ಎರಡಕ್ಕಿಂತ ಹೆಚ್ಚು ಕಡೆ ಸ್ಪರ್ಧೆಗಿಲ್ಲ ಅವಕಾಶ

11-RAICHUR-1
Published on

ರಾಯಚೂರು: ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸುವಾಗ ಬ್ಯಾಂಕ್ ಖಾತೆ, ಜಾತಿ ಪ್ರಮಾಣ ಸೇರಿ ಇತರ ಎಲ್ಲ ದಾಖಲೆಗಳನ್ನು ಪರಿಶೀಲಿಸಿ ಸಲ್ಲಿಸಬೇಕು ಎಂದು ರಾಯಚೂರು ಗ್ರಾಮೀಣ ವಿಧಾನಸಭೆ ಕ್ಷೇತ್ರದ ಚುನಾವಣಾಧಿಕಾರಿ ಶಶಿಕಾಂತ ಶಿವಪುರೆ ಹೇಳಿದರು.

ನಗರದ ತಹಸಿಲ್ ಕಚೇರಿಯಲ್ಲಿ ಆಯೋಜಿಸಿದ್ದ ರಾಜಕೀಯ ಪಕ್ಷಗಳ ಪ್ರಮುಖರ ಸಭೆಯಲ್ಲಿ ಮಂಗಳವಾರ ಮಾತನಾಡಿದರು. ನಾಮಪತ್ರ ಸಲ್ಲಿಸಲು ಬಿ.ಫಾರ್ಮ್ ಪ್ರತಿ ಸಲ್ಲಿಸುವುದರೊಂದಿಗೆ ನಾಮಪತ್ರವನ್ನು ಸಂಪೂರ್ಣ ಮಾಡಿರಬೇಕು. ಒಬ್ಬ ಅಭ್ಯರ್ಥಿ ಗರಿಷ್ಠ 4 ನಾಮಪತ್ರ ಸಲ್ಲಿಸಬಹುದಾಗಿದೆ. ಸಹಿ ಮಾಡಿರದ ನಾಮಪತ್ರ ತಿರಸ್ಕರಿಸಲಾಗುವುದು ಎಂದರು.

ಎರಡಕ್ಕಿಂತ ಹೆಚ್ಚು ಕಡೆ ಸ್ಪರ್ಧೆ ಮಾಡುವಂತಿಲ್ಲ. ನಮೂನೆ 26ರಲ್ಲಿ ಶಪಥ ಪತ್ರ ಸಲ್ಲಿಸಬೇಕು. 20ರೂ. ಬಾಂಡ್‌ನಲ್ಲಿ ಒಂದು ಮೂಲಪ್ರತಿ 3 ಜೆರಾಕ್ಸ್ ಪ್ರತಿ ಸಲ್ಲಿಸಬೇಕು. ನೋಟರಿ ಮೂಲಕ ಎಲ್ಲ ಪುಟಗಳನ್ನು ದೃಢೀಕರಿಸಬೇಕು. ಅಭ್ಯರ್ಥಿ ಹೆಸರಿನಲ್ಲಿರುವ ಸಾಮಾಜಿಕ ಜಾಲತಾಣದ ವಿವರ, ಮೊಬೈಲ್ ಸಂಖ್ಯೆ, ವಿಳಾಸದ ಮಾಹಿತಿ ನೀಡಬೇಕು.

ನಾಮಪತ್ರ ಸಲ್ಲಿಸುವ ಕೊನೆಯ ದಿನದಂದು ಮಧ್ಯಾಹ್ನ 3ರೊಳಗೆ ಎ ಮತ್ತು ಬಿ ನಮೂನೆ ಅರ್ಜಿ ಸಲ್ಲಿಸಬೇಕು. ಅಭ್ಯರ್ಥಿಗಳು ಚುನಾವಣೆ ವೆಚ್ಚಕ್ಕಾಗಿ ತೆರೆದಿರುವ ಬ್ಯಾಂಕ್‌ಖಾತೆ, ಪಾಸ್‌ಬುಕ್ ಜೆರಾಕ್ಸ್ ಪ್ರತಿ ಸಲ್ಲಿಸಬೇಕು. ನಾಮಪತ್ರ ಸಲ್ಲಿಸುವ ಒಂದು ದಿನ ಮುಂಚಿತವಾಗಿ ಬ್ಯಾಂಕ್ ಖಾತೆ ತೆರೆದಿರಬೇಕು. ಚುನಾವಣೆ ಏಜೆಂಟರನ್ನು ನೇಮಕ ಮಾಡುವ ನಮೂನೆ 8 ಅನ್ನು ಭರ್ತಿ ಮಾಡಬೇಕು. ಅಭ್ಯರ್ಥಿ ಬಾಡಿಗೆ ಮನೆಯಲ್ಲಿದ್ದರೆ ವಿದ್ಯುತ್ ಹಾಗೂ ಇತರ ಬೇಬಾಕಿ ಪ್ರಮಾಣಪತ್ರ ಸಲ್ಲಿಸಬೇಕು ಎಂದು ಶಶಿಕಾಂತ ಶಿವಪುರೆ ತಿಳಿಸಿದರು.

ನಗರ ವಿಧಾಸಭಾ ಕ್ಷೇತ್ರದ ಚುನಾವಣಾಧಿಕಾರಿ ರಜನಿಕಾಂತ್ ಚವ್ಹಾಣ್ ಮಾತನಾಡಿ, ಸರ್ಕಾರಿ ರಜೆ ಹೊರತುಪಡಿಸಿ ಇನ್ನುಳಿದ ನಿಗದಿತ ದಿನಗಳಲ್ಲಿ ನಾಮಪತ್ರ ಸಲ್ಲಿಸಬಹುದಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net