ ಪಂಚಾಯಿತಿಗಳೇ ಚಿತಾಗಾರ ನಿರ್ವಹಿಸಬೇಕಿದ್ದು, ವಾರ್ಷಿಕವಾಗಿ 30 ಲಕ್ಷ ರೂ. ವಿದ್ಯುತ್ ಬಿಲ್ ಪಾವತಿಸಬೇಕಿದೆ. ಕೋಟೇಶ್ವರ ಪಂಚಾಯಿತಿಯೊಂದರಿಂದ ಇಷ್ಟೊಂದು ದೊಡ್ಡ ಮೊತ್ತ ಭರಿಸುವುದು ಸಾಧ್ಯವಿಲ್ಲ ಎಂದರು.

ಕೇದೂರು ಸೊಸೈಟಿಯ ಸದಾನಂದ ಶೆಟ್ಟಿ ತಮ್ಮ ಸೊಸೈಟಿ ವತಿಯಿಂದ 2.5 ಲಕ್ಷ ರೂ. ಹಾಗೂ ವೈಯಕ್ತಿವಾಗಿ 50 ಸಾವಿರ ರೂ. ನೀಡುವುದಾಗಿ ಘೋಷಿಸಿದರು. ವಿವಿಧ ಸೊಸೈಟಿಗಳ ನೆರವಿನಿಂದ 30 ಲಕ್ಷ ರೂ. ಸಂಗ್ರಹವಾಯಿತು. ಮಾಜಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ತಮ್ಮ ಸಹೋದರ ಉದಯ್‌ಕುಮಾರ್ ಶೆಟ್ಟಿ ಹೆಸರಿನಲ್ಲಿ 5 ಲಕ್ಷ ರೂ.ನೀಡುವುದಾಗಿ ತಿಳಿಸಿದರು. ಬೈಂದೂರು ವ್ಯಾಪ್ತಿಯ ಸೊಸೈಟಿಗಳು, ಪಂಚಾಯಿತಿಗಳಿಂದ ಅನುದಾನ ದೊರಕಿಸಿಕೊಡುವುದಾಗಿ ಶಾಸಕ ಗುರುರಾಜ್ ಗಂಟಿಹೊಳೆ ಭರವಸೆ ನೀಡಿದರು.

ಮೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ಯಶವಂತ್, ಕೃಷ್ಣದೇವ ಕಾರಂತ, ಶಿವರಾಮ ಶೆಟ್ಟಿ, ಹರಿಪ್ರಸಾದ್ ಶೆಟ್ಟಿ, ಶಾಂತಾರಾಮ ಶೆಟ್ಟಿ, ರಾಜು ಪೂಜಾರಿ, ಸಂಪತ್ ಶೆಟ್ಟಿ, ಗಂಗಾಧರ ಶೆಟ್ಟಿ, ನಾಗರಾಜ್ ಕಾಮಧೇನು, ಪ್ರದೀಪ್ ಬಲ್ಲಾಳ್, ಪ್ರದೀಪ್ ಕುಮಾರ್ ಶೆಟ್ಟಿ, ಸುಧಾಕರ ಶೆಟ್ಟಿ, ರಂಗನಾಥ ಭಟ್, ಕೃಷ್ಣ ಗೊಲ್ಲ ಮೊದಲಾದವರು ಇದ್ದರು.

ಟ್ರಸ್ಟ್ ರಚಿಸಿ ಜಾಗೃತಿ ಕಾರ್ಯ

ಇತ್ತೀಚೆಗೆ ಶವಸಂಸ್ಕಾರಕ್ಕೆ ಆಗಮಿಸಿದವರ ಪೈಕಿ ಮೂರು ಕುಟುಂಬದವರು ಕಟ್ಟಿಗೆಯಲ್ಲೇ ಶವ ಸುಡುವಂತೆ ಬೇಡಿಕೆ ಇಟ್ಟಿದ್ದರು. ಹಾಗಾಗಿ ವಿದ್ಯುತ್‌ಚಿತಾಗಾರ ಬಳಸುವ ಬಗ್ಗೆ ಉತ್ತೇಜಿಸುವ ಅವಶ್ಯಕತೆ ಇದೆ. ಜತೆಗೆ ಚಿತಾಗಾರ ಕೇಂದ್ರದಿಂದಲೇ ಆಂಬುಲೆನ್ಸ್ ಸೇವೆ ನೀಡುವ ವ್ಯವಸ್ಥೆ ಆಗಬೇಕು. ಇದಕ್ಕಾಗಿ ಟ್ರಸ್ಟ್ ರಚಿಸಿ ಅದರಿಂದಲೇ ಚಿತಾಗಾರ ನಿರ್ವಹಣೆಯಾಗಬೇಕು. ಇದು ಬೈಂದೂರು, ಕುಂದಾಪುರ ಪ್ರದೇಶಗಳಿಗೆ ಅನುಕೂಲವಾಗುತ್ತದೆ ಎಂಬ ಒತ್ತಾಯ ಸಭೆಯಲ್ಲಿ ಕೇಳಿಬಂತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net