ಅರಮನೆಯಲ್ಲಿ ರತ್ನಖಚಿತ ಸಿಂಹಾಸನ ಜೋಡಣೆ

simhasana
Published on

ಮೈಸೂರು: ನಾಡಹಬ್ಬ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮೈಸೂರು ಅರಮನೆಯಲ್ಲಿ ದಸರಾ ಆಚರಣೆ ಹಾಗೂ ಖಾಸಗಿ ದರ್ಬಾರ್‌ಗೆ ಸಿದ್ಧತೆ ಪ್ರಾರಂಭವಾಗಿದ್ದು, ಇದಕ್ಕೆ ಪೂರಕವಾಗಿ ಸೋಮವಾರ ಅಂಬಾವಿಲಾಸ ಅರಮನೆಯಲ್ಲಿ ರತ್ನಖಚಿತ ಸಿಂಹಾಸನ ಜೋಡಣೆ ಕಾರ್ಯ ಸಂಪ್ರದಾಯಬದ್ಧವಾಗಿ ನೆರವೇರಿತು.


ಅಂಬಾವಿಲಾಸ ಅರಮನೆಯಲ್ಲಿ ಅ.15 ರಿಂದ ಖಾಸಗಿ ದರ್ಬಾರ್ ನಡೆಯಲಿದೆ. ಹೀಗಾಗಿ, ಅರಮನೆಯ ನೆಲಮಾಳಿಗೆಯ ಖಜಾನೆಯಲ್ಲಿ ಭದ್ರವಾಗಿ ಇಡಲಾಗಿದ್ದ ಸಿಂಹಾಸನವನ್ನು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಸಮ್ಮುಖದಲ್ಲಿ ಹೊರ ತೆಗೆಯಲಾಯಿತು. ಬಿಡಿಬಿಡಿಯಾಗಿದ್ದ ಸಿಂಹಾಸನದ ಭಾಗಗಳನ್ನು ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ದರ್ಬಾರ್ ಹಾಲ್ಗೆ ತರಲಾಯಿತು. ಸಂಪ್ರದಾಯದಂತೆ ಸಿಂಹಾಸನ ಜೋಡಣೆ ಕಾರ್ಯ ನೆರವೇರಿತು.


ಬೆಳಗ್ಗೆ 10.05 ರಿಂದ 10.35ರ ಶುಭ ಲಗ್ನದಲ್ಲಿ ರತ್ನಖಚಿತ ಸಿಂಹಾಸನವನ್ನು ಜೋಡಿಸುವ ಧಾರ್ಮಿಕ ಕೈಂಕರ್ಯಕ್ಕೆ ಚಾಲನೆ ನೀಡಲಾಯಿತು. ಅರಮನೆ ಪುರೋಹಿತರು ಗಣಪತಿ ಹೋಮ, ಚಾಮುಂಡಿಪೂಜೆ, ಶಾಂತಿ ಹೋಮ ನೆರವೇರಿಸಿ ಪೂರ್ಣಾಹುತಿ ನೀಡಿದ ಬಳಿಕ ಧಾರ್ಮಿಕ ಕಾರ್ಯ ಮುಕ್ತಾಯಗೊಂಡಿತು.

ದರ್ಬಾರ್ ಹಾಲ್‌ನಲ್ಲಿ ಪೂಜಾ ಕೈಂಕರ್ಯ ನೆರವೇರಿದರೆ, ಕನ್ನಡಿ ತೊಟ್ಟಿಯಲ್ಲಿ ಭದ್ರಾಸನ ಜೋಡಣೆ, ಅರಮನೆಯ ಪುರೋಹಿತರ ನೇತೃತ್ವದಲ್ಲಿ ಗಣಪತಿ ಹೋಮ, ಚಾಮುಂಡಿ ಪೂಜೆ, ಶಾಂತಿ ಹೋಮ ಮಾಡಲಾಯಿತು.

ರಾಜಪರಂಪರೆಯ ಸಂಪ್ರದಾಯದಂತೆ ನವರಾತ್ರಿಯಲ್ಲಿ ಖಾಸಗಿ ದರ್ಬಾರ್ ನಡೆಸುವ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಈ ಧಾರ್ಮಿಕ ಕಾರ್ಯದಲ್ಲಿ ಭಾಗಿಯಾದರು. ಧಾರ್ಮಿಕ ವಿಧಿ ವಿಧಾನಗಳು ಪೂರ್ಣಗೊಂಡ ಬಳಿಕ ರತ್ನಖಚಿತ ಸಿಂಹಾಸನವನ್ನು ಬಿಳಿ ವಸ್ತ್ರದಲ್ಲಿ ಸಂಪೂರ್ಣ ಮುಚ್ಚಲಾಯಿತು. ಸಿಂಹಾಸನ ಜೋಡಣಾ ಕಾರ್ಯದ ಹಿನ್ನೆಲೆಯಲ್ಲಿ ಮಂಗಳವಾರ ಬೆಳಗ್ಗೆ 7ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಅರಮನೆಗೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net