

ಶಿವಮೊಗ್ಗ: ಸಾಹಿತ್ಯ ಗ್ರಾಮದಲ್ಲಿ 2.50 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಮುಂದುವರಿದ ಕಟ್ಟಡ ಕಾಮಗಾರಿಗೆ ಸ್ಥಳೀಯ ಜನಪ್ರತಿನಿಧಿಗಳಿಂದ ಹಾಗೂ ಸರ್ಕಾರದಿಂದ ಅಗತ್ಯ ನೆರವು ಕೊಡಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಭರವಸೆ ನೀಡಿದರು.
ಚಾಲುಕ್ಯನಗರದ ಸಾಹಿತ್ಯ ಗ್ರಾಮಕ್ಕೆ ಸೋಮವಾರ ಭೇಟಿ ನೀಡಿ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ ಹೆಸರಿನಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಎಸ್.ಬಂಗಾರಪ್ಪ ಗ್ರಂಥಾಲಯಕ್ಕೆ ಸಚಿವರು ತಮ್ಮ ವೇತನದಲ್ಲಿ 5 ಲಕ್ಷ ರೂ.ಗಳ ಚೆಕ್ ಅನ್ನು ಕಸಾಪ ಜಿಲ್ಲಾಧ್ಯಕ್ಷ ಡಿ.ಮಂಜುನಾಥ್ ಅವರಿಗೆ ಹಸ್ತಾಂತರಿಸಿ ಮಾತನಾಡಿದ ಅವರು, ಕನ್ನಡ ಭಾಷೆಯ ಉಳಿವು ವಿಕಾಸಗೊಳಿಸುವ ಸದುದ್ದೇಶದಿಂದ ಗ್ರಂಥಾಲಯಕ್ಕೆ ನೆರವು ನೀಡುವ ಮೂಲಕ ಅಲ್ಪಸೇವೆ ನೀಡಲಾಗುತ್ತಿದೆ ಎಂದರು.
ಮಾಜಿ ಸಿಎಂ ಎಸ್.ಬಂಗಾರಪ್ಪ ಅವರು ಪ್ರಬುದ್ಧ ರಾಜಕಾರಣಿಯಾಗಿದ್ದರೂ ಆಳವಾದ ಸಾಹಿತ್ಯಾಭಿರುಚಿ ಹೊಂದಿದ್ದು, ರಾಷ್ಟ್ರಕವಿ ಕುವೆಂಪು ಅವರ ಸಾಹಿತ್ಯವನ್ನು ಅಧ್ಯಯನ ಮಾಡಿದ್ದರು. ಕನ್ನಡ ನಾಡು-ನುಡಿಯ ಬೆಳವಣಿಗೆ ಮತ್ತು ನೆಲ-ಜಲ ಸಂರಕ್ಷಣೆ ಸೇರಿದಂತೆ ಇಲ್ಲಿನ ಶ್ರೀಮಂತ ಕಲೆ, ಸಾಹಿತ್ಯ, ಸಂಗೀತ, ನೃತ್ಯ ಪರಂಪರೆಯನ್ನು ಒಳಗೊಂಡಂತೆ ಕನ್ನಡತನದ ವಿಷಯ ಬಂದಾಗ ಬಂಗಾರಪ್ಪ ಅವರಂತೆಯೇ ರಾಜಿಗೆ ಸಿದ್ಧವಿಲ್ಲದೇ ನಾಡಿನ ಅಸ್ಮಿತೆಯ ಹಿತಕಾಯಲು ಟೊಂಕಕಟ್ಟಿ ನಿಲ್ಲುವುದಾಗಿ ತಿಳಿಸಿದರು.
ಮುಂದಿನ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಶಿವಮೊಗ್ಗದಲ್ಲಿ ನಡೆಸಲು ಅವಕಾಶ ದೊರೆತಲ್ಲಿ ಅದರ ವ್ಯವಸ್ಥಿತ ಆಯೋಜನೆಗೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ ಅವರು, ಓದುಗರು ಉದ್ದೇಶಿತ ಈ ಗ್ರಂಥಾಲಯವನ್ನು ಸದುಪಯೋಗಪಡಿಸಿಕೊಂಡು ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ ಹಿರಿಮೆಯೊಂದಿಗೆ ಸಮಾಜಮುಖಿಯಾಗಿ ನಾಡನ್ನು ಕಟ್ಟುವ ನಿಟ್ಟಿನಲ್ಲಿ ಎಲ್ಲರೂ ಒಂದಾಗಿ ಹೆಜ್ಜೆ ಇರಿಸಬೇಕಾದ ಅಗತ್ಯವಿದೆ ಎಂದರು.
ಕಸಾಪ ಜಿಲ್ಲಾಧ್ಯಕ್ಷ ಡಿ.ಮಂಜುನಾಥ್, ಎಂಎಡಿಬಿ ಆರ್.ಎಂ.ಮಂಜುನಾಥಗೌಡ, ಎಂಎಲ್‌ಸಿ ಬಲ್ಕಿಷ್ ಬಾನು, ಗ್ಯಾರೆಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಸಿ.ಎಸ್.ಚಂದ್ರಭೂಪಾಲ ಮತ್ತಿತರರು ಉಪಸ್ಥಿತರಿದ್ದರು.