ವಿಧಾನಸಭಾ ಅಧ್ಯಕ್ಷರ ನಿರ್ಧಾರ ಕಾನೂನುಬಾಹಿರ

Ayanur manjunath
ಮಾಜಿ ಎಂಎಲ್‌ಸಿ ಆಯನೂರು ಮಂಜುನಾಥ್
Published on

ಶಿವಮೊಗ್ಗ: ಬಿಜೆಪಿಯ 18 ಶಾಸಕರನ್ನು ಅಮಾನತು ಮಾಡಿರುವ ಆದೇಶ ಹಿಂಪಡೆದ ಸ್ಪೀಕರ್ ಯು.ಟಿ.ಖಾದರ್ ನಿರ್ಧಾರ ಕಾನೂನುಬಾಹಿರ ಎಂದು ಮಾಜಿ ಎಂಎಲ್‌ಸಿ ಆಯನೂರು ಮಂಜುನಾಥ್ ದೂರಿದರು.

ಮಾ.18ರಂದು ಬಜೆಟ್ ಅಧಿವೇಶನದ ಕೊನೆಯ ದಿನ ಸ್ಪೀಕರ್ 18 ಶಾಸಕರ ಅಮಾನತು ಆದೇಶವನ್ನು ಸದನದ ಒಪ್ಪಿಗೆಗೆ ಹಾಕಿದ್ದರು. ಸದನ ಧ್ವನಿ ಮತದಿಂದ ಅಂಗೀಕರಿಸಿತ್ತು. ಆರು ತಿಂಗಳ ಅವಧಿಗೆ 18 ಶಾಸಕರು ಅಮಾನತುಗೊಂಡಿದ್ದರು. ಇದೀಗ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಪ್ರತಿಪಕ್ಷದ ನಾಯಕ ಆರ್.ಅಶೋಕ್, ಕಾನೂನು ಸಚಿವ ಎಚ್.ಕೆ.ಪಾಟೀಲ್ ಹಾಗೂ ಯು.ಟಿ.ಖಾದರ್ ಅವರ ನೇತೃತ್ವದಲ್ಲಿ ಮಾತುಕತೆ ನಡೆದು ಅಮಾನತು ಆದೇಶ ಹಿಂಪಡೆದಿರುವುದು ಸದನದ ನಿಯಾಮವಳಿಗೆ ವಿರುದ್ಧವಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಸಿಎಂ, ಡಿಸಿಎಂ ಹಾಗೂ ಪ್ರತಿಪಕ್ಷದ ನಾಯಕರೆ ಸದನವಲ್ಲ. ಇವರೆಲ್ಲರೂ ಸದನದ ಒಂದು ಭಾಗ. ಅಂದು ಸದನದಲ್ಲಿ ತೆಗೆದುಕೊಂಡ ಸರ್ವಾನುಮತದ ನಿರ್ಣಯ ಪುನಃ ಸದನದಲ್ಲೇ ಪ್ರಸ್ತಾಪವಾಗಿ ತೀರ್ಮಾನ ಆಗಬೇಕಾಗಿತ್ತು. ಆದರೆ ಸಭಾಧ್ಯಕ್ಷರು ಅಮಾನತು ಆದೇಶ ಹಿಂಪಡೆದಿರುವುದು ಸದನಕ್ಕೆ ಮಾಡಿದ ಅಗೌರವ ಎಂದರು. ಅಮಾನತು ಹಿಂಪಡೆದ ವಿಚಾರದಲ್ಲಿ ಸ್ಪೀಕರ್ ಖಾದರ್ ಅವರ ಈ ನಿರ್ಧಾರ ತಪ್ಪಾಗಿದ್ದು, ಮುಂದಿನ ದಿನಗಳಲ್ಲಿ ಸಾಕಷ್ಟು ಪರಿಣಾಮ ಬೀರಲಿದೆ. ಸದನದಲ್ಲಿ ಆದಂತಹ ನಿರ್ಣಯ ವಾಪಸ್ ತೆಗೆದುಕೊಳ್ಳುವಂತಹ ಕಾರ್ಯಕ್ಕೆ ಅವಕಾಶ ಆದಂತಾಗುತ್ತದೆ ಎಂದು ಹೇಳಿದರು. ಸದನದಲ್ಲಿ ತೆಗೆದುಕೊಂಡ ನಿರ್ಣಯದ ಬಗ್ಗೆ ವಾಪಸ್ ತೆಗೆದುಕೊಳ್ಳುವ ವಿವೇಚನಾ ಅವಕಾಶ ಸಭಾಧ್ಯಕ್ಷರಿಗೆ ಇಲ್ಲ. 6.5 ಕೋಟಿ ಜನತೆ ದೃಷ್ಟಿಯಿಂದ ಮಂಡಿಸಲಾದ ಬಜೆಟ್ ಬಗ್ಗೆ ಚರ್ಚಿಸದೆ ಹನಿಟ್ರಾೃಪ್‌ನಂತಹ ವಿಷಯದ ಚರ್ಚೆಗೆ ಸಮಯ ವ್ಯರ್ಥ ಮಾಡಿದ್ದೂ ಸರಿಯಲ್ಲ ಎಂದು ತಿಳಿಸಿದರು.

ಶಾಸಕರ ಅಮಾನತು ಹಿಂಪಡೆದ ಸ್ಪೀಕರ್ ಯು.ಟಿ.ಖಾದರ್ ಅವರ ನಿರ್ಧಾರದಿಂದ ಸದನದ ಪಾವಿತ್ರೃಕ್ಕೆ ಧಕ್ಕೆ ಬಂದಿದೆ. ಸಿಎಂ ಸೇರಿದಂತೆ ಹಿರಿಯ ರಾಜಕಾರಣಿಗಳು ಎಚ್ಚರಿಕೆಯಿಂದ ಇರಬೇಕಿತ್ತು. ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಳ್ಳಬಾರದಿತ್ತು. ಸಂವಿಧಾನಕ್ಕೆ ಚ್ಯುತಿ ಬಾರದಂತೆ ಶಾಸಕರಿಗೆ ಕರ್ತವ್ಯ ನಿರ್ವಹಿಸಲು ಅನುವು ಮಾಡಿಕೊಡುವ ದೃಷ್ಟಿಯಿಂದ ಶಿಫಾರಸ್ಸುಗಳನ್ನು ಸ್ವಲ್ಪ ಸಡಿಲಗೊಳಿಸಲು ಅವಕಾಶವಿತ್ತು. - ಆಯನೂರು ಮಂಜುನಾಥ್, ಮಾಜಿ ಎಂಎಲ್‌ಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net