

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಅನಧಿಕೃತ ಒತ್ತುವರಿ ತೆರವುಗೊಳಿಸುವ ಕಾರ್ಯಾಚರಣೆಯನ್ನು ಮುಂದುವರೆದಿದ್ದು, ನಗರದ ರಘುವನಹಳ್ಳಿ, ದೊಡ್ಡಕಲ್ಲಸಂದ್ರ ಮತ್ತು ತಿಪ್ಪಸಂದ್ರ ಗ್ರಾಮಗಳಗಳಲ್ಲಿನ 3.20 ಕೋಟಿ ರೂ. ಮೌಲ್ಯದ ಸಿ.ಎ. ಸೈಟ್‌ಅನ್ನು ಮರುವಶಕ್ಕೆ ಪಡೆಯುವಲ್ಲಿ ಮಂಗಳವಾರ ಯಶಸ್ವಿಯಾಗಿದೆ.
ಬೆಂಗಳೂರು ದಕ್ಷಿಣ ತಾಲೂಕೀನ ಉತ್ತರಹಳ್ಳಿ ಹೋಬಳಿಗೆ ಸೇರಿದ ದೊಡ್ಡಕಲ್ಲಸಂದ್ರ, ರಘುವನಹಳ್ಳಿ ಮತ್ತು ತಿಪ್ಪಸಂದ್ರ ಸೇರಿ ಇತರ ಹಳ್ಳಿಗಳ ಹಲವು ಸರ್ವೆ ನಂಬರ್‌ಗಳಲ್ಲಿ ಬಡಾವಣೆ ಅಭಿವೃದ್ಧಿಪಡಿಸಲು ಸರ್ಕಾರದಿಂದ ಸುಮಾರು 191 ಎಕರೆ 2 ಗುಂಟೆ ಜಮೀನನ್ನು ಬಿಡಿಎ ಅನುಮೋದಿತ ನಕ್ಷೆಯನ್ನು ಪಡೆದು, ಬ್ಯಾಂಕ್ ಆಫೀಸರ್ಸ್ ಮತ್ತು ನೌಕರರ ಗೃಹನಿರ್ಮಾಣ ಸಹಕಾರ ಸಂಘಕ್ಕೆ ನೀಡಲಾಗಿತ್ತು. ಅನುಮೋದಿತ ನಕ್ಷೆಯಂತೆ ಬಡಾವಣೆಯನ್ನು ರಚನೆ ಮಾಡದೇ ಪ್ರಾಧಿಕಾರಕ್ಕೆ ಪರಿತ್ಯಾಜನಾ ಪತ್ರದ ಮೂಲಕ ನೋಂದಾಯಿಸಿಕೊಟ್ಟಿರುವ ಪಾರ್ಕ್ ಸ್ಥಳಗಳಲ್ಲಿ ಸೈಟ್‌ಗಳನ್ನು ಮಾರಾಟ ಮಾಡಿ ಪ್ರಾಧಿಕಾರದ ಆದೇಶವನ್ನು ಉಲ್ಲಂಘನೆ ಮಾಡಿರುವ ಹಿನ್ನೆಲೆಯಲ್ಲಿ ಉದ್ಯಾನವನ ಮತ್ತು ಆಟದ ಮೈದಾನದಲ್ಲಿ ಅನಧಿಕೃತವಾಗಿ ಒತ್ತುವರಿ ಮಾಡಿದ್ದ ಸುಮಾರು 2 ಎಕರೆ ಪ್ರದೇಶ ಹಾಗೂ ಸಿ.ಎ. ನಿವೇಶನದಲ್ಲಿ ಅನಧಿಕೃತವಾಗಿ ನಿರ್ಮಿಸಿದ್ದ ಕಟ್ಟಡವನ್ನು ತೆರವುಗೊಳಿಸಿ 4 ಗುಂಟೆ ಪ್ರದೇಶವನ್ನು ಪ್ರಾಧಿಕಾರವು ವಶಪಡಿಸಿಕೊಂಡಿದೆ.
ಈ ಕಾರ್ಯಾಚರಣೆಯಲ್ಲಿ ಪ್ರಾಧಿಕಾರದ ಆರಕ್ಷಕ ಅಧೀಕ್ಷಕ, ಇನ್‌ಸ್ಪೆಕ್ಟರ್, ದಕ್ಷಿಣ ವಿಭಾಗದ ಕಾರ್ಯಪಾಲಕ ಅಭಿಯಂತರರು, ಸಹಾಯಕ ಕಾರ್ಯಪಾಲಕ ಅಭಿಯಂತರರು ಹಾಗೂ ಸ್ಥಳೀಯ ಪೊಲೀಸ್ ಅಧಿಕಾರಿಗಳು ಪಾಲ್ಗೊಂಡಿದ್ದರು.