

ಸಿಂದಗಿ: ವಿಧಾನಸಭೆಯ ಸಾಂವಿಧಾನಿಕ ಪೀಠದ ಸಭಾಧ್ಯಕ್ಷನಾದರೂ ನಾನು ಪ್ರತಿಪಕ್ಷಗಳ ಮಿತ್ರ. ಎರಡೂ ಪಕ್ಷದವರಿಗೂ ಚರ್ಚೆ ಮತ್ತು ಉತ್ತರಕ್ಕೆ ಸಮಾನ ಅವಕಾಶ ಕೊಟ್ಟು ನನ್ನ ಹುದ್ದೆಯ ಜವಾಬ್ದಾರಿಯನ್ನು ನಿರ್ವಹಿಸಿರುವೆ ಎಂದು ವಿಧಾನಸಭೆ ಅಧ್ಯಕ್ಷ ಯ.ಟಿ. ಖಾದರ್ ಹೇಳಿದರು.
ಪಟ್ಟಣದಲ್ಲಿ ಗುರುವಾರ ತಾಲೂಕು ಶಿಕ್ಷಣ ಪ್ರಸಾರಕ ಮಂಡಳಿಯ ಎಚ್.ಜಿ. ಪದವಿಪೂರ್ವ ಕಾಲೇಜಿನ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಜವಾಬ್ದಾರಿಯಾಗಿ ಸಭಾಧ್ಯಕ್ಷ ಹುದ್ದೆಯನ್ನು ನಿಭಾಯಿಸಿದರೂ ಪ್ರತಿಪಕ್ಷದವರಿಗೆ ನನ್ನ ಮೇಲೆ ಸಂಶಯ ಜಾಸ್ತಿ. ಸದನದಲ್ಲಿ ಪ್ರತಿಪಕ್ಷ ಹಾಗೂ ಆಡಳಿತ ಪಕ್ಷಗಳು ವಿರೋಧ ಮಾಡಿ, ಮಾಡಿ ಕೊನೆಗೆ ನನ್ನ ಮೇಲೆಯೇ ಆರೋಪ ಹೊರಿಸುತ್ತಾರೆ ಎಂದರು.
ಎಲ್ಲ ಶಾಸನ ಸಭೆಗಳ ಸಂಸದೀಯ ವಿಚಾರಗಳು ಸಮಾಜದ ಅಭಿವೃದ್ಧಿಗೆ ಗಟ್ಟಿಗೊಳ್ಳಬೇಕು. ಸಂವಿಧಾನ ಬಲಿಷ್ಠಗೊಳಿಸಿದರೆ, ಭಾರತವೇ ಬಲಿಷ್ಠಗೊಳ್ಳುವುದು. ಗೌರವ ಮತ್ತು ಅವಕಾಶಗಳುಳ್ಳ ಭಾರತದ ವಿಶೇಷತೆಗಳು ಅನ್ಯ ದೇಶಗಳಿಗೆ ಭೇಟಿ ಕೊಟ್ಟಾಗ ಅರ್ಥಗೊಳ್ಳುತ್ತವೆ. ನಿರ್ಭಯವಾಗಿ ದೇಶ ಸುತ್ತುವ ವಾಸ್ತವತೆಯು ಡಾ. ಬಿ.ಆರ್. ಅಂಬೇಡ್ಕರ್ ಅವರು ಬರೆದ ಸಂವಿಧಾನದ ಆಶಯವಾಗಿದೆ. ಸಹೋದರತ್ವದ ಮೂಲಕ ಸಂವಿಧಾನ ಉಳಿವು ಸಾಧ್ಯ. ನಮಗೆ ಆತ್ಮವಿಶ್ವಾಸದ ಬದುಕು ರೂಪಿಸಿಕೊಳ್ಳಲು, ಭಾತೃತ್ವದ ಭಾರತದ ಕನಸುಗಳು ವಿಶ್ವಕ್ಕೆ ಮಾದರಿಯಾಗಿವೆ ಎಂದರು.
ನಮ್ಮೆಲ್ಲರ ಭಾರತವನ್ನು ನಾವೆಲ್ಲರೂ ದುಶ್ಚಟ ಮತ್ತು ದ್ವೇಷ ಮುಕ್ತವಾಗಿಸಬೇಕಿದೆ. ಮೊದಲು ನಾವು ಸರಿಗೊಂಡಾಗ, ಹಂತ ಹಂತವಾಗಿ ಎಲ್ಲವೂ ಸರಿ ಹೋಗುತ್ತದೆ ಎಂಬ ಆಶಾಭಾವಕ್ಕೆ ನಾವು ಮಣಿಯೋಣ. ಭವಿಷ್ಯದ ದಿನಗಳಲ್ಲಿ ಪ್ರೀತಿ, ವಿಶ್ವಾಸದ ಮೂಲಕ ಭಾರತವನ್ನು ಬಲಿಷ್ಠಗೊಳಿಸೋಣ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಹಾಗೂ ತಾಶಿಪ್ರ ಮಂಡಳಿ ಅಧ್ಯಕ್ಷ ಅಶೋಕ ಮನಗೂಳಿ ಮಾತನಾಡಿದರು. ಸಭಾಧ್ಯಕ್ಷ ಯು.ಟಿ. ಖಾದರ್ ಹಾಗೂ ಹೆಲ್ತ್‌ಕೇರ್ ಎಕ್ಸಲೆನ್ಸ್-2023ರ ಗೌರವಕ್ಕೆ ಪಾತ್ರರಾದ ವೈದ್ಯ ಡಾ. ಶಾಂತವೀರ ಮನಗೂಳಿ ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ಟಿ. ಭೂಬಾಲನ್ ಮಾತನಾಡಿದರು. ವೇದಿಕೆಯಲ್ಲಿ ಜಿಪಂ ಸಿಇಒ ರಾಹುಲ್ ಶಿಂಧೆ, ಸಂಸ್ಥೆಯ ನಿರ್ದೇಶಕ ಶಿವಪ್ಪಗೌಡ ಬಿರಾದಾರ, ಅಂಜುಮನ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಎಸ್.ಎಂ. ಪಾಟೀಲ ಇದ್ದರು.