

ಶಿವಮೊಗ್ಗ: ಮುಂದಿನ ವಿಧಾನಸಭಾ ಅಧಿವೇಶನದಲ್ಲಿ ಲವ್ ಜಿಹಾದ್ ಮಸೂದೆ ಮಂಡನೆ ಮಾಡಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ಕುಮಾರ್ ಕಟೀಲ್ ಹೇಳಿದರು.
ಬೆಳಗಾವಿಯಲ್ಲಿ ನಡೆದಿದ್ದ ವಿಶೇಷ ಸಭೆಯಲ್ಲಿ ಗೋಹತ್ಯೆ ನಿಷೇಧ ಹಾಗೂ ಲವ್ ಜಿಹಾದ್ ಬಗ್ಗೆ ರ್ಚಚಿಸಲಾಗಿತ್ತು. ಅದರಂತೆ ಕಳೆದ ಅಧಿವೇಶನದಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿ ಮಾಡಲಾಗಿದೆ. ಮುಂದೆ ಲವ್ ಜಿಹಾದ್ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸುದ್ದಿಗಾರರಿಗೆ ತಿಳಿಸಿದರು.
ಗ್ರಾಪಂ ಚುನಾವಣೆ ಸೋಲು ಕಾಂಗ್ರೆಸ್ ನಾಯಕರನ್ನು ಹತಾಶೆಗೆ ದೂಡಿದೆ. ಬಿಜೆಪಿ ಬೆಂಬಲಿಗರು ಅಭೂತಪೂರ್ವ ಗೆಲುವು ಸಾಧಿಸಿರುವುದನ್ನು ಕಂಡು ಕಾಂಗ್ರೆಸ್ ಮುಖಂಡರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಇನ್ನೂ 10 ವರ್ಷ ಅಧಿಕಾರಕ್ಕೆ ಬರಲ್ಲ ಎಂಬ ಭಯ ಅವರಿಗೆ ಆರಂಭವಾಗಿದೆ. ಹಾಗಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮನಸ್ಸಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಹೇಳಿದರು.
ರಾಜ್ಯದಲ್ಲಿ 42 ಸಾವಿರ ಬಿಜೆಪಿ ಕಾರ್ಯಕರ್ತರು ಗ್ರಾಪಂ ಚುನಾವಣೆಯಲ್ಲಿ ಗೆದ್ದಿದ್ದಾರೆ. ಶಿವಮೊಗ್ಗ ಸಂಘಟನಾತ್ಮಕ ಪ್ರಮುಖ ಕೇಂದ್ರ. ಹಾಗಾಗಿ ಇಲ್ಲಿ 2 ದಿನ ಸಭೆ ನಡೆಯುತ್ತಿದೆ. ಸಂಘಟನಾತ್ಮಕವಾಗಿ 3 ತಿಂಗಳಿಗೆ ಕಾರ್ಯಕಾರಿಣಿ ಮತ್ತು ವಿಶೇಷ ಸಭೆ ನಡೆಯಲಿದೆ. ಅದರಂತೆ ಶಿವಮೊಗ್ಗದಲ್ಲಿ ವಿಶೇಷ ಕಾರ್ಯಕಾರಣಿ ಸಭೆ ನಡೆಯುತ್ತಿದೆ ಎಂದರು.