ಘನತ್ಯಾಜ್ಯ ಸಂಸ್ಕರಣ-ವಿಲೇವಾರಿ ಘಟಕ ನಿರ್ಮಾಣಕ್ಕೆ ಸಹಕರಿಸಿ; ಡಿಸಿ

MDK5
Published on

ಮಡಿಕೇರಿ: ನಗರದಲ್ಲಿ ಉತ್ಪತ್ತಿಯಾಗುತ್ತಿರುವ ತ್ಯಾಜ್ಯಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡಲು ೨ನೇ ಮೊಣ್ಣಂಗೇರಿಯ ಸರ್ವೆ ನಂ೨೦/೧ ರಲ್ಲಿ ೧೦ ಎಕರೆ ಪ್ರದೇಶವನ್ನು ಗುರುತಿಸಲಾಗಿದ್ದು, ಘನತ್ಯಾಜ್ಯ ಸಂಸ್ಕರಣ ಮತ್ತು ವಿಲೇವಾರಿ ಘಟಕವನ್ನು ನಿರ್ಮಿಸಲು ಎಲ್ಲರೂ ಸಹಕರಿಸುವಂತೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಹೇಳಿದರು.


ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾಡಳಿತ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ನಗರಸಭೆ ಸಂಯೋಗದಲ್ಲಿ ಯೋಜನೆಯ ಕಾರ್ಯಚಟುವಿಕೆಯ ಕುರಿತು ಪರಿಸರ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು.


ದಿನದಿಂದ ದಿನಕ್ಕೆ ನಗರ ಬೆಳೆಯುತ್ತಿದ್ದು, ಘನತ್ಯಾಜ್ಯಗಳು ಹೆಚ್ಚುತ್ತಿದೆ. ಇದರಿಂದ ಹೊಸ ಸಮಸ್ಯೆಗಳು ಹುಟ್ಟಿಕೊಳ್ಳುತ್ತಿವೆ. ಇದನ್ನು ವೈಜ್ಞಾನಿಕವಾಗಿ ನಿರ್ವಹಿಸಬೇಕಿದೆ. ಆ ನಿಟ್ಟಿನಲ್ಲಿ ಸಾರ್ವಜನಿಕರ ಸಹಕಾರ ಅಗತ್ಯವಿದೆ. ನಗರದ ಹೊರವಲಯದ ೨ನೇ ಮೊಣ್ಣಂಗೇರಿ ಗ್ರಾಮದಲ್ಲಿ ನಿಗದಿಪಡಿಸಿರುವ ಜಾಗವನ್ನು ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಸ್ಥಳ ಗುರುತಿಸಲಾಗಿದೆ ಎಂದು ತಿಳಿಸಿದರು.


ಕಸದ ನಿರ್ವಹಣೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಏಕ ಬಳಕೆ ಪ್ಲಾಸ್ಟಿಕ್ ನಿಷೇಧದ ಕುರಿತು ಜಿಲ್ಲಾಡಳಿತ ವತಿಯಿಂದ ಜಾಗೃತಿ ಮೂಡಿಸಲಾಗುತ್ತಿದೆ. ನಗರಸಭೆ ವತಿಯಿಂದ ಪ್ರತಿವಾರ ಅಂಗಡಿಗಳ ಮೇಲೆ ದಾಳಿ ಮಾಡಿ ಪ್ಲಾಸ್ಟಿಕ್ ವಶಪಡಿಸಿಕೊಂಡು ದಂಡ ವಿಧಿಸಲಾಗುತ್ತಿದೆ. ಆ ನಿಟ್ಟಿನಲ್ಲಿ ಪ್ಲಾಸ್ಟಿಕ್ ಬಳಕೆ ಕುರಿತು ಇನ್ನೊಬ್ಬರಿಗೆ ಹೇಳುವ ಮೊದಲು ನಾವು ಪ್ಲಾಸ್ಟಿಕ್ ಬಳಕೆ ನಿಯಂತ್ರಿಸಬೇಕು ಎಂದು ಸಲಹೆ ಮಾಡಿದರು.


ಹೈ ಕೋರ್ಟ್ ಆದೇಶದಂತೆ ಘನತಾಜ್ಯ ವಿಲೇವಾರಿ ಘಟಕ ನಿರ್ಮಾಣ ಮಾಡಲು ಜಾಗವನ್ನು ಗುರುತಿಸಿ ವೀಕ್ಷಣೆ ಮಾಡಲಾಗಿದೆ. ಘನತಾಜ್ಯಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಮನೆಯಲ್ಲಿಯೇ ಸ್ವಯಂ ಪ್ರೇರಿತರಾಗಿ ನಿರ್ವಹಣೆ ಮಾಡುವಂತಾಗಬೇಕು. ಈ ರೀತಿ ನಿರ್ವಹಣೆ ಮಾಡುವವರಿಗೆ ಆಸ್ತಿ ತೆರಿಗೆಯಲ್ಲಿ ವಿನಾಯತಿ ನೀಡಲು ಅವಕಾಶವಿದೆಯೇ ಎಂದು ಪರಿಶೀಲಿಸುವಂತೆ ನಗರಸಭೆ ಅಧಿಕಾರಿಗಳಿಗೆ ತಿಳಿಸಿದರು.


ಹಿರಿಯ ಪರಿಸರ ಅಧಿಕಾರಿ ಪ್ರಕಾಶ್ ಮಾತನಾಡಿ, ತ್ಯಾಜ್ಯ ಕಡಿಮೆ ಮಾಡಿದಷ್ಟು ಲ್ಯಾಂಡ್ ಫಿಲ್ಲಿಂಗ್‌ನ ಮೇಲೆ ಯಾವುದೇ ರೀತಿಯ ಪ್ರಭಾವ ಬೀರುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಲ್ಯಾಂಡ್ ಫಿಲ್ಲಿಂಗ್‌ನ್ನು ನಿಲ್ಲಿಸುವಂತೆ ಧ್ವನಿಗಳು ಕೇಳಿಬರುತ್ತಿದೆ. ಆದರೆ ಸರ್ಕಾರದಿಂದ ಲ್ಯಾಂಡ್ ಫಿಲ್ಲಿಂಗ್‌ನ್ನು ನಿಲ್ಲಿಸಬೇಕೆಂಬ ಯಾವುದೇ ಆದೇಶವಿರುವುದಿಲ್ಲ. ೨ನೇ ಮೊಣ್ಣಂಗೇರಿ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಜಲಮೂಲಗಳ ಬಗ್ಗೆ ಜನರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆ ನಿಟ್ಟಿನಲ್ಲಿ ಆ ಪ್ರದೇಶವನ್ನು ಪುನರ್ ಪರಿಶೀಲಿಸುವಂತೆ ಸಲಹೆ ಮಾಡಿದರು.


ಸಾರ್ವಜನಿಕರ ಹೇಳಿಕೆ ಆಲಿಸಿದ ಡಿಸಿ: ೨ನೇ ಮೊಣ್ಣಂಗೇರಿ ಗ್ರಾಮದ ಸರ್ವೆ ನಂ. ೨೦/೧ ರಲ್ಲಿ ಒಟ್ಟು ೧೦ ಎಕರೆ ಪ್ರದೇಶದಲ್ಲಿ ರೂ.೬.೮೪ ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ೬೫ ಟಿಪಿಡಿ ಸಾಮರ್ಥ್ಯದ ಘನತ್ಯಾಜ್ಯ ಸಂಸ್ಕರಣ ಮತ್ತು ವಿಲೇವಾರಿ ಘಟಕ ನಿರ್ಮಿಸುವ ಕುರಿತು ಸಾರ್ವಜನಿಕರ ಹೇಳಿಕೆಗಳನ್ನು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಆಲಿಸಿದರು.


ಸಭೆಯಲ್ಲಿ ನಗರಸಭೆ ಉಪಾಧ್ಯಕ್ಷೆ ಸವಿತಾ ರಾಕೇಶ್, ವಲಯ ಪರಿಸರ ಅಧಿಕಾರಿ ರಘುರಾಮ್, ಪೌರಾಯುಕ್ತ ವಿಜಯ, ನಗರಸಭೆ ಸದಸ್ಯರು, ನಗರಸಭೆ ಆರೋಗ್ಯ ಶಾಖೆಯ ಎಇಇ ಸೌಮ್ಯ, ಗ್ರಾಮಸ್ಥರು ಇತರರು ಇದ್ದರು.

ನಗರದಲ್ಲಿ ೨೫ ಟಿಪಿಡಿ ರಷ್ಟು ಕಸ ಉತ್ಪತ್ತಿಯಾಗುತ್ತಿದ್ದು, ನಗರಸಭೆಯು ಕಸ ಸಂಗ್ರಹಿಸಿ ಹಸಿ ಮತ್ತು ಒಣ ಕಸ ಪ್ರತ್ಯೇಕಿಸಿ ಕರ್ಣಂಗೇರಿ ಗ್ರಾಮದಲ್ಲಿ ಸಣ್ಣ ಮಟ್ಟದಲ್ಲಿ ಗೊಬ್ಬರ ತಯಾರಿಸಿ ಮತ್ತು ಕಸ ವಿಲೇವಾರಿ ಮಾಡಲಾಗುತ್ತಿದೆ. ಜನಸಂಖ್ಯೆ ಆಧಾರದ ಮೇಲೆ ಮುಂದಿನ ೨೦ ವರ್ಷಗಳಲ್ಲಿ ಕಸದ ಪ್ರಮಾಣ ೬೫ ಟಿಪಿಡಿ ಆಗುವುದಾಗಿ ಅಂದಾಜಿಸಿ ಕಸವನ್ನು ವೈಜ್ಞಾನಿಕವಾಗಿ ಸಂಸ್ಕರಣೆ ಮತ್ತು ವಿಲೇವಾರಿ ಘಟಕವನ್ನು ೨ನೇ ಮೊಣ್ಣಂಗೇರಿ ಗ್ರಾಮದಲ್ಲಿ ಗುರುತಿಸಿರುವ ಜಾಗದಲ್ಲಿ ಯಾವುದೇ ತೊಂದರೆಯಾಗದ ರೀತಿಯಲ್ಲಿ ಮತ್ತು ಸುತ್ತಮುತ್ತಲಿನ ಜನರಿಗೆ ತೊಂದರೆಯಾಗದಂತೆ ಕ್ರಮಕೈಗೊಳ್ಳಲಾಗುವುದು.ಅನಿತಾ ಪೂವಯ್ಯ, ಅಧ್ಯಕ್ಷೆ, ಮಡಿಕೇರಿ ನಗರಸಭೆ೨ನೇ ಮೊಣ್ಣಂಗೇರಿ ಗ್ರಾಮದಲ್ಲಿ ಗುರುತಿಸಿರುವ ಜಾಗದಲ್ಲಿ ಜಲ ಮೂಲವಿದೆ. ಆ ನೀರನ್ನು ಕುಡಿಯಲು ಮತ್ತು ತೋಟಗಳಿಗೆ ಬಳಸಲಾಗುತ್ತದೆ. ಒಂದು ವೇಳೆ ಇಲ್ಲಿ ಘನತ್ಯಾಜ್ಯ ಘಟಕವನ್ನು ನಿರ್ಮಿಸಿದರೆ ಸ್ಥಳೀಯರಿಗೆ ತೊಂದರೆಯಾಗುತ್ತದೆ. ಹಾಗೂ ೨೦೧೮ ಮತ್ತು ೨೦೨೨ ರಲ್ಲಿ ಈ ಪ್ರದೇಶದಲ್ಲಿ ಭೂಕುಸಿತವಾಗಿದ್ದು, ಮುಂದಿನ ದಿನಗಳಲ್ಲಿಯೂ ಭೂಕುಸಿತವಾಗುವ ಸಂಭವವಿರುವುದರಿಂದ ಘನತ್ಯಾಜ್ಯ ಘಟಕ ನಿರ್ಮಿಸಲು ಬೇರೆ ಕಡೆ ಜಾಗ ಗುರುತಿಸುವುದು ಉತ್ತಮ.ದಯಾನಂದ, ಕೆ.ನಿಡುಗಣೆ ಗ್ರಾಮಸ್ಥರುಲ್ಯಾಂಡ್ ಫಿಲ್ಲಿಂಗ್ ವ್ಯವಸ್ಥೆಯು ಕೊಡಗಿಗೆ ಅವಶ್ಯಕತೆಯಿಲ್ಲ. ಪ್ಲಾಸ್ಟಿಕ್ ಬಳಕೆಯನ್ನು ಸಾರ್ವಜನಿಕರು ಕಡಿಮೆ ಮಾಡಿದಷ್ಟು ಘನತ್ಯಾಜ್ಯ ಉತ್ಪತ್ತಿ ಕಡಿಮೆಯಾಗುತ್ತದೆ. ಜನರು ಹಸಿ ಕಸವನ್ನು ತಮ್ಮ ಮನೆಯಲ್ಲಿಯೇ ಕಾಂಪೋಸ್ಟ್ ಮಾಡುವುದರಿಂದ ನಗರದಲ್ಲಿ ಕಸ ಉತ್ಪತ್ತಿಯ ಪ್ರಮಾಣ ಕಡಿಮೆಯಾಗುತ್ತದೆಅಪರ್ಣಾ, ಸದಸ್ಯ, ಕ್ಲೀನ್ ಕೂರ್ಗ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net