ಆಸ್ತಿ ಕಣಜ ತಂತ್ರಾಂಶಕ್ಕೆ ದಾಖಲೆ ಒದಗಿಸಿ

Asset Kanaj Software, Kolhara Papam Chief,
ಕೊಲ್ಹಾರ್ ಪಟ್ಟಣದ ಪಪಂ ಕಚೇರಿ ಸಭಾಂಗಣದಲ್ಲಿ ಆಸ್ತಿ ಕಣಜ ದಾಖಲೆಗಳ ಕ್ರೋಡೀಕರಣ ಕುರಿತು ಹಮ್ಮಿಕೊಂಡಿದ್ದ ಸಭೆಯಲ್ಲಿ ಮುಖ್ಯಾಧಿಕಾರಿ ವೀರೇಶ ಹಟ್ಟಿ ಮಾತನಾಡಿದರು. ತಹಸೀಲ್ದಾರ್ ಎಸ್.ಎಸ್.ನಾಯಕಲಮಠ, ಶಿವಾನಂದ ಮಂಜನಾಳ, ಎಸ್.ಐ.ಶೀಲವಂತ ಇತರರಿದ್ದರು.
Published on

ಕೊಲ್ಹಾರ: ಪಟ್ಟಣದಲ್ಲಿರುವ ಆಸ್ತಿಗಳನ್ನು ಸರ್ಕಾರದ ಆಸ್ತಿ ಕಣಜ ತಂತ್ರಾಂಶದಲ್ಲಿ ಸೇರ್ಪಡೆ ಮಾಡುವುದು ಅವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಪಟ್ಟಣದ ನಾಗರಿಕರು ತಮ್ಮ ನೊಂದಾಯಿತ ಆಸ್ತಿಗಳ ದಾಖಲೆಗಳನ್ನು ಪಪಂ ಕಾರ್ಯಾಲಯಕ್ಕೆ ಸಲ್ಲಿಸಬೇಕು ಎಂದು ಮುಖ್ಯಾಧಿಕಾರಿ ವೀರೇಶ ಹಟ್ಟಿ ಹೇಳಿದರು.

ಸ್ಥಳೀಯ ಪಪಂ ಸಭಾಂಗಣದಲ್ಲಿ ಆಸ್ತಿ ಕಣಜ ದಾಖಲೆಗಳ ಕ್ರೋಡೀಕರಣ ಹಾಗೂ ಹಸಿ ಕಸ ಮತ್ತು ಒಣ ಕಸ ವಿಂಗಡಣೆ ಘಟಕದ ಕುರಿತು ಗುರುವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಅವರು ಮಾತನಾಡಿದರು.

ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಎಲ್ಲ ಆಸ್ತಿಗಳ ದಾಖಲೆಗಳನ್ನು ಸರ್ಕಾರದ ಆಸ್ತಿ ಕಣಜ ತಂತ್ರಾಂಶದಲ್ಲಿ ಅಪ್ಲೋಡ್ ಮಾಡಿ ಡಿಜಿಟಲೀಕರಣ ಮಾಡುವ ಉದ್ದೇಶವಿದೆ. ಸ್ಥಳೀಯ ನಾಗರಿಕರು ನಿರಸ ಪ್ರತಿಕ್ರಿಯೆ ತೋರದೇ ಸರಿಯಾದ ದಾಖಲೆಗಳನ್ನು ನೀಡುವ ಮೂಲಕ ತಮ್ಮ ಚರ ಮತ್ತು ಸ್ಥಿರ ಆಸ್ತಿಗಳನ್ನು ದಾಖಲೀಕರಣಗೊಳಿಸಿಕೊಳ್ಳಬೇಕು ಎಂದರು.

ಪಟ್ಟಣ ಪಂಚಾಯಿತಿ ಆಡಳಿತ ಅಧಿಕಾರಿ- ತಹಸೀಲ್ದಾರ್ ಎಸ್.ಎಸ್.ನಾಯಕಲಮಠ ಮಾತನಾಡಿ, ದಾಖಲೆಗಳನ್ನು ಪಡೆದುಕೊಳ್ಳಲು ಪಟ್ಟಣ ಪಂಚಾಯಿತಿ ಸಿಬ್ಬಂದಿ ಪ್ರತಿ ಮನೆ ಮನೆಗೆ ಭೇಟಿ ನೀಡುವರು. ಆ ಸಮಯದಲ್ಲಿ ಪ್ರತಿಯೊಬ್ಬರು ದಾಖಲೆಗಳನ್ನು ನೀಡಬೇಕು ಅಥವಾ ಪಪಂ ಕಾರ್ಯಾಲಯಕ್ಕೆ ತಂದು ಸಲ್ಲಿಸಬೇಕು. ತಮ್ಮಗಳ ಆಸ್ತಿ ಡಿಜಿಟಲೀಕರಣಗೊಳ್ಳುವುದರಿಂದ ಸರ್ಕಾರಕ್ಕೆ ಮಾಹಿತಿ ದೊರಕುವಂತಾಗುತ್ತದೆ. ಒಂದು ಸಾರಿ ಇ-ಆಸ್ತಿಯಲ್ಲಿ ದಾಖಲಾಗುವುದರಿಂದ ಪದೇ ಪದೆ ನೀವು ದಾಖಲೆಗಳನ್ನು ಕೊಡುವ ಅವಶ್ಯಕತೆ ಇರುವುದಿಲ್ಲ ಎಂದರು.

ಕೃಷ್ಣಾ ಮೇಲ್ದಂಡೆ ಯೋಜನೆ ಅಡಿ ಕೊಲ್ಹಾರ ಮುಳುಗಡೆಯಾಗಿ ಪುನರ್ವಸತಿ ಕೇಂದ್ರ ಆಗಿರುವುದರಿಂದ ಪುನರ್ವಸತಿ ಇಲಾಖೆಯಿಂದ ಹಸ್ತಾಂತರ ಮಾಡುವ ಸಮಯದಲ್ಲಿ ಅಧಿಕೃತವಾಗಿ ಮಾಹಿತಿ ನೀಡಿರುವ 3642 ಆಸ್ತಿಗಳ ದಾಖಲೆಗಳನ್ನು ಮಾತ್ರ ಪಡೆದುಕೊಳ್ಳುತ್ತೇವೆ ಎಂದರು.

ಉಳಿದಂತೆ ಸಂತ್ರಸ್ತರಿಗೆ ಹಂಚಿಕೆಯಾದ ನಿವೇಶನಗಳ ಕುರಿತು ನ್ಯಾಯಾಲಯದಲ್ಲಿರುವ ತಕರಾರು ಪ್ರಕರಣಗಳು ಹಾಗೂ ಇತರ ವ್ಯಾಜ್ಯಗಳಿರುವ ಆಸ್ತಿಗಳನ್ನು ಹೊರತುಪಡಿಸಿ ಉಳಿದ ಆಸ್ತಿಗಳ ದಾಖಲೆಗಳನ್ನು ಪಡೆದು ಆಸ್ತಿ ಖನಿಜ ತಂತ್ರಾಂಶದಲ್ಲಿ ದಾಖಲಿಸಿ ಡಿಜಿಟಲೀಕರಣಗೊಳಿಸಲಾಗುವುದು. ಆದ ಕಾರಣ ಸಾರ್ವಜನಿಕರು ಸಹಕರಿಸಿ ಸರಿಯಾದ ದಾಖಲೆಗಳನ್ನು ಒದಗಿಸಬೇಕು ಎಂದರು.

ತ್ಯಾಜ್ಯ ವಿಲೇವಾರಿ, ಹಸಿ ಕಸ, ಒಣ ಕಸ ವಿಂಗಡಣೆ ಹಾಗೂ ಇತರ ಕಾಮಗಾರಿಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಯುಕೆಪಿ ನಂ.6ರ ಕಾರ್ಯನಿರ್ವಾಹಕ ಇಂಜಿನಿಯರ್ ಶಿವಾನಂದ ಮಂಜನಾಳ, ಎಸ್.ಐ.ಶೀಲವಂತ, ಪಪಂ ಸದಸ್ಯರಾದ ಶ್ರೀಶೈಲ ಮುಳವಾಡ, ನಿಂಗಪ್ಪ ಗಣಿ, ತೌಸ್ೀ ಗಿರಗಾಂವಿ, ಬಾಬು ಭಜಂತ್ರಿ, ದಸ್ತಗೀರ ಕಲಾದಗಿ, ಅಪ್ಪಾಸಿ ಮಟ್ಟಿಹಾಳ, ಯುವ ಮುಖಂಡರಾದ ಮಹೇಶ ಗಿಡ್ಡಪ್ಪಗೋಳ, ಇಕ್ಬಾಲ್ ನದಾಫ್, ಎಂ.ಆರ್.ಕಲಾದಗಿ, ಅಶೋಕ ಜಿಡ್ಡಿಬಾಗಿಲ, ಅನ್ವರ್ ಕಂಕರಪೀರ, ದಶರಥ ಈಟಿ, ಯುಕೆಪಿ ಅಧಿಕಾರಿಗಳು ಹಾಗೂ ಪಟ್ಟಣ ಪಂಚಾಯಿತಿ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net