ತೆರಿಗೆ ಇಳಿಸಿದ್ದಕ್ಕೆ ಕಾಂಗ್ರೆಸ್ ಕೊಂಕು: ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಟೀಕೆ

Assembly Opposition Leader R. Ashok Press Conference Mandya
Published on

ಮಂಡ್ಯ: ಜನರಿಗೆ ಅನುಕೂಲವಾಗಲೆಂದು ಕೇಂದ್ರ ಸರ್ಕಾರ ತೆರಿಗೆ ಇಳಿಸಿದೆ. ಆದರೆ ಜಿಎಸ್‌ಟಿ ಇಳಿಕೆಯಿಂದ ರಾಜ್ಯ ಸರ್ಕಾರಕ್ಕೆ ನಷ್ಟವಾಗುತ್ತಿದೆಯೆಂದು ಕಾಂಗ್ರೆಸ್ ಕೊಂಕಿನ ಮಾತುಗಳನ್ನಾಡುತ್ತಿದೆ. ಹೀಗೆ ಹೇಳಲು ಕಾಂಗ್ರೆಸ್ ನಾಯಕರಿಗೆ ನಾಚಿಕೆಯಾಗಬೇಕು ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಟೀಕಿಸಿದರು.

ಕೇಂದ್ರ ಸರ್ಕಾರ ತೆರಿಗೆ ಇಳಿಸಿದರೆ ರಾಜ್ಯ ಸರ್ಕಾರಕ್ಕೆ ಹೇಗೆ ನಷ್ಟವಾಗುತ್ತದೆ. ಬಹುಶಃ ತೆರಿಗೆ ಕಡಿತದಿಂದಾಗಿ ಅವರ ಕಮಿಷನ್ ದಂಧೆಗೆ ಹೊಡೆತ ಬಿದ್ದಿರಬೇಕು. ಇದಕ್ಕಾಗಿ ತೆರಿಗೆ ಕಡಿತಕ್ಕೆ ಆಕ್ಷೇಪವೆತ್ತಿದ್ದಾರೆ. ಇದನ್ನು ಗಮನಿಸಿದರೆ ರಾಜ್ಯದ ಜನರ ಜೀವನ ಮಟ್ಟ ಸುಧಾರಿಸಲು ಆಲೋಚನೆ ಕಾಂಗ್ರೆಸ್‌ಗಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ವಾಗ್ದಾಳಿ ನಡೆಸಿದರು.

ಜನರಿಗೆ ಹೆಚ್ಚಿನ ತೆರಿಗೆ ಹಾಕುವುದರಲ್ಲಿ ಕಾಂಗ್ರೆಸ್ಸಿಗರು ನಿಸ್ಸೀಮರು. ಒಂದು ರೀತಿಯಲ್ಲಿ ಗಬ್ಬರ್‌ಸಿಂಗ್ ತೆರಿಗೆ ನೀತಿ ಅವರದು. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಳಿಕ ವಿವಿಧ ತೆರಿಗೆ ಮತ್ತು ಸೇವಾ ಶುಲ್ಕಗಳನ್ನು ದುಪ್ಪಟ್ಟು ಮಾಡಿದೆ. ನಂದಿನಿ ಹಾಲು, ಶುದ್ಧ ಕುಡಿಯುವ ನೀರು, ವಾಹನಗಳ ನೋಂದಣಿ ಶುಲ್ಕ, ಮದ್ಯದ ಮೇಲೆ ತೆರಿಗೆ, ಪತ್ರಾಂಕ ನೋಂದಣಿ ಶುಲ್ಕ, ವಿವಿಧ ದಾಖಲೆಗಳ ಶುಲ್ಕವನ್ನು ದುಬಾರಿ ಮಾಡಿದೆ. ಮುಖ್ಯವಾಗಿ ಯಾವುದೇ ಕಾರಣ ಕೊಡದೆ ತೆರಿಗೆ ಹೆಚ್ಚಿಸಲಾಗುತ್ತಿದೆ. ಈ ಹಿಂದೆ ಬಸವರಾಜ ಬೊಮ್ಮಾಯಿ ಅವರು ಸಿಎಂ ಆಗಿದ್ದಾಗ ಬಿಜೆಪಿ ಸರ್ಕಾರದಿಂದ ಯಾವುದೇ ಹೊರ ತೆರಿಗೆಗಳನ್ನು ಹಾಕಿರಲಿಲ್ಲ. ಆದರೆ, ಈಗಿನ ಕಾಂಗ್ರೆಸ್ ಸರ್ಕಾರ ತೆರಿಗೆ, ಶುಲ್ಕ ಹೆಚ್ಚಳದ ಮೂಲಕವೇ 65 ಸಾವಿರ ಕೋಟಿ ರೂ ಸಂಗ್ರಹಿಸಿದೆ ಎಂದು ಕಿಡಿಕಾರಿದರು.

ರಾಜ್ಯಸರ್ಕಾರದ ಬಳಿ ಹಣವಿಲ್ಲ. ನೌಕರರಿಗೆ ವೇತನ ಕೊಡಲಾಗುತ್ತಿಲ್ಲ. ವಿವಿಧ ನಿಗಮಗಳಿಗೆ ನೀಡುತ್ತಿರುವ ಅನುದಾನ ಕಡಿತವಾಗಿದೆ. ಹೀಗಾಗಿ ನಿಗಮಗಳಿಗೆ ಜನರಿಗೆ ಅಗತ್ಯ ಸಾಲ ಸೌಲಭ್ಯ ದೊರೆಯುತ್ತಿಲ್ಲ. ಪರಿಣಾಮ ಜನರು ಅನಿವಾರ್ಯವಾಗಿ ಮೈಕ್ರೋ ಫೈನಾನ್ಸ್‌ಗಳಿಂದ ಸಾಲ ಪಡೆಯುತ್ತಿದ್ದಾರೆ. ಆದರೆ ಸಕಾಲಕ್ಕೆ ತೀರಿಸಲು ಸಾಧ್ಯವಾಗದೇ ಸಾಲದ ಒತ್ತಡ ತಾಳಲಾರದೆ ಆತ್ಮಹತ್ಯೆಯ ಹಾದಿ ಹಿಡಿಯುತ್ತಿದ್ದಾರೆ. ಇದು ರಾಜ್ಯ ಕಾಂಗ್ರೆಸ್ ಸರ್ಕಾರದ ಕೊಡುಗೆಯಾಗಿದೆ ಎಂದು ಟೀಕಿಸಿದರು.

ವಿವಿಧ ವಸ್ತುಗಳು, ಉತ್ಪನ್ನಗಳ ಮೇಲೆ ಜಿಎಸ್‌ಟಿ ಪ್ರಮಾಣ ಇಳಿಕೆ ಮಾಡುವ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನುಡಿದಂತೆ ನಡೆದುಕೊಂಡಿದೆ. ಈ ಮೂಲಕ ತಾನು ಜನಪರ ಸರ್ಕಾರ ಎಂಬುದನ್ನು ಸಾಬೀತು ಮಾಡಿದೆ. ಆದರೆ, ಕಾಂಗ್ರೆಸ್ ನಾಯಕರು ತೆರಿಗೆ ಇಳಿಸಿದ್ದೇಕೆ ಎಂದು ಪ್ರಶ್ನಿಸುತ್ತಿದ್ದಾರೆ. ತೆರಿಗೆ ಇಳಿಕೆಯನ್ನು ಸ್ವಾಗತಿಸದೆ ಪ್ರಶ್ನಿಸುತ್ತಿದ್ದಾರೆ. ಇಲ್ಲಸಲ್ಲದ ಕೊಂಕು ಮಾತುಗಳನ್ನಾಡುತ್ತಿದ್ದಾರೆ. ಕೇಂದ್ರ ಸರ್ಕಾರ ತೆರಿಗೆ ಇಳಿಸಿದರೆ ನಾನೇನು ಕಡಿಮೆ ಎಂದು ರಾಜ್ಯ ಸರ್ಕಾರವೂ ಪೈಪೋಟಿಗೆ ಬಿದ್ದು ತೆರಿಗೆ, ಶುಲ್ಕ ಪ್ರಮಾಣವನ್ನು ಕಡಿತಗೊಳಿಸಬೇಕು. ಆದರೆ, ಅಂತಹ ಆರೋಗ್ಯಕರ ಪೈಪೋಟಿ ಕರ್ನಾಟಕದಲ್ಲಿ ಕಾಣುತ್ತಿಲ್ಲ. ಬಡವರಿಗೆ ಅಗತ್ಯ ವಸ್ತುಗಳಲ್ಲಿ ಕೈಗೆಟುವ ಬೆಲೆಯಲ್ಲಿ ದೊರೆಯುವಂತೆ ಮಾಡುವುದು ಸರ್ಕಾರಗಳ ಜವಾಬ್ದಾರಿ. ಆದರೆ, ರಾಜ್ಯ ಸರ್ಕಾರಕ್ಕೆ ಆ ಮನಸ್ಥಿತಿ ಇದ್ದಂತಿಲ್ಲ. ಕೇಂದ್ರ ಸರ್ಕಾರ ತೆರಿಗೆ ಇಳಿಸಿರುವುದರಿಂದ ನಾವೂ ಅದಕ್ಕಿಂತ ಹೆಚ್ಚು ತೆರಿಗೆಯನ್ನು ಇಳಿಕೆ ಮಾಡುತ್ತೇವೆನ್ನುವ ನಿರ್ಧಾರವನ್ನು ರಾಜ್ಯ ಸರ್ಕಾರ ಮಾಡಲಿ. ಅದನ್ನು ಬಿಟ್ಟು ಟೀಕೆ ಮಾಡುವುದು ಸರಿಯಲ್ಲ. ಆದರೆ ಕಾಂಗ್ರೆಸ್ ಸರ್ಕಾರದ ದುರಾಡಳಿತದಿಂದ ರಾಜ್ಯವನ್ನು ದಿವಾಳಿ ಮಾಡುತ್ತಿದೆ ಎಂದು ಲೇವಡಿ ಮಾಡಿದರು.

ಜಿಎಸ್‌ಟಿ ಇಳಿಕೆಯಿಂದಾಗಿ ಹಾಲಿನ ಉತ್ಪನ್ನಗಳು, ಕುರುಕಲು ತಿಂಡಿ, ಪಾತ್ರೆ, ಹೊಲಿಗೆಯಂತ್ರ. ಟಿವಿ, ಫ್ರಿಡ್ಜ್, ವಾಷಿಂಗ್‌ಮೆಷಿನ್, ಸಿಮೆಂಟ್, ಪಾತ್ರೆ ಸಾಮಗ್ರಿಗಳು, ಬೆಣ್ಣೆ-ತುಪ್ಪದಂತಹ ಡೇರಿ ಉತ್ಪನ್ನಗಳು, ರಸಗೊಬ್ಬರ ಸೇರಿದಂತೆ ದಿನಬಳಕೆಯ ವಸ್ತುಗಳ ಬೆಲೆ, ರೆಸ್ಟೋರೆಂಟ್‌ಗಳ ಆಹಾರಗಳ ಬೆಲೆಯೂ ಕಡಿಮೆಯಾಗಿದೆ. ಮನಮೋಹನ್‌ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಆಗಿನ ಕಾಂಗ್ರೆಸ್ ಸರ್ಕಾರ ಅಗತ್ಯ ವಸ್ತುಗಳ ಮೇಲೆ ಶೇ.30ಷ್ಟು ತೆರಿಗೆ ವಿಧಿಸುತ್ತಿತ್ತು. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು ಶೇ.18ಕ್ಕೆ ಜಿಎಸ್‌ಟಿ ಪ್ರಮಾಣ ಇಳಿಸಿದ್ದರು. ಈಗ ಈ ಪ್ರಮಾಣವನ್ನು ಇನ್ನೂ ಕಡಿತಗೊಳಿಸಿದ್ದಾರೆ. ಇದಕ್ಕಾಗಿ ಕರ್ನಾಟಕದ ಜನರ ಪರವಾಗಿ ಕೇಂದ್ರ ಸರ್ಕಾರವನ್ನು ಅಭಿನಂದಿಸುತ್ತೇವೆ ಎಂದು ಹೇಳಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್, ರಾಜ್ಯ ಕಾರ್ಯಕಾರಣಿ ಸದಸ್ಯ ಡಾ.ಸಿದ್ದರಾಮಯ್ಯ, ಯುವ ಮುಖಂಡರಾದ ಇಂಡುವಾಳು ಸಚ್ಚಿದಾನಂದ, ಎಸ್.ಪಿ.ಸ್ವಾಮಿ, ಅಶೋಕ್ ಜಯರಾಂ, ವಸಂತ್‌ಕುಮಾರ್, ಎಚ್.ಆರ್.ಅಶೋಕ್‌ಕುಮಾರ್ ಇತರರಿದ್ದರು.

ಸಂಭ್ರಮಾಚರಣೆ: ಕೇಂದ್ರ ಸರ್ಕಾರ ತೆರಿಗೆ ಇಳಿಕೆ ಮಾಡಿರುವ ಹಿನ್ನೆಲೆಯಲ್ಲಿ ಬಿಜೆಪಿಯಿಂದ ನಗರದ ಪೇಟೆಬೀದಿಯಲ್ಲಿ ವ್ಯಾಪಾರಿಗಳೊಂದಿಗೆ ಸಂಭ್ರಮಾಚರಣೆ ಮಾಡಲಾಯಿತು. ಆರ್.ಅಶೋಕ್ ಅವರು ವ್ಯಾಪಾರಿಗಳು ಹಾಗೂ ಸಾರ್ವಜನಿಕರಿಗೆ ಸಿಹಿ ತಿನಿಸಿದರು. ಈ ವೇಳೆ ಕೇಂದ್ರ ಸರ್ಕಾರದ ಪರ ಘೋಷಣೆ ಮೊಳಗಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net