ಬೆಂಗಳೂರು ಉತ್ತರ, ವಲಸಿಗರ ಮೌನದಾಟ: ಟಕ್ಕರ್ ಕೊಡಲು ಬಿಜೆಪಿ ಸಿದ್ಧತೆ ಜೆಡಿಎಸ್​ಗಿಲ್ಲ ಬಲ..

Assembly F
Published on
ಬೆಂಗಳೂರು ಉತ್ತರ ವ್ಯಾಪ್ತಿಯಲ್ಲಿ 2023ರ ವಿಧಾನಸಭಾ ಚುನಾವಣೆ ಗುಂಗು ಶುರುವಾಗಿ ಹಲವು ತಿಂಗಳೇ ಸರಿದಿವೆ. ಸ್ಪರ್ಧಾಕಾಂಕ್ಷಿಗಳು ಹೆಜ್ಜೆಯ ಸಪ್ಪಳವನ್ನು ಜನರಿಗೆ ಕೇಳಿಸಲು ಶತಪಥ ಸುತ್ತುತ್ತಿದ್ದರೆ, ಹಾಲಿ ಶಾಸಕರು ಇನ್ನೊಂದು ಅವಧಿಗೆ ಆಯ್ಕೆಗಾಗಿ ಜನರ ಮನದಲ್ಲಿಳಿಯಲು ಕಸರತ್ತು ಆರಂಭಿಸಿದ್ದಾರೆ. ಒಟ್ಟಾರೆ ಮತದಾರನ ಕಿವಿಯಲ್ಲಿ ರಾಜಕೀಯ ಚರ್ಚೆ ಗುಂಯ್ಗುಟ್ಟಲು ಶುರುವಾಗಿದೆ. ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳ ಪೈಕಿ ಬೆಂಗಳೂರು ಉತ್ತರ ಲೋಕಸಭಾ ವ್ಯಾಪ್ತಿಯಲ್ಲಿ ಎಂಟು ಕ್ಷೇತ್ರಗಳಿವೆ. ಕೆ.ಆರ್.ಪುರ, ಯಶವಂತಪುರ, ಬ್ಯಾಟರಾಯನಪುರ, ದಾಸರಹಳ್ಳಿ, ಮಹಾಲಕ್ಷ್ಮೀ ಲೇಔಟ್, ಮಲ್ಲೇಶ್ವರ, ಹೆಬ್ಬಾಳ, ಪುಲಕೇಶಿನಗರ ಕ್ಷೇತ್ರಗಳ ಸದ್ಯದ ರಾಜಕೀಯ ಚಿತ್ರಣ ಗಮನಿಸಿದರೆ, ವಲಸಿಗರ ನಡೆ ಏನಾಗುತ್ತದೆಂಬುದು ಕುತೂಹಲ. ಪಕ್ಷದ ಹೊರತು ವೈಯಕ್ತಿಕವಾಗಿ ಗೆಲ್ಲುವ ಛಾತಿ ಇರುವ ಮತ್ತು ಗೆದ್ದು ತೋರಿಸಿರುವ ಉದಾಹರಣೆ ಎದುರಿಗಿದ್ದು, ಇವರ ನಡೆ ಮೇಲೆಯೇ ಇಡೀ ಕಣದ ಚಿತ್ರಣವೇ ಬದಲಾಗಬಹುದು.

ವಿಶ್ಲೇಷಣೆ: ಶ್ರೀಕಾಂತ್ ಶೇಷಾದ್ರಿ ಬೆಂಗಳೂರು

ಎಸ್​ಟಿಎಸ್​ಗಿಲ್ಲ ಗಟ್ಟಿ ಸರಿಸಾಟಿ

ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಗಟ್ಟಿಯಾಗಿ ಬೇರೂರಿದಂತೆ ಕಾಣಿಸುವ ಯಶವಂತಪುರ ಕ್ಷೇತ್ರದಲ್ಲಿ ಎದುರಾಳಿಗಳು ರಾಜಕೀಯ ಲೆಕ್ಕಾಚಾರದಲ್ಲಿ ಕುಬ್ಜವಾಗಿಯೇ ಕಾಣುತ್ತಿದ್ದಾರೆ. ಸೋಮಶೇಖರ್ ವಾಪಸ್ ಬರಬೇಕೆಂದು ಕಾಂಗ್ರೆಸ್ ಬಯಸುತ್ತಿದೆ. ಬರದೇ ಹೋದಲ್ಲಿ ಬೆಂಗಳೂರು ಉತ್ತರ ಕಾಂಗ್ರೆಸ್ ಅಧ್ಯಕ್ಷ ರಾಜ್​ಕುಮಾರ್​ರನ್ನು ಕಣಕ್ಕೆ ಇಳಿಸಲಿದೆ. ಬಿಜೆಪಿ ವಿಚಾರಕ್ಕೆ ಬಂದರೆ ಸೋಮಶೇಖರ್​ಗೆ ಟಿಕೆಟ್ ಖಚಿತ, ಒಂದೊಮ್ಮೆ ಅವರು ಬಿಟ್ಟು ಹೋದರೆ ವೈ. ನಾರಾಯಣ ಸ್ವಾಮಿ ಅವರನ್ನು ಕಣಕ್ಕಿಳಿಸಬಹುದೆಂಬ ಮಾತಿದೆ. ಜೆಡಿಎಸ್​ನ ಜವರಾಯಿಗೌಡ ಸೋತು ಸುಣ್ಣವಾಗಿದ್ದು, ಹೊಸಬರ ಹುಡುಕಾಟ ನಡೆಯುತ್ತಿದೆ.

ಅಳುಕಲ್ಲಿ ಕೃಷ್ಣಬೈರೇಗೌಡ

ಬ್ಯಾಟರಾಯನಪುರ ಕ್ಷೇತ್ರದಲ್ಲಿ ಕಳೆದ ಬಾರಿ ಅತೀ ಕಡಿಮೆ ಅಂತರದಲ್ಲಿ ಗೆಲುವಿನ ದಡ ಸೇರಿದ್ದ ಕೃಷ್ಣಬೈರೇಗೌಡರಿಗೆ ಈ ಬಾರಿ ಚುನಾವಣೆ ಅಷ್ಟು ಸಲೀಸಲ್ಲ ಎನ್ನಿಸಲು ಆರಂಭವಾಗಿದೆ. ಕೋವಿಡ್ ಸಂದರ್ಭದಲ್ಲಿ ಮಾಡಿದ ಕೆಲಸ, ಅಭಿವೃದ್ಧಿ ಕಾಮಗಾರಿ, ಕ್ಷೇತ್ರದ ಅನೇಕ ಸಮಸ್ಯೆಗಳಿಗೆ ಪರಿಹಾರ ನೀಡಿದ್ದರಿಂದ ಜನ ತಮ್ಮನ್ನು ಕೈ ಬಿಡುವುದಿಲ್ಲ ಎಂದು ಅವರು ನಂಬಿದ್ದಾರೆ. ಕಾಂಗ್ರೆಸ್​ನಿಂದ ಅವರೇ ಮುಂದಿನ ಬಾರಿಯೂ ಅಭ್ಯರ್ಥಿ. ಎಬಿವಿಪಿ ಸಂಘಟಕರಾಗಿದ್ದ ತಮ್ಮೇಶ ಗೌಡ ಅಥವಾ ಕಳೆದ ಬಾರಿಯ ಅಭ್ಯರ್ಥಿ ರವಿ ಬಿಜೆಪಿಯಿಂದ ಕಣಕ್ಕಿಳಿಯುವುದು ಖಚಿತ. ಬಿಜೆಪಿಯಿಂದ ಇನ್ನೂ 2-3 ಆಕಾಂಕ್ಷಿಗಳು ತೆರೆಮರೆ ಪ್ರಯತ್ನ ನಡೆಸಿದ್ದಾರೆ. ಆದರೆ, ತಮ್ಮೇಶ್​ಗೌಡ ಅಬ್ಬರಕ್ಕೆ ಕಾಂಗ್ರೆಸ್ ಈಗಿನಿಂದಲೇ ಬೆವರು ಹರಿಸುತ್ತಿದೆ. ಕೋವಿಡ್ ಸಂದರ್ಭದಲ್ಲಿ ಜನಸೇವೆಗೆ ತೊಡಗಿಕೊಂಡಿದ್ದ ತಮ್ಮೇಶ್​ಗೌಡ ಈಗ ಕ್ಷೇತ್ರದ ಮೂಲೆ ಮೂಲೆಯಲ್ಲೂ ಜಾಲ ಗಟ್ಟಿಮಾಡಿಕೊಳ್ಳುತ್ತಾ ಬಹುದೂರ ಸಾಗಿ ಬಂದಿದ್ದಾರೆ. ಜೆಡಿಎಸ್ ಕಡೆಯಿಂದ ಸ್ಪಷ್ಟತೆ ಇಲ್ಲ.

ದಾಸರಹಳ್ಳಿ ಮಂಜುನಾಥ್​ಗೆ ಸಲೀಸಿಲ್ಲ

ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಆಯ್ಕೆಯಾಗಿದ್ದ ಜೆಡಿಎಸ್​ನ ಮಂಜುನಾಥ್ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿಸಿ ಜನರೊಟ್ಟಿಗೆ ಕಾಣಿಸಿಕೊಂಡಿದ್ದಾರೆ. ಚುನಾವಣೆ ಹೊತ್ತಲ್ಲಿ ಆಗುವ ಕೊನೆಯ ಹಂತದ ಬದಲಾವಣೆ, ಅಲೆಗಳು ಏನೂ ಆಗಿಬಿಡಬಹುದೆಂಬ ಚಿತ್ರಣ ಕಾಣಿಸುತ್ತಿದೆ. ಬಿಜೆಪಿಯಿಂದ ಮುನಿರಾಜು ಹೆಸರಿದ್ದರೂ, ಅಭ್ಯರ್ಥಿ ಬದಲಾಗಬಹುದೆಂಬ ಮಾತೂ ಇದೆ. ಕಳೆದ ಬಾರಿ ಚುನಾವಣೆ ಸೋತ ಬಳಿಕ ಆಗೊಮ್ಮೆ ಈಗೊಮ್ಮೆ ಕಾಣಿಸಿಕೊಳ್ಳುವ ಅವರು ಜನರೊಟ್ಟಿಗೆ ನಿಂತಿಲ್ಲ ಎಂಬ ಮಾತುಗಳಿವೆ. ಆದರೂ ಜೆಡಿಎಸ್ ಬುಡ ಅಲ್ಲಾಡುತ್ತಿದೆ. ಕಾಂಗ್ರೆಸ್​ನಿಂದ ಚನ್ನಪಟ್ಟಣದ ಗೀತಾ ಶಿವರಾಮ್ ಜೋರಾಗಿಯೇ ತಾಲೀಮು ನಡೆಸಿದ್ದಾರೆ. ಕೃಷ್ಣಮೂರ್ತಿ, ನಾಗಭೂಷಣ, ನಾಗಲಕ್ಷಿ್ಮೕ ಚೌಧರಿ ಕೂಡ ಆಕಾಂಕ್ಷಿತರು.

ಟರ್ನಿಂಗ್ ಪಾಯಿಂಟ್

ಯಶವಂತಪುರದಲ್ಲಿ ಸೋಮಶೇಖರ್, ಮಹಾಲಕ್ಷಿ್ಮೕ ಲೇಔಟ್ ಗೋಪಾಲಯ್ಯ, ಕೆ.ಆರ್. ಪುರದಲ್ಲಿ ಬೈರತಿ ಬಸವರಾಜ್ ನಡೆ ಕುತೂಹಲಕಾರಿ ಮತ್ತು ನಿಗೂಢ. ಇವರ ನಡೆ ಮೇಲೆಯೇ ರಾಜಕೀಯ ಪಕ್ಷಗಳ ತೀರ್ವನಗಳು ಕಡೇ ಕ್ಷಣದಲ್ಲಿ ಬದಲಾಗಬಹುದು. ಅದೇ ರೀತಿ ಪುಲಿಕೇಶಿ ನಗರದಲ್ಲಿ ಕಾಂಗ್ರೆಸ್​ನೊಳಗಿನ ಪೈಪೋಟಿ ಬಂಡಾಯ ಏಳಲು ಕಾರಣವಾಗಬಹುದು.

ಕ್ಷೇತ್ರಗಳಲ್ಲಿ ಹಾಲಿ ಬಲಾಬಲ

2018ರ ಚುನಾವಣೆಯಲ್ಲಿ ಎಂಟು ಕ್ಷೇತ್ರಗಳ ಪೈಕಿ ಐದು ಕಡೆ ಕಾಂಗ್ರೆಸ್, ಒಂದರಲ್ಲಿ ಬಿಜೆಪಿ, ಎರಡರಲ್ಲಿ ಜೆಡಿಎಸ್ ಗೆಲುವು ಸಾಧಿಸಿತ್ತು. ಆದರೆ, ಮೈತ್ರಿ ಸರ್ಕಾರದ ಪತನಕ್ಕೆ ಕಾರಣರಾದ ನಾಲ್ವರು ಇಲ್ಲಿಯವರೇ ಎಂಬುದು ವಿಶೇಷ. ಹೀಗಾಗಿ ಪ್ರಸ್ತುತ ಎಂಟರಲ್ಲಿ 4 ಕಡೆ ಬಿಜೆಪಿ ಶಾಸಕರಿದ್ದರೆ, ಕಾಂಗ್ರೆಸ್​ನ ಮೂವರು ಮತ್ತು ಜೆಡಿಎಸ್​ನ ಒಬ್ಬರಿದ್ದಾರೆ.

ಅಖಂಡಗೆ ಸವಾಲು

ಪುಲಿಕೇಶಿ ನಗರದ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಕಳೆದ ಚುನಾವಣೆಯಲ್ಲಿ ಗೆದ್ದಿದ್ದು 80 ಸಾವಿರಕ್ಕೂ ಅಧಿಕ ಮತಗಳಿಂದ. ಆದರೆ ಸಿದ್ದರಾಮಯ್ಯ ಬಣದಲ್ಲಿ ಗುರುತಿಸಿಕೊಂಡ ಕಾರಣಕ್ಕೆ ಮುಂದಿನ ಚುನಾವಣೆಯಲ್ಲಿ ಅವರು ಟಿಕೆಟ್​ಗಾಗಿ ಸ್ವಪಕ್ಷೀಯರಿಂದಲೇ ಸಾಕಷ್ಟು ಪೈಪೋಟಿ ಎದುರಿಸುವಂತಾಗಿದೆ. ಟಿಕೆಟ್​ಗಾಗಿ ಮಾಜಿ ಮೇಯರ್ ಸಂಪತ್ ರಾಜ್ ಪ್ರಯತ್ನ ಅಷ್ಟಿಷ್ಟಲ್ಲ. ಜೆಡಿಎಸ್​ನಿಂದ ಆಗಮಿಸಿದ ಪ್ರಸನ್ನಕುಮಾರ್ ಕೂಡ ಆಕಾಂಕ್ಷಿಗಳೇ. ಅಭ್ಯರ್ಥಿಗೆ ಬಿಜೆಪಿ ಹುಡುಕಾಡ ಬೇಕಿದೆ. ಎಸ್​ಡಿಪಿಐ ಪ್ರವೇಶ ಮತ್ತು ಕೈ ಬಂಡಾಯ ಲಾಭ ಮಾಡಿಕೊಂಡು ಜೆಡಿಎಸ್ ಉರುಳಿಸುವ ಅಲ್ಪಸಂಖ್ಯಾತ ಅಭ್ಯರ್ಥಿ ಎಂಬ ದಾಳ ಕೆಲಸ ಮಾಡಿದರೆ ಕಣ ರೋಚಕವಾಗಲಿದೆ. ಜಮೀರ್, ಸಿದ್ದರಾಮಯ್ಯ ಬಲ ಇರುವವರೆಗೂ ಅಖಂಡಗೆ ಆತಂಕ ಇರದು.

ಬೈರತಿ ಬಸವರಾಜಗೆ ನಂದೀಶ್ ರೆಡ್ಡಿ ತಲೆಬಿಸಿ

ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯರ ಪರಮಾಪ್ತರಾಗಿದ್ದರೂ ಮೈತ್ರಿ ಸರ್ಕಾರದ ಪತನಕ್ಕೆ ಕಾರಣರಾದವರಲ್ಲಿ ಒಬ್ಬರಾದ ಬೈರತಿ ಬಸವರಾಜ್, ಕೆ.ಆರ್.ಪುರ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಆಯ್ಕೆಯಾದವರು. ಮುಂದಿನ ಬಾರಿ ಅವರೇ ಶಾಸಕರಾಗಬೇಕೆಂದು ಬಯಸಿದ್ದಾರೆ. ಬಿಜೆಪಿಯಿಂದ ನಂದೀಶ್ ರೆಡ್ಡಿ ಕೂಡ ಟಿಕೆಟ್ ಆಕಾಂಕ್ಷಿ. ಕಾಂಗ್ರೆಸ್ ಅಭ್ಯರ್ಥಿಯಾಗಿ ಬೈರತಿ ಪ್ರವೇಶವಾದ ಮೇಲೆ ಎರಡು ಬಾರಿ ಇವರು ಸೋತಿದ್ದು, ಒಂದು ವೇಳೆ ಬೈರತಿ ಮತ್ತೆ ವಲಸೆ ಹೊರಟರೆ ಇವರೇ ಬಿಜೆಪಿಯ ಪ್ರಬಲ ಅಭ್ಯರ್ಥಿ. ಹೀಗಾಗಿ ಬೈರತಿ ನಡೆ ಕಾದು ನೋಡುವಂತಾಗಿದೆ. ಕಳೆದ ಚುನಾವಣೆಯಲ್ಲಿ ಜೆಡಿಎಸ್​ನಿಂದ ಉದಯ್ ಕುಮಾರ್ ರೆಡ್ಡಿ, ಡಿ.ಎ.ಗೋಪಾಲ್ ಜೆಡಿಎಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು, ಈಗ ಅಷ್ಟಾಗಿ ಸಕ್ರಿಯತೆ ಕಾಣಿಸುತ್ತಿಲ್ಲ. ಕಾಂಗ್ರೆಸ್​ನಿಂದ ಪರಿಷತ್ ಮಾಜಿ ಸದಸ್ಯ ನಾರಾಯಣ ಸ್ವಾಮಿ ಹೆಸರು ಕೇಳಿಬರುತ್ತಿದೆ. ಎ.ಕೃಷ್ಣಪ್ಪ ಸಂಬಂಧಿ ಟಿ.ಕೆ. ಮೋಹನ್ ಬಾಬು ಹೆಸರೂ ಇದೆ. ಬಹು ಮುಖ್ಯವಾಗಿ ಬೈರತಿ ಬಸವರಾಜ್ ಪಕ್ಷಕ್ಕೆ ವಾಪಸಾಗಬಹುದೆಂದು ಕಾಂಗ್ರೆಸ್ ನಿರೀಕ್ಷೆ ಇಟ್ಟುಕೊಂಡಂತಿದೆ.

ಸುರೇಶ್​ಗೆ ‘ಕಟ್ಟಾ’ಮೀಠಾ

ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಶಾಸಕರಾದ ಕಾಂಗ್ರೆಸ್​ನ ಭೈರತಿ ಸುರೇಶ್​ಗೆ ತಕ್ಷಣಕ್ಕೆ ಯಾವುದೇ ಪ್ರಬಲ ಪ್ರತಿರೋಧ ಕಾಣಿಸುತ್ತಿಲ್ಲವಾದರೂ ಬಿಜೆಪಿ ಈ ಕ್ಷೇತ್ರ ಗೆಲ್ಲಲೇಬೇಕೆಂದು ಹಠಕಟ್ಟಿದ್ದು, ಪ್ರಬಲ ಅಭ್ಯರ್ಥಿಗಾಗಿ ಹುಡುಕಾಟದಲ್ಲೇ ಇದೆ. ಈ ಕ್ಷೇತ್ರದ ಹಳೆಯ ಹುಲಿ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಮತ್ತೆ ಟಿಕೆಟ್ ಆಕಾಂಕ್ಷಿ. ಅವರನ್ನು ಅಭ್ಯರ್ಥಿಯಾಗಿ ಒಪ್ಪಿಕೊಳ್ಳಲು ಪಕ್ಷದಲ್ಲಿ ಪೂರ್ಣ ಒಮ್ಮತವಿಲ್ಲ. ಒಳ್ಳೆಯ ಇಮೇಜ್ ಇರುವ ಹೊಸಬರನ್ನು ಕಣಕ್ಕಿಳಿಸಬಹುದೆಂಬ ಲೆಕ್ಕಾಚಾರವಿದೆ.

ಗಾಬರಿ ಬೀಳದ ಗೋಪಾಲಯ್ಯ

ಮಹಾಲಕ್ಷ್ಮೀ ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಶಾಸಕ, ಸಚಿವರೂ ಆಗಿರುವ ಗೋಪಾಲಯ್ಯ ಗಾಬರಿ ಬೀಳುವ ಸ್ಥಿತಿ ಏನೂ ಕಾಣಿಸುತ್ತಿಲ್ಲ. ಅವರ ಸೂಕ್ಷ್ಮ ಸಂವೇದನೆ ಕೆಲಸ ಪಕ್ಷವನ್ನು ಮೀರಿ ಕ್ಷೇತ್ರವನ್ನು ಹಿಡಿತದಲ್ಲಿ ಇಟ್ಟುಕೊಳ್ಳುವಂತೆ ಮಾಡಿದೆ. ಇವರನ್ನು ಸೆಳೆಯಬೇಕೆಂಬ ಆಸೆಯನ್ನು ಕಾಂಗ್ರೆಸ್ ಹೊಂದಿದೆ. ಆದರೆ ಗೋಪಾಲಯ್ಯಗೆ ಹೋಗುವ ಮನಸ್ಸಿಲ್ಲವಾದರೂ ಚುನಾವಣೆಗೆ ಮುನ್ನ ನಡೆಯುವ ರಾಜಕೀಯ ವಿದ್ಯಮಾನ ನೋಡಿಕೊಂಡು ಹೆಜ್ಜೆ ಇಡುವ ಸಾಧ್ಯತೆ ಹೆಚ್ಚು. ಒಂದು ವೇಳೆ ಅವರು ಬಿಜೆಪಿ ತೊರೆದರೆ ನೆ.ಲ.ನರೇಂದ್ರ ಬಾಬು ಅಭ್ಯರ್ಥಿಯಾಗುವರು. ಕಾಂಗ್ರೆಸ್ ಪರ್ಯಾಯ ಹುಡುಕಾಟದಲ್ಲೂ ಇದೆ.

ಅಶ್ವತ್ಥನಾರಾಯಣಗಿಲ್ಲ ಎದುರಾಳಿ

ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಸದ್ಯದ ಮಟ್ಟಿಗೆ ಡಾ. ಸಿ.ಎನ್. ಅಶ್ವತ್ಥನಾರಾಯಣ್ ಎದುರು ಪ್ರಬಲ ಅಭ್ಯರ್ಥಿ ಯಾರಾಗಬಹುದೆಂದು ಯೋಚನೆಯಲ್ಲಿಯೇ ಕಾಂಗ್ರೆಸ್ ಇದೆ. ಅನೂಪ್ ಅಯ್ಯಂಗಾರ್ ಎಂಬುವರು ತಾವೇ ಕಾಂಗ್ರೆಸ್ ಅಭ್ಯರ್ಥಿ ಎಂದು ತೊಡಗಿಕೊಂಡಿದ್ದಾರೆ. ಆದರೂ ಕಡೇ ಹಂತದಲ್ಲಿ ಅಚ್ಚರಿ ಹೆಸರು ತಂದು ಅಶ್ವತ್ಥನಾರಾಯಣ್​ಗೆ ನೀರು ಕುಡಿಸಲು ಡಿಕೆ ಬ್ರದರ್ಸ್ ಒಂದಷ್ಟು ಸರ್ಕಸ್ ಮಾಡಲೂಬಹುದು. ಬಲಿಜ ಸಮಾಜದ ಪ್ರಮುಖ ನಾಯಕ ಎಂ.ಆರ್.ಸೀತಾರಾಂಗೆ ಕಾಂಗ್ರೆಸ್ ಮುಂಚಿತವಾಗಿ ಟಿಕೆಟ್ ಖಾತ್ರಿ ಮಾಡಬಹುದು ಎಂಬ ಸುದ್ದಿ ಇದೆ. ಆದರೆ, ಚಿಕ್ಕಬಳ್ಳಾಪುರ ಕ್ಷೇತ್ರದ ಮೇಲೆ ಕಣ್ಣಿಟ್ಟ ಸೀತಾರಾಂ ಈ ಆಫರ್ ಒಪ್ಪುತ್ತಾರಾ? ಎಂಬುದು ಸದ್ಯದ ಕುತೂಹಲ. ಜೆಡಿಎಸ್ ಇಲ್ಲಿ ಸಾಂಕೇತಿಕ ಸ್ಪರ್ಧೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net