ಪೌತಿ ಖಾತೆಯಿಂದ ಆಸ್ತಿ ಸುರಕ್ಷಿತ

pauthi
ಪೌತಿ ಆಂದೋಲನದಲ್ಲಿ ತಹಸೀಲ್ದಾರ್ ಪ್ರತಿಭಾ ಆರ್., ಉಪ ತಹಸೀಲ್ದಾರ್‌ಗಳಾದ ದೇವಕಿ ಅಶೋಕ್ ಕೋಟೆಕಾರ್, ರವಿಕಿರಣ್, ಕಂದಾಯ ನಿರೀಕ್ಷಕ ಇಜ್ಜಾರ್ ಸಾಬಿರ್, ಕಚೇರಿ ಸಿಬ್ಬಂದಿ, ಗ್ರಾಮ ಆಡಳಿತಾಧಿಕಾರಿಗಳು ಹಾಜರಿದ್ದರು.
Published on

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ ಪೂರಕ ದಾಖಲೆಗಳೊಂದಿಗೆ ಜನರು ಯಾವುದೇ ಸಮಯದಲ್ಲಿ ಬಂದು ಪೌತಿ ಖಾತೆ ಮಾಡಿಸಿಕೊಂಡು ಆಸ್ತಿ ಸುರಕ್ಷಿತಗೊಳಿಸಿಕೊಳ್ಳಿ ಎಂದು ತಹಸೀಲ್ದಾರ್ ಪ್ರತಿಭಾ ಆರ್. ಹೇಳಿದರು. ಕಾಪು ತಾಲೂಕು ಆಡಳಿತ ಸಭಾಂಗಣದಲ್ಲಿ ಗುರುವಾರ ಕಾಪು ತಾಲೂಕು ಮಟ್ಟದ ಪೌತಿ ಆಂದೋಲನ ಮತ್ತು ಪಿಂಚಣಿ ಅದಾಲತ್‌ನಲ್ಲಿ ಮಾತನಾಡಿದರು. ಜಾಗ ಹಿರಿಯರ ಹೆಸರಿನಲ್ಲೇ ಇದ್ದು, ಜನರು ಅದನ್ನು ಗಮನಿಸಲು ಹೋಗುವುದಿಲ್ಲ. ಹಿರಿಯರ ಹೆಸರಿನಲ್ಲಿರುವ ಜಾಗವನ್ನು ತಮ್ಮ ಹೆಸರಿನಲ್ಲಿ ಮಾಡಿಸುವಂತೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಆದ್ಯತೆ ಮೇರೆಗೆ ಪೌತಿ ಆಂದೋಲನ ನಡೆಸಲಾಗುತ್ತಿದೆ. ಮುಂದೆಯೂ ಜನರಿಗೆ ಇದರ ಪ್ರಯೋಜನ ಸಿಗಲಿದೆ. ಆಂದೋಲನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ನಿಗದಿತ ಸಮಯದಲ್ಲಿ ಜನರಿಗೆ ಸಂತತಿ ನಕ್ಷೆ, ಮರಣ ಪ್ರಮಾಣ ಪತ್ರ ತರಲು ಕಷ್ಟವಾಗುತ್ತಿದೆ. ವಂಶವೃಕ್ಷ, ಮರಣ ಪ್ರಮಾಣಪತ್ರ, ಹೇಗೆ ಹಕ್ಕು ಬಂತು, ಆಧಾರ್ ಕಾರ್ಡ್ ಮತ್ತಿತರ ಪೂರಕ ದಾಖಲೆ ನೀಡಿದರೆ ಕೂಡಲೇ ಪೌತಿ ಖಾತೆಯಾಗುತ್ತದೆ. ಪೌತಿ ಖಾತೆ ಮಾಡಿಸಿಕೊಳ್ಳದಿದ್ದಲ್ಲಿ ಬೆಳೆ ಪರಿಹಾರ, ಪ್ರಕೃತಿ ವಿಕೋಪ ಪರಿಹಾರ, ಕಿಸಾನ್ ಸಮ್ಮಾನ್ ಯೋಜನೆ, ಬ್ಯಾಂಕ್‌ಸಾಲ, ಸೌಲಭ್ಯ ಪಡೆಯಲು ಅಡ್ಡಿಯಾಗಲಿದೆ. ಆದ್ದರಿಂದ ಕೂಡಲೇ ಪೌತಿ ಖಾತೆ ಮಾಡಿಸಿಕೊಳ್ಳುವಂತೆ ಕರೆ ನೀಡಿದರು. ಉಪ ತಹಸೀಲ್ದಾರ್‌ಗಳಾದ ದೇವಕಿ ಅಶೋಕ್ ಕೋಟೆಕಾರ್, ರವಿಕಿರಣ್, ಕಂದಾಯ ನಿರೀಕ್ಷಕ ಇಜ್ಜಾರ್ ಸಾಬಿರ್, ಕಚೇರಿ ಸಿಬ್ಬಂದಿ, ಗ್ರಾಮ ಆಡಳಿತಾಧಿಕಾರಿಗಳು ಹಾಜರಿದ್ದರು.

49 ಅರ್ಜಿಗಳಿಗೆ ಒಪ್ಪಿಗೆ

ಒಟ್ಟು 65 ಅರ್ಜಿ ಸ್ವೀಕಾರವಾಗಿದ್ದು, 48 ಅರ್ಜಿ ಪೌತಿ ಖಾತೆಗೆ ಒಪ್ಪಿಗೆಯಾಗಿವೆ. 16 ಅರ್ಜಿ ಅಪೂರ್ಣ ದಾಖಲೆ ಒಳಗೊಂಡಿದ್ದು, ಸಂತತಿ ನಕ್ಷೆ ಮತ್ತು ಮರಣ ಪತ್ರದ ದೃಢೀಕೃತ ಪ್ರತಿಗಳು ಇಲ್ಲದ ಕಾರಣ ಪೌತಿ ಖಾತೆಗೆ ಒಪ್ಪಿಗೆ ನೀಡಲು ಸಾಧ್ಯವಾಗಲಿಲ್ಲ. ಸದರಿ ದಾಖಲೆ ಸಲ್ಲಿಸಿದ ನಂತರ ಪೌತಿ ಖಾತೆ ಮಾಡಿಕೊಡಲಾಗುತ್ತದೆ.

ಪಿಂಚಣಿ ಅದಾಲತ್

ಪಿಂಚಣಿ ಅದಾಲತ್‌ನಲ್ಲಿ 19 ತಿರಸ್ಕೃತ ಅರ್ಜಿಗಳನ್ನು ಕುಂದಾಪುರ ಉಪ ವಿಭಾಗಾಧಿಕಾರಿ ಮಹೇಶ್‌ಚಂದ್ರ ವಿಚಾರಣೆ ಮಾಡಿ, ಅವುಗಳಲ್ಲಿ 5 ಅರ್ಜಿಗಳನ್ನು ಮರು ಪರಿಶೀಲನೆಗೆ ಶಿಫಾರಸು ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net