

ನ್ಯಾಮತಿ: ಸಂತಸೇವಾಲಾಲರ ಜನ್ಮಸ್ಥಳ ಸೂರಗೊಂಡನಕೊಪ್ಪದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಅವರ 286ನೇ ಜಯಂತುತ್ಸವ ಕಾರ್ಯಕ್ರಮಕ್ಕೆ ಗುರುವಾರ ವಿದ್ಯುಕ್ತವಾಗಿ ಚಾಲನೆ ದೊರೆಯಿತು.
ವಿಧಾನಸಭೆ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ, ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಯದೇವ ನಾಯ್್ಕ ಅವರು ಧ್ವಜಾರೋಹಣ ನೆರವೇರಿಸುವ ಮೂಲಕ ಚಾಲನೆ ನೀಡಿದರು.
ಗಂಗಾಪೂಜೆ, ಕುಂಬಾಭಿಷೇಕ, ಮರಿಯಮ್ಮ ಹಾಗೂ ಸೇವಾಲಾಲರ ಕೆಂಪು ಮತ್ತು ಬಿಳಿ ಬಾವುಟ ಹಾರಿಸುವುದರೊಂದಿಗೆ ಪೂಜಾ ಕಾರ್ಯಕ್ರಮಗಳು ಶುರು ಆದವು.
ಕರ್ನಾಟಕ, ಮಹಾರಾಷ್ಟ್ರ ಸೇರಿ ನಾಡಿನ ನಾನಾ ಭಾಗಗಳಿಂದ ಆಗಮಿಸಿದ್ದ ಭಕ್ತ ರು ಇದಕ್ಕೆ ಸಾಕ್ಷಿಯಾದರು. ಧ್ವಜಾರೋಹಣ ಆಗುತ್ತಿದ್ದಂತೆ ಸೇವಾಲಾಲ್ ಮಹಾ ರಾಜ್ ಕಿ ಜೈ ಘೊಷಣೆಗಳು ಮುಗಿಲು ಮಟ್ಟಿದವು.
ತಾಂಡಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಎನ್.ರಾಜು ಮಾತನಾಡಿ ಭಕ್ತರಿಗೆ ನೀರು, ಊಟ, ಉಪಾಹಾರದ ಜತೆಗೆ ಧಾರ್ವಿುಕ ಆಚರಣೆಗೆ ಸೂಕ್ತ ವ್ಯವಸ್ಥೆ, ಹಿರಿಯ ನಾಗರಿಕರಿಗೆ ಉಚಿತ ಆಟೋ ಸೇವೆ,ಶೌಚಗೃಹ, ಬಿಸಿನೀರಿನ ಸ್ನಾನ ಗೃಹ ಒದಗಿಸಲಾಗಿದೆ ಎಂದರು.
20 ಸಾವಿರ ಲೀಟರ್ ಸಾಮರ್ಥ್ಯದ 25 ಕೆಎಂಎಫ್ ಹಾಲಿನ ಟ್ಯಾಂಕರ್ಗಳನ್ನು ಬಳಸಿಕೊಂಡು ನೀರಿನ ವ್ಯವಸ್ಥೆ ಮಾಡಲಾಗಿದೆ. ನಿರಂತರ ವಿದ್ಯುತ್ ಪೂರೈಕೆಗೆ ಒತ್ತು ನೀಡಲಾಗಿದೆ ಎಂದು ತಿಳಿಸಿದರು.
ಹೊನ್ನಾಳಿ ಉಪವಿಭಾಗದ ಉಪವಿಭಾಗಾಧಿಕಾರಿ ವಿ. ಅಭಿಷೇಕ್ ಮಾತನಾಡಿ, ಹೆಲಿಪ್ಯಾಡ್ ಸಿದ್ಧಪಡಿಸಲಾಗಿದೆ. ಕಿರು ವಾಟರ್ ಟ್ಯಾಂಕ್ಗಳನ್ನು ಸ್ಥಾಪಿಸಲಾಗಿದೆ. ಮಾಲಾಧಾರಿಗಳಾಗಿ ಬರುವ ಪಾದಯಾತ್ರೆಗಳಿಗೆ ಆಯ್ದ ಸ್ಥಳಗಳಲ್ಲಿ ನೀರಿನ ವ್ಯವಸ್ಥೆ ಮಾಡಲಾಗಿದೆ ಎಂದರು.
ತಹಸೀಲ್ದಾರಾದ ಎಚ್.ಬಿ. ಗೋವಿಂದಪ್ಪ,ಪಟ್ಟರಾಜಗೌಡ, ಸೇವಾಲಾಲ್ ಕ್ಷೇತ್ರಾಭಿವೃದ್ಧಿ ಮತ್ತು ನಿರ್ವಹಣಾ ಪ್ರತಿಷ್ಠಾನ ಹಾಗೂ ಮಹಾಮಠ ಸೇವಾ ಸಮಿತಿಯ ಹನುಮಂತನಾಯ್ಕ , ಪ್ರಕಾಶ್ ನಾಯ್ಕ , ಗೋಪಾಲ್ ನಾಯ್ಕ , ಹರೀಶ್ ನಾಯ್ಕ, ವಾಗೀಶ್ ನಾಯ್ಕ , ಬಿ.ಕೆ. ಕರಿಬಸಪ್ಪ ಇದ್ದರು.
ನಿರಂತರ ಪ್ರಸಾದಕ್ಕೆ ವ್ಯವಸ್ಥೆ: ಮೂರು ದಿನಗಳ ಕಾಲ ನಡೆಯುವ ಜಾತ್ರೆಯಲ್ಲಿ 3 ಲಕ್ಷಕ್ಕೂ ಹೆಚ್ಚು ಭಕ್ತರು ಭಾಗವಹಿಸುವ ನಿರೀಕ್ಷೆ ಇದೆ. ಎಲ್ಲರಿಗೂ ಪ್ರಸಾದ ಸಿದ್ದಪಡಿಸಲಾಗುತ್ತಿದೆ. ಅಡುಗೆ ತಯಾರಿಸಲು 500 ಬಾಣಸಿಗರು, ಇತರೆ ಕಾರ್ಯಕ್ಕೆ 200 ಜನರ ತಂಡವಿದೆ. ಗುರುವಾರ ಬೆಳಗ್ಗೆಯಿಂದ ಶನಿವಾರ ರಾತ್ರಿಯವರೆಗೆ ನಿರಂತರ ಪ್ರಸಾದ ವ್ಯವಸ್ಥೆ ಮಾಡಲಾಗಿದೆ.