

ಮಂಡ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ ತಾನು ರಾಜಕಾರಣದಲ್ಲಿ ಕ್ಲೀನ್ ಎಂದಿದ್ದಾರೆ. ಆದರೆ ಕ್ಲೀನ್ ಆಗಿ ಅಕ್ರಮದಿಂದ ಮುಡಾ ನಿವೇಶನ ಮಾಡಿಕೊಂಡಿದ್ದಾರೆ. ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಎಚ್ಚರಿಕೆ ನೀಡಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮುಡಾ ಹಗರಣಕ್ಕೆ ಸಂಬಂಧಿಸಿದ ದಾಖಲೆ ಬಿಡುಗಡೆ ಮಾಡಿ ಮಾತನಾಡಿದ ಅವರು, ನಿಂಗ ಎಂಬುವವರು 1936ರಲ್ಲಿ 3 ಎಕರೆ 16 ಗುಂಟೆ ಜಮೀನನ್ನು 1 ರೂಪಾಯಿಗೆ ತೆಗೆದುಕೊಂಡಿದ್ದರು. ಇದಾದ ನಂತರ ನಿಂಗ ಸಾವನ್ನಪ್ಪಿದರೆ, ಆತನ ಪತ್ನಿ ನಿಂಗಮ್ಮ 1990ರಲ್ಲಿ ನಿಧನರಾದರು. ನಿಂಗ ಕುಟುಂಬಸ್ಥರ ವಂಶ ವೃಕ್ಷದಲ್ಲಿ 27 ಜನರು ಇದ್ದಾರೆ. ಆದರೆ ಸಿದ್ದರಾಮಯ್ಯ ಬಾಮೈದ ನಿಂಗ ಅವರ ಕುಟುಂಬದ ದೇವರಾಜು ಎಂಬುವವನಿಂದ ಮಾತ್ರ ಸಹಿ ಹಾಕಿಸಿಕೊಂಡಿದ್ದಾರೆ. ಒಬ್ಬರಿಂದ ಮಾತ್ರ ಸಹಿ ಹಾಕಿಸಿಕೊಂಡು ರಿಜಿಸ್ಟರ್ ಮಾಡಿರುವುದು ನಿಯಮ ಬಾಹಿರ. 3.16 ಎಕರೆ ಜತೆಗೆ ಅಂದು ಬಡಾವಣೆಗೆ 462 ಎಕರೆ ಜಮೀನು ನಿಗದಿ ಮಾಡಲಾಗಿತ್ತು. ದೇವರಾಜು ಎಂಬಾತ ತನ್ನ ಕುಟುಂಬಸ್ಥರಿಂದ ಖಾಲಿ ಪತ್ರಕ್ಕೆ ಸಹಿ ಹಾಕಿಸಿಕೊಳ್ಳುತ್ತಾನೆ. 1998ರಲ್ಲಿ ಭೂಸ್ವಾಧೀನ ಮಾಡಕೊಳ್ಳಲಾಗಿತ್ತು. ಈ ವೇಳೆ ದೇವರಾಜು ಪರಿಹಾರ ತೆಗೆದುಕೊಂಡಿದ್ದಾರೆ. ಆಗ ಉಪಮುಖ್ಯಮಂತ್ರಿ ಆಗಿದ್ದು ಸಿದ್ದರಾಮಯ್ಯ ಎಂದು ವಿವರಿಸಿದರು.
2001ರಲ್ಲಿ 11.58 ಕೋಟಿ ರೂ ವೆಚ್ಚದಲ್ಲಿ ಬಡಾವಣೆ ಅಭಿವೃದ್ಧಿಗೆ ಹಣ ಬಿಡುಗಡೆ ಆಗಿತ್ತು. ಅದರಂತೆ ಮುಡಾದಿಂದ ಬಡಾವಣೆಯಾಗಿ ಅಭಿವೃದ್ಧಿ ಮಾಡಿದ್ದಾರೆ. 2004ರಲ್ಲಿ 3.16 ಎಕರೆ ಜಮೀನನ್ನು ಸಿದ್ದರಾಮಯ್ಯ ಅವರ ಬಾಮೈದ ಅಕ್ರಮವಾಗಿ ಕ್ರಯ ಮಾಡಿಕೊಳ್ಳುತ್ತಾರೆ. 1998ರಲ್ಲಿ ಸ್ವಾಧೀನವಾದ ಜಮೀನನ್ನ 2004ರಲ್ಲಿ ಕ್ರಯಕ್ಕೆ ಹೇಗೆ ಮಾಡಿಕೊಂಡರು?. 2005ರಿಂದ ವ್ಯವಸಾಯ ಭೂಮಿಯಿಂದ ನಿವೇಶನದ ಭೂಮಿಯಾಗಿ ಪರಿವರ್ತನೆ ಮಾಡಿಕೊಟ್ಟಿದ್ದಾರೆ. 2001ರಲ್ಲೇ ಬಡಾವಣೆ ಕೆಲಸ ನಡೆಯುತ್ತಿದೆ. ಆದರೆ 2005 ರಲ್ಲಿ ಪರಿವರ್ತನೆ ಮಾಡಿಕೊಡುತ್ತಾರೆ. ಡಿಸಿ, ತಹಸೀಲ್ದಾರ್ ಎಲ್ಲರೂ ಸ್ಥಳ ಪರಿಶೀಲನೆ ಮಾಡಿದ್ದೇವೆ ಎಂದಿದ್ದಾರೆ. ಈ ನಡುವೆ ಗಮನಾರ್ಹ ವಿಷಯವೆಂದರೆ 2005ರಲ್ಲಿ ಮುಡಾ ಆಯುಕ್ತರು ಯಾವುದೇ ಕಟ್ಟಡ ಕಟ್ಟುವಂತಿಲ್ಲ ಎಂದು ಆದೇಶ ಮಾಡಿದ್ದಾರೆ. ಆಗಿನ ಡಿಸಿಗೆ ಇದ್ಯಾವುದು ಸಹ ನೋಡದೆ ಕುರುಡರಂತೆ ಭೂ ಪರಿವರ್ತನೆ ಮಾಡಿಕೊಟ್ಟಿದ್ದಾರೆ. ಅಲ್ಲದೆ 2004ರಲ್ಲಿ ಸಿದ್ದರಾಮಯ್ಯ ಬಾಮೈದುನ ಕ್ರಯಕ್ಕೆ ತೆಗೆದುಕೊಳ್ಳುವ ಮುನ್ನವೇ ಮುಡಾ 12 ಸೈಟ್‌ಗಳನ್ನು ಅಲರ್ಟ್ ಮಾಡಲಾಗಿದೆ ಎಂದು ಆರೋಪಿಸಿದರು.
ಹಾಗಿದ್ದರೆ 12 ನಿವೇಶನವನ್ನು ಅಲರ್ಟ್ ಮಾಡಿದ್ದ ಜಮೀನನ್ನ ಹೇಗೆ ಕ್ರಯ ಮಾಡಿಸಿಕೊಳ್ಳಲು ಸಾಧ್ಯ?. ಇಷ್ಟೆಲ್ಲ ಸಾಮಾನ್ಯ ಮನುಷ್ಯ ಮಾಡಲು ಸಾಧ್ಯವಾಗಲ್ಲ. 2010ರಲ್ಲಿ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರಿಗೆ ಸಹೋದರ ಅರಿಸಿನ ಮತ್ತು ಕುಂಕುಮಕ್ಕೆ 3.16 ಎಕರೆ ಜಮೀನು ನೀಡಿದ್ದಾರೆ. ಇನ್ನು 2014ರಲ್ಲಿ ಪಾರ್ವತಿ ಅವರು ಮುಡಾಗೆ ಪತ್ರ ಬರೆದು, ನನಗೆ ಬಂದ ಜಮೀನಿನಲ್ಲಿ ನೀವು ಬಡಾವಣೆ ಮಾಡಿದ್ದೀರಾ. ಬದಲಿ ಜಾಗವನ್ನು ನನಗೆ ನೀಡಿ ಎಂದು ಪತ್ರದಲ್ಲಿ ಉಲ್ಲೇಖ ಮಾಡ್ತಾರೆ. 2017ರಲ್ಲಿ ಮುಡಾದಲ್ಲಿ ಪಾರ್ವತಿ ಅವರ ಜಮೀನಿನ ಚರ್ಚೆ ಬಂತು. ಆಗ 50:50 ಚರ್ಚೆಯಲ್ಲಿ ಬದಲಿ ನಿವೇಶನ ಕೊಡಲು ನಿರ್ಧಾರ ಮಾಡಿದ್ದಾರೆ. ಇದಾದ ನಂತರ ಪಾರ್ವತಿ ಅವರಿಗೆ ಸೈಟ್ ನೀಡಲಾಗಿದೆ ಎಂದರು.
ಮುಡಾ ಪ್ರಕರಣದ ಪ್ರತಿ ಹಂತದಲ್ಲಿ ಸ್ವಜನ ಪಕ್ಷಪಾತ, ಭ್ರಷ್ಟಚಾರ ಎದ್ದು ಕಾಣುತ್ತಿದೆ. ಅಕ್ವೇರ್ ಆಗಿರುವ ಜಮೀನೆ ಬೇರೆ. ಇವರು 50:50 ಯಲ್ಲಿ ನಿವೇಶನ ಪಡೆದಿದ್ದೆ ಬೇರೆ ಕಡೆ. ಅದಕ್ಕೆ ಒತ್ತಡ ಹಾಕಿದವರು ಯಾರು?. ಸೈಟ್ ಇಲ್ಲ ಎಂದರೇ ಬೇರೆ ಕಡೆ ಸೈಟ್ ಕೊಡುವುದು ಸರಿ. ಈಗಲೂ ಸೈಟ್ ಖಾಲಿಯಿದ್ದರೂ ಏಕೆ ಕೊಡಲಿಲ್ಲ. ಮುಡಾ ಎಂದರೇ ಕಳ್ಳ ಕಾಕರ ಅಡ್ಡ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಹಾಗಿದ್ದರೆ ಅಲ್ಲಿ ಏಕೆ ನಿವೇಶನ ಖರೀದಿ ಮಾಡಿದ್ದೀರಾ. ಸಿಎಂ ಜಮೀನಿನ ಪಕ್ಕದ 4 ಎಕರೆ ಜಮೀನು ಅಕ್ವೇರ್ ಆಗಿದೆ. ಅದರಲ್ಲಿ 10 ಗುಂಟೆ ಮಾತ್ರ ಡಿನೋಟಿಫಿಕೇಷನ್ ಮಾಡಿದ್ದಾರೆ. 526 ಸೈಟ್ ಖಾಲಿ ಇದೆ, ಅಲ್ಲಿಯೇ ಕೊಡಬಹುದಿತ್ತಲ್ಲ. ಲಾಯರ್ ಓದಿದ್ದೀನಿ ಎನ್ನುತ್ತಾರೆ. ಎರಡು ವರ್ಷ ಪಾಠ ಮಾಡಿದ್ದೀನಿ ಎನ್ನುತ್ತಾರೆ. ಬೇರೆ ಕಡೆ ಖಾಲಿ ಇದೆ ಎಂದು ಸೈಟ್ ಬರೆಸಿಕೊಳ್ಳುತ್ತೀರಾ ಎಂದು ಪ್ರಶ್ನೆಗಳ ಸುರಿಮಳೆಗೈದ ಅಶೋಕ್, ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು. ಮುಡಾ ಪ್ರಕರಣವನ್ನ ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದರು.
ಮಾಜಿ ಸಚಿವರಾದ ಡಾ.ಸಿ.ಎನ್.ಅಶ್ವಥ್‌ನಾರಾಯಣ, ಕೆ.ಗೋಪಾಲಯ್ಯ, ಶಾಸಕ ಅರವಿಂದ ಬೆಲ್ಲದ್, ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಎಂಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಸಿ.ಪಿ.ಉಮೇಶ್, ಮಾಜಿ ಎಂಎಲ್‌ಸಿ ರಮೇಶ್‌ಗೌಡ, ಬಿಜೆಪಿ ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್ ಇದ್ದರು.